ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪುರಸಭೆ ಅಧಿಕಾರಿಗಳು ಪುರಸಭೆ ಆದಾಯ ಹಾಗೂ ವೆಚ್ಚಗಳ ಕುರಿತಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಪುರಸಭೆಗೆ ಸೇರಿದ ಆಸ್ತಿ, ಅಂಗಡಿ ಮಳಿಗೆ ಸೇರಿದಂತೆ ಇತರೆ ತೆರಿಗೆ ಶುಲ್ಕಗಳಿಂದ ಸುಮಾರು ₹5 ಕೋಟಿಗೂ ಅಧಿಕ ಆದಾಯ ಬರುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇತರೆ ಅನುದಾನಗಳು ₹11 ಕೋಟಿಗೂ ಹೆಚ್ಚು ಸಂಗ್ರಹಣವಾಗುತ್ತಿದೆ.ಈ ಎಲ್ಲಾ ಆದಾಯ ಸೇರಿ ಒಟ್ಟು ₹15 ಕೋಟಿಗೂ ಹೆಚ್ಚು ಆದಾಯ ಪುರಸಭೆಗೆ ಬರುತ್ತಿದೆ. ಇದರಲ್ಲಿ ಕಚೇರಿ ಸಿಬ್ಬಂದಿಯ ವೇತನ ಹಾಗೂ ಪುರಸಭೆ ವ್ಯಾಪ್ತಿಯ ಮೂಲ ಸೌಕರ್ಯಗಳಿಗೆ ತಗುಲುವ ವೆಚ್ಚ ₹10 ಕೋಟಿಗೂ ಮಿಗಿಲಾಗಿದೆ.
ಇನ್ನು ಉಳಿದ ₹5.5 ಕೋಟಿ ಆದಾಯದಲ್ಲಿ ಹೊಸ ಹೊಸ ಯೋಜನೆಗಳಿಗೆ ಬಳಸಿಕೊಳ್ಳಬೇಕಿದೆ. ಪುರಸಭೆ ವ್ಯಾಪ್ತಿಯ ಸಮಸ್ಯೆಗಳು ಹಾಗೂ ಇತರೆ ಹೊಸದಾದ ಯೋಜನೆಗಳ ನಿರ್ವಹಣೆಗೆ ಸಾರ್ವಜನಿಕರು ಸಲಹೆ ಗಳನ್ನು ನೀಡಬೇಕು ಎಂದರು.ಪುರಸಭೆ ಮಾಜಿ ಸದಸ್ಯ ಎಂ.ನಂದೀಶ್ ಮಾತನಾಡಿ, ಈ ಬಾರಿ ₹10 ಲಕ್ಷ ವೆಚ್ಚವನ್ನು ಪುರಸಭೆ ಬಜೆಟ್ ನಲ್ಲಿ ಮೀಸಲಿಟ್ಟು ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗೂ ಆರೋಗ್ಯ ವಿಮೆ ಸಹ ಸೇರಿಸಬೇಕು. ಮೈಸೂರು- ಬೆಂಗಳೂರು ಹೆದ್ದಾರಿಯ ವೃತ್ತಗಳಿಗೆ ಸಿಗ್ನಲ್ ದೀಪ, ಕೆಇಬಿ, ಶ್ರೀರಂಗನಾಥ ದೇವಾಲಯದ ಬಳಿ ಜಾಗ ಹಾಗೂ ಪುರಸಭೆ ಮುಂಭಾಗದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಹಣ, ಇರುವ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಹಣ ಮೀಸಲಿಡುವಂತೆ ಅವರು ತಿಳಿಸಿದರು.
ಗಂಜಾಂನ ವೃತ್ತದ ಬಳಿ ಸಾರ್ವಜನಿಕರಿಗೆ ಶುದ್ಧ ನೀರಿನ ಘಟಕ ನಿರ್ಮಾಣ, ಸಾರ್ವಜನಿಕ ಆಸ್ಪತ್ರೆ ಬಳಿ ಬಸ್ ತಂಗುದಾಣ ನಿರ್ಮಾಣ, ಪಟ್ಟಣದ ಪಾರ್ಕ್‌ನ ಗಿಡಗಳ ನಿರ್ವಹಣೆ ಸೇರಿದಂತೆ ಹಲವು ಸಲಹೆಗಳನ್ನು ಸಾರ್ವಜನಿಕರು ನೀಡಿದರು. ಸಲಹೆಗಳ ಪಡೆದುಕೊಂಡ ಪುರಸಭೆ ಮುಖ್ಯಾಧಿಕಾರಿಗಳು ಮುಂದೆ ನಡೆಯುವ ಆಯವ್ಯಯ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಸಾರ್ವಜನಿಕರು ಇದ್ದರು.