ವಕೀಲರ ರಕ್ಷಣೆಗೆ ಹೊಸ ಕಾಯ್ದೆ

KannadaprabhaNewsNetwork | Updated : Feb 17 2024, 01:16 PM IST

ಸಾರಾಂಶ

 ವಕೀಲರ ಮೇಲಿನ ದೌರ್ಜನ್ಯ ತಡೆಯಲು ಮೂರು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ಬೆಂಗಳೂರು: ರಾಜ್ಯದ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ತ್ವರಿತ ವಿಲೇವಾರಿಗೆ, ನ್ಯಾಯಾಲಯ ಕಟ್ಟಡ ನಿರ್ಮಾಣ, ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ, ರೈತರು ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳಿಗೆ ನ್ಯಾಯ ಒದಗಿಸಲು ಮತ್ತು ವಕೀಲರ ಮೇಲಿನ ದೌರ್ಜನ್ಯ ತಡೆಯಲು ಮೂರು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ರಾಜ್ಯದಲ್ಲಿ ವಿವಿಧ ನ್ಯಾಯಾಲಯಗಳ ಕಟ್ಟಡಗಳ ನಿರ್ಮಾಣ ಹಾಗೂ ಮೂಲ ಸೌಕರ್ಯ ಕಲ್ಪಿಸಲು 175 ಕೋಟಿ ರು. ಅನುದಾನ ನೀಡಲಾಗಿದೆ.

ವಿರಾಜಪೇಟೆಯಲ್ಲಿ 12 ಕೋಟಿ ರು. ವೆಚ್ಚದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಮತ್ತು ಮೈಸೂರಿನ ವಕೀಲರ ಭವನ ನಿರ್ಮಾಣವನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಕೋರ್ಟ್‌ ಕಲಾಪ ನೇರ ಪ್ರಸಾರ: ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮಾಡಲು ಮತ್ತು ನ್ಯಾಯಾಲಯಗಳ ಆಡಳಿತ ವ್ಯವಸ್ಥೆಯನ್ನು ಆಧುನೀಕರಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 180 ಕೋಟಿ ರು. ಅನ್ನು ಸರ್ಕಾರ ಒದಗಿಸಿದೆ.

ತ್ವರಿತ ನ್ಯಾಯಕ್ಕೆ ಕಾಯ್ದೆ: ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮುಂದಿನ ಸರ್ಕಾರಿ ವ್ಯಾಜ್ಯಗಳ ಸಮರ್ಥ ಹಾಗೂ ಜವಾಬ್ದಾರಿಯಿಂದ ನಿರ್ವಹಿಸಲು ಅನುಕೂಲವಾಗುವಂತೆ ‘ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣೆ ಅಧಿನಿಯಮ-2023’ ಅನ್ನು ಜಾರಿಗೆ ತರಲಾಗಿದೆ. 

ರೈತರು ಮತ್ತು ಆರ್ಥಿಕವಾಗಿ ದುರ್ಬಲ ವ್ಯಕ್ತಿಗಳಿಗೆ ತ್ವರಿತ ನ್ಯಾಯ ಒದಗಿಸಲು ‘ಸಿವಿಲ್ ಪ್ರಕ್ರಿಯೆ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2023’ ಅನ್ನು ಜಾರಿಗೊಳಿಸಲು, ಹೈಕೋರ್ಟ್‌ ಹಾಗೂ ಸಿವಿಲ್‌ ಕೋರ್ಟ್‌ಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ‘ಕರ್ನಾಟಕ ಉಚ್ಚ ನ್ಯಾಯಾಲಯ ಕಾಯ್ದೆ ಮತ್ತು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ’ಗೆ ತಿದ್ದುಪಡಿ ತರಲು ಕ್ರಮ ವಹಿಸಲಾಗಿದೆ.

ವಕೀಲರಿಗೆ ರಕ್ಷಣೆ: ವಕೀಲರ ಬಹುದಿನಗಳ ಬೇಡಿಕೆಯಾದ ವಕೀಲರ ಮೇಲಿನ ಹಿಂಸೆ ತಡೆಯಲು ಮತ್ತು ನಿರ್ಭೀತರಾಗಿ ಕರ್ತವ್ಯ ನಿರ್ವಹಿಸಲು ಅನುವಾಗುವಂತೆ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ-2023’ ಅನ್ನು ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ.

ರಾಜ್ಯದಲ್ಲಿ 1.30 ಲಕ್ಷ ವಕೀಲರಿದ್ದು, 193 ವಕೀಲರ ಸಂಘಗಳಿವೆ. ರಾಜ್ಯದ ಪ್ರತಿಬಜೆಟ್‌ನಲ್ಲಿ ವಕೀಲರ ಪರಿಷತ್‌ಗೆ 5 ಕೋಟಿ ಅನುದಾನ ನೀಡಲಾಗುತ್ತಿತ್ತು. 

ಆದರೆ, ಮೂಲತಃ ವಕೀಲರಾಗಿರುವ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಬಜೆಟ್‌ನಲ್ಲಿ ವಕೀಲ ಸಮುದಾಯಕ್ಕೆ ನಯಾ ಪೈಸೆ ಅನುದಾನ ನೀಡದಿರುವುದು ನಿರಾಶದಾಕವಾಗಿದೆ. ಮತ್ತೊಂದೆಡೆ 1.30 ಲಕ್ಷ ವಕೀಲರಿಗೆ ವಿಮಾ ಸೌಲಭ್ಯ ಕಲ್ಪಿಸುವ ಭರವಸೆಯನ್ನೂ ಈಡೇರಿಸಿಲ್ಲ.

Share this article