ಮುಡಾದಿಂದ 323.04 ಕೋಟಿ ರು. ಉಳಿತಾಯ ಬಜೆಟ್

KannadaprabhaNewsNetwork | Published : Mar 28, 2025 12:34 AM

ಸಾರಾಂಶ

ಸಾಮಾನ್ಯ ಆಡಳಿತ ಹಾಗೂ ಮಹಾಯೋಜನೆಗೆ ವಿವಿಧ ಮೂಲಗಳಿಂದ ಬಡಾವಣೆ ನಕ್ಷೆ ಶುಲ್ಕ, ಕಾರ್ಮಿಕ ಕಲ್ಯಾಣ ನಿಧಿ,

ಕನ್ನಡಪ್ರಭ ವಾರ್ತೆ ಮೈಸೂರು

ಪಂಚತಾರಾ ಹೊಟೇಲ್, ವಾಣಿಜ್ಯ ಸಂರ್ಕಿಣ ನಿರ್ಮಾಣ, ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮತ್ತೆ ಪ್ರಸ್ತಾಪ ಮಾಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) 2025- 26ನೇ ಸಾಲಿಗೆ 323.04 ಕೋಟಿ ರು. ಉಳಿತಾಯ ಬಜೆಟ್ ಮಂಡಿಸಿದೆ.ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಮುಡಾ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಮುಡಾ ಆಯುಕ್ತ ಎ.ಎನ್. ರಘುನಂದನ್ ಅವರು ಬಜೆಟ್ ಮಂಡಿಸಿದರು. ಸುಮಾರು ಒಂದೂವರೆ ಗಂಟೆಗಳ ಚರ್ಚೆಯ ಬಳಿಕ ಮುಡಾ ಸದಸ್ಯರಿಂದ ಬಜೆಟ್ ಗೆ ಅನುಮೋದನೆ ಪಡೆದುಕೊಂಡರು.871.45 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಿಸಲು ಮತ್ತು ವಿವಿಧ ಅಭಿವೃದ್ಧಿ ಕಾರ್ಯಕ್ಕೆ 548.49 ಕೋಟಿ ರು. ವ್ಯಯಿಸಲು ಉದ್ದೇಶಿಸಲಾಗಿದೆ. ಆದಾಯ ನಿರೀಕ್ಷೆಗಳುಸಾಮಾನ್ಯ ಆಡಳಿತ ಹಾಗೂ ಮಹಾಯೋಜನೆಗೆ ವಿವಿಧ ಮೂಲಗಳಿಂದ ಬಡಾವಣೆ ನಕ್ಷೆ ಶುಲ್ಕ, ಕಾರ್ಮಿಕ ಕಲ್ಯಾಣ ನಿಧಿ, ಕುಡಿಯುವ ನೀರು ಮತ್ತು ಮಲಿನ ನೀರು ಹೊರಸೂಸುವ ಮಾರ್ಗ, ಎಂಆರ್‌ ಟಿಎಸ್ ಶುಲ್ಕ, ಜಲಸಂಗ್ರಹಗಾರ ಶುಲ್ಕ, ಹಸಿರು ಶುಲ್ಕದಿಂದ ಒಟ್ಟು 163.40 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.ಕೊಳಚೆ ಪ್ರದೇಶಗಳ ಅಭಿವೃದ್ಧಿ ಶುಲ್ಕದಿಂದ 1.49 ಕೋಟಿ ರು. ಅಭಿವೃದ್ಧಿ ನಿಧಿ- 1ರ ಮೂಲಗಳಾದ ತುಂಡು ಜಾಗ, ಮೂಲೆ ನಿವೇಶನಗಳ ಹಂಚಿಕೆಯಿಂದ 225 ಕೋಟಿ ರೂ., ಪ್ರಾಧಿಕಾರದ ಬಡಾವಣೆಗಳಲ್ಲಿ ಲಭ್ಯವಾಗುವ ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆಯಿಂದ 23.19 ಕೋಟಿ ರು., ನಿವೇಶನ ಹಂಚಿಕೆ ನಿಯಮ ಉಲ್ಲಂಘನೆ ಕ್ಷಯಪತ್ರ ದಂಡ ಶುಲ್ಕಗಳಿಂದ 9.85 ಕೋಟಿ ರು., ಅಭಿವೃದ್ಧಿ ನಿಧಿ-2ಕ್ಕೆ ಕ್ರೋಢೀಕೃತವಾಗುವ ಸಂಪನ್ಮೂಲಗಳಾದ ಪ್ರಾಧಿಕಾರದ ಅನುಮೋದಿತ ಖಾಸಗಿ ಬಡಾವಣೆಗಳಲ್ಲಿನ ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ ಹಾಗೂ ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ಗುತ್ತಿಗೆ ಸಂದಾಯದಿಂದ 84.45 ಕೋಟಿ ರು., ಕೆರೆ ಪುನರುಜ್ಜೀವ ಶುಲ್ಕ ನಿಧಿ-2 ಮೂಲದಿಂದ 46.58 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ. ಯಾವುದಕ್ಕೆ? ಎಷ್ಟು ವೆಚ್ಚ ?ಮಹಾಯೋಜನೆಯ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರು., ಆಡಳಿತ ವೆಚ್ಚ, ಅಧಿಕಾರಿ ಸಿಬ್ಬಂದಿಯ ವೇತನ, ಕಾನೂನು ವೆಚ್ಚ, ಲೆಕ್ಕಪರಿಶೋಧನಾ ಶುಲ್ಕ, ಹೊರಗುತ್ತಿಗೆ ನೌಕರರ ವೆಚ್ಚಕ್ಕಾಗಿ 54.38 ಕೋಟಿ ರು., ಮಹಾಯೋಜನೆಯ ಪರಿಷ್ಕರಣೆಗಾಗಿ ಸಾಮಾನ್ಯ ಆಡಳಿತ ವೆಚ್ಚ 4 ಕೋಟಿ ರು., ಪ್ರಾಧಿಕಾರದ ಆಸ್ತಿ ಸಂರಕ್ಷಣೆಗಾಗಿ 9.72 ಕೋಟಿ ರು., ಸಾಮಾನ್ಯ ಆಡಳಿತ, ಮಹಾಯೋಜನೆ ನಿಧಿಯಡಿ 142.91 ಕೋಟಿ ರು., ಕೆರೆಗಳ ಅಭಿವೃದ್ಧಿಗೆ 40 ಕೋಟಿ ರು., ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 1.36 ಕೋಟಿ ರು., ಪ್ರಾಧಿಕಾರದ ಬಡಾವಣೆಗಳಲ್ಲಿ ಭೂ ಸ್ವಾಧೀನ ಪರಿಹಾರ ವೆಚ್ಚ, ಉದ್ಯಾನಗಳ ಅಭಿವೃದ್ಧಿ, ಗುಂಪು ವಸತಿ ಮನೆಗಳ ನಿರ್ಮಾಣ, ಬಾಕಿ ಇರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆ 322.21 ಕೋಟಿ ರು., ಪ್ರಾಧಿಕಾರದ ಬಡಾವಣೆಗಳ ಕಾಮಗಾರಿ ಹಾಗೂ ನಿರ್ವಹಣೆಗಾಗಿ 42 ಕೋಟಿ ರು., ಅಂಬೇಡ್ಕರ್ ಭವನದ ಉಳಿದ ಕಾಮಗಾರಿಗಾಗಿ 23.84 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹೊರ ಪರಿಧಿ ರಸ್ತೆಕಳೆದ ಬಜೆಟ್‌ ನಲ್ಲಿ ಘೋಷಣೆಯಾಗಿದ್ದ ಹೊರ ಪರಿಧಿ ರಸ್ತೆ ಯೋಜನೆಯನ್ನು ಈ ಬಾರಿಯ ಬಜೆಟ್‌ ನಲ್ಲೂ ಘೋಷಣೆ ಮಾಡಲಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆ ಅರಣ್ಯ ಪ್ರದೇಶದಿಂದ ಮುಕ್ತವಾಗಿದ್ದು, 105.31 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. 45 ಮೀ. ಅಗಲದ ರಸ್ತೆ ಇದಾಗಿದ್ದು, 3+3 ಮುಖ್ಯ ಲೇನ್, 2 ಸರ್ವೀಸ್ ಲೈನ್‌ ಗಳನ್ನು ಹೊಂದಿರಲಿದೆ. ಯೋಜನೆಯ ಡಿಪಿಆರ್ ತಯಾರಿಸಲು 7.75 ಕೋಟಿ ರು. ಕಾಯ್ದಿರಿಸಲಾಗಿದೆ. ಪಂಚತಾರಾ ಹೊಟೇಲ್, ವಾಣಿಜ್ಯ ಸಂಕೀರ್ಣಮೈಸೂರು- ನಂಜನಗೂಡು ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರದೇಶದ ವ್ಯಾಪ್ತಿಯಲ್ಲಿ ರೈತರಿಂದ ನೇರವಾಗಿ ಖರೀದಿಸಿ ವಸತಿ ಬಡಾವಣೆ ರಚಿಸುವ ಉದ್ದೇಶಕ್ಕಾಗಿ 100 ಕೋಟಿ ರು. ಕಾಯ್ದಿರಿಸಲಾಗಿದೆ.ವಿಜಯಶ್ರೀಪುರದ 14 ಎಕರೆ ಪ್ರದೇಶದಲ್ಲಿ ಮಿಶ್ರ ಭೂ ಉಪಯೋಗದ ಬಡಾವಣೆ ನಿರ್ಮಾಣ ಮಾಡಲು 10 ಕೋಟಿ ರು. ಮೀಸಲಿರಿಸಿದ್ದು, ಅದೇ ಗ್ರಾಮದ 5 ಎಕರೆ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪಂಚತಾರ ಹೊಟೇಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, 3 ಎಕರೆ ವಿಸ್ತೀರ್ಣದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಪ್ರಸ್ತಾಪಿಸಲಾಗಿದೆ.ಹಿನಕಲ್ ಗ್ರಾಮದಲ್ಲಿ ಪ್ರಾಧಿಕಾರದ 4 ಎಕರೆ ಪ್ರದೇಶದಲ್ಲಿ ಮಿಶ್ರ ಭೂ ಉಪಯೋಗದ ಬಡಾವಣೆ (ವಸತಿ ಮತ್ತು ವಾಣಿಜ್ಯ) ನಿರ್ಮಾಣ ಮಾಡಲು 3.50 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ವಿಜಯನಗರ 3ನೇ ಹಂತ ಎ ಬ್ಲಾಕ್‌ ನಲ್ಲಿನ 5 ಎಕರೆ ಪ್ರದೇಶದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆಯ ಬಸವನಹಳ್ಳಿ ಗ್ರಾಮದ 4.21 ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು 2 ಕೋಟಿ ರು., 3.20 ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು 5 ಕೋಟಿ ರು., ಬೋಗಾದಿ ಗ್ರಾಮದ 2.27 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ರಚಿಸಲು 2 ಕೋಟಿ ರು., ದೇವನೂರು ಗ್ರಾಮದ 4 ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು 4 ಕೋಟಿ ರು., ದಟ್ಟಗಳ್ಳಿ ಗ್ರಾಮದ 5.30 ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು 5 ಕೋಟಿ ರು. ಕಾಯ್ದಿರಿಸಲಾಗಿದೆ. ನೀರಿನ ಶುದ್ಧೀಕರಣ, ಕೆರೆಗಳ ಅಭಿವೃದ್ಧಿ ಅಯ್ಯಜಯ್ಯನ ಹುಂಡಿ, ಕೇರ್ಗಳ್ಳಿಕೆರೆಗಳಿಗೆ ಸುತ್ತಲಿನ ಪ್ರದೇಶಗಳಿಂದ ಬರುತ್ತಿರುವ ತ್ಯಾಜ್ಯ ನೀರನ್ನು ತಡೆಯಲು ಕೆರೆಗಳ ಪಕ್ಕದಲ್ಲಿ ಒಳಚರಂಡಿ ಕೊಳವೆ ಅಳವಡಿಸಿ ತ್ಯಾಜ್ಯ ನೀರನ್ನು ಸಂಸ್ಕರಣ ಘಟಕಕ್ಕೆ ಸಾಗಿಸುವ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದ್ದು, 24.80 ಕೋಟಿ ರು. ಕಾಯ್ದಿರಿಸಲಾಗಿದೆ.ನಗರದ ದಳವಾಯಿ ಕೆರೆ ಅಭಿವೃದ್ಧಿಗೆ 15 ಕೋಟಿ ರು., ಕುಕ್ಕರಹಳ್ಳಿಕೆರೆಗೆ 10 ಕೋಟಿ ರೂ., ಇತರೆ ಕೆರೆಗಳ ಅಭಿವೃದ್ಧಿಗೆ 15 ಕೋಟಿ ರು. ಮೀಸಲಿಡಲಾಗಿದೆ. ಜೊತೆಗೆ ನಗರದಲ್ಲಿನ ಸ್ಲಂಗಳ ಅಭಿವೃದ್ಧಿಗಾಗಿ 75 ಲಕ್ಷ ಕಾಯ್ದಿರಿಸಲಾಗಿದೆ. ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆಯ ಬಸವನಹಳ್ಳಿಯಲ್ಲಿ 9 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲು 10 ಕೋಟಿ ರು., ಪ್ರಾಧಿಕಾರದಿಂದ ನಿರ್ಮಿಸಿರುವ ಬಡಾವಣೆಗಳಲ್ಲಿನ ಉದ್ಯಾನವನಗಳ ಅಭಿವೃದ್ಧಿಗೆ 15 ಕೋಟಿ ರು., ಕುಕ್ಕರಹಳ್ಳಿ ಕೆರೆಯ ಹತ್ತಿರ ಲಾಲ್ ಬಾಗ್ ಉದ್ಯಾನವನ ಅಭಿವೃದ್ಧಿಪಡಿಸಲು 2 ಕೋಟಿ ರು. ಕಾಯ್ದಿರಿಸಲಾಗಿದೆ.----ಬಾಕ್ಸ್... ಅಂಬೇಡ್ಕರ್ ಭವನಕ್ಕೆ 23.84 ಕೋಟಿನಗರದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದ ಕಟ್ಟಡದ ಉಳಿಕೆ ಕಾಮಗಾರಿಗಳಾದ ಶೌಚಾಲಯ, ಒಳಾಂಗಣ ವಿನ್ಯಾಸ ಕಾಮಗಾರಿ, ವಾಲ್ ಪ್ಯಾನಲಿಂಗ್, ಫಾಲ್ಸ್ ಸೀಲಿಂಗ್, ಆವರಣದಲ್ಲಿನ ರಸ್ತೆಗಳ ನಿರ್ಮಾಣ, ಯುಜಿಡಿ, ಮಳೆ ನೀರು ಕೊಯ್ಲು ವ್ಯವಸ್ಥೆ, ವೇದಿಕೆ, ಒಳಾಂಗಣ ವಿದ್ಯುದೀಕರಣ, ಹವಾ ನಿಯಂತ್ರಿತ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆ, ಆಸನಗಳ ವ್ಯವಸ್ಥೆ ಹಾಗೂ ಲಿಫ್ಟ್ ಅಳವಡಿಸುವಿಕೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 23.84 ಕೋಟಿ ರು. ಕಾಯ್ದಿರಿಸಲಾಗಿದೆ.----ಬಾಕ್ಸ್... ಐವರು ಸದಸ್ಯರು ಗೈರುಮುಡಾ ಬಜೆಟ್ ಸಭೆಯಲ್ಲಿ ಐವರು ಸದಸ್ಯರು ಗೈರಾಗಿದ್ದಾರೆ.ಶಾಸಕರಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ಕೆ. ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ದರ್ಶನ್ ಧ್ರುವನಾರಾಯಣ, ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ನಗರ ಯೋಜನಾ ಸದಸ್ಯ ಶಿವರಾಮಯ್ಯ, ಎಂಜಿನಿಯರಿಂಗ್ ಸದಸ್ಯ ಎಂ. ಮುರಳೀಧರ, ಸೆಸ್ಕ್ ಎಸ್‌ಇ ಎ.ಎ. ಸುನೀಲ್‌ ಕುಮಾರ್, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಇಇ ಆಸೀಫ್ ಇಕ್ಬಾಲ್ ಖಲೀಲ್ ಹಾಜರಿದ್ದರು.ಇನ್ನೂ ಸದಸ್ಯರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ತು ಸದಸ್ಯರಾದ ಎಚ್. ವಿಶ್ವನಾಥ್, ಮಧು ಜಿ. ಮಾದೇಗೌಡ, ದಿನೇಶ್ ಗೂಳಿಗೌಡ ಮತ್ತು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಭೆಗೆ ಗೈರಾಗಿದ್ದರು.

Share this article