ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ, ಬರ ಪರಿಹಾರ ಬಿಡುಗಡೆ ವಿಳಂಬ, ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್ ಆರೋಪ, ರಾಜ್ಯದ ಹಣಕಾಸು ಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸೋಮವಾರದಿಂದ ಆರಂಭವಾಗಲಿರುವ 10 ದಿನಗಳ ವಿಧಾನಮಂಡಲದ ಅಧಿವೇಶನದಲ್ಲಿ ಕಾವೇರಿದ ಚರ್ಚೆಯಾಗುವ ಸಂಭವವಿದೆ.
ಸರ್ಕಾರ ಹಾಗೂ ಪ್ರತಿಪಕ್ಷದ ನಡುವೆ ಸದನದ ಹೊರಗೆ ಈಗಾಗಲೇ ಸಾಕಷ್ಟು ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದು, ಅಧಿವೇಶನದಲ್ಲಿ ನೇರಾನೇರ ವಾಗ್ವಾದಗಳು ನಡೆಯುವ ಲಕ್ಷಣವಿದೆ.
ಫೆ.12ರಿಂದ 23ರವರೆಗೆ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಭಾಷಣ ಮಾಡಲಿದ್ದಾರೆ.
ಫೆ.15ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ, ವಂದನಾ ನಿರ್ಣಯ ನಡೆಯಲಿದೆ. ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್ ಮಂಡಿಸಲಿದ್ದಾರೆ.
ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಮಂಡಿಸುತ್ತಿರುವುದರಿಂದ ಬಜೆಟ್ ತೀವ್ರ ಕುತೂಹಲ ಕೆರಳಿಸಿದೆ.
ಗ್ಯಾರಂಟಿ ಯೋಜನೆಗೆ ವಾರ್ಷಿಕ ಸುಮಾರು 55 ಸಾವಿರ ಕೋಟಿ ರು.ಗಿಂತ ಹೆಚ್ಚು ಬೇಕಾಗಿರುವುದರಿಂದ ಈ ಮೊತ್ತವನ್ನು ಹೇಗೆ ಕ್ರೋಢೀಕರಿಸುತ್ತಾರೆ, ಯಾರಿಗೆ ತೆರಿಗೆ ಹೊರೆ ಬೀಳಲಿದೆ ಎಂಬುದನ್ನು ಜನರು ಕಾಯುತ್ತಿದ್ದಾರೆ.
ವಾಗ್ವಾದ, ಕೋಲಾಹಲ ಸಾಧ್ಯತೆ: ಇದಲ್ಲದೆ ರಾಜ್ಯ ಸರ್ಕಾರದ ಮೇಲೆ ಕೇಳಿ ಬಂದಿರುವ 40 ಪರ್ಸೆಂಟ್ ಕಮಿಷನ್ ಆರೋಪ, ಕೇಂದ್ರದಿಂದ ತೆರಿಗೆ ಹಂಚಿಕೆ, ಅನುದಾನ ನೀಡಿಕೆಯಲ್ಲಿ ತಾರತಮ್ಯ, ಬರ ಪರಿಹಾರ ಹಾಗೂ ನಿರ್ವಹಣೆ ವೈಫಲ್ಯ, ಕಾಂಗ್ರೆಸ್ ಸಂಸದರ ಪ್ರತ್ಯೇಕ ರಾಷ್ಟ್ರ ಹೇಳಿಕೆ, ಕೆ.ಎಸ್.ಈಶ್ವರಪ್ಪ ಅವರ ಗುಂಡಿಕ್ಕಿ ಕೊಲ್ಲುವ ಹೇಳಿಕೆ ಸೇರಿದಂತೆ ಹಲವು ವಿಷಯಗಳು ಸದನದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
ಉಳಿದಂತೆ ಅನುದಾನ ಹಾಗೂ ತೆರಿಗೆ ಪಾಲು ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ ಖಂಡಿಸಿ ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಧ್ವನಿ ಎತ್ತುವಂತೆ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆ, ಡಿ.ಕೆ.ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿಯನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆ ಸದನದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಧ್ವನಿಸುವುದು ಬಹುತೇಕ ಖಚಿತವಾಗಿದೆ.
ಶ್ವೇತ ಪತ್ರ ಮಂಡನೆ: ಕೇಂದ್ರದಿಂದ ಬಂದಿರುವ ಹಣ ಸೇರಿದಂತೆ ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಘೋಷಿಸಿರುವಂತೆ ಶ್ವೇತ ಪತ್ರ ಮಂಡಿಸಲಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೇಂದ್ರ ನೀಡಿರುವ ಹಣ, ಗ್ಯಾರಂಟಿ ಯೋಜನೆಯಿಂದ ಅನೇಕ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ ಎಂದು ತಿರುಗೇಟು ನೀಡಲು ಪ್ರತಿಪಕ್ಷ ಸಜ್ಜಾಗಿದೆ.ಧಾರ್ಮಿಕ ಅಸ್ತ್ರ ಪ್ರಯೋಗ:
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿರುವ ಧ್ವಜಸ್ತಂಭದಲ್ಲಿ ಅನುಮತಿ ಪಡೆಯದೆ ಹಾರಿಸಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವುಗೊಳಿಸಿದ ಘಟನೆ, ಅಯೋಧ್ಯೆ ಶ್ರೀರಾಮ ಮೂರ್ತಿಯ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ನೀಡಿದ್ದ ಹೇಳಿಕೆ, ಕಾಂಗ್ರೆಸ್ ಪಕ್ಷ ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಬಹಿಷ್ಕರಿಸಿರುವ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ.
ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿರುವ ಸರ್ಕಾರದ ಕ್ರಮ ಚರ್ಚೆಯಾಗುವ ಸಂಭವವಿದೆ.
40 ಪರ್ಸೆಂಟ್ ಕಮಿಷನ್ ಗುಮ್ಮ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಕಾಂಗ್ರೆಸ್ ಸರ್ಕಾರದಲ್ಲೂ ಅಧಿಕಾರಿಗಳಿಂದ 40 ಪರ್ಸೆಂಟ್ ಕಮಿಷನ್‌ಗೆ ಒತ್ತಾಯ ಬರುತ್ತಿದೆ ಎಂದು ಆರೋಪ ಮಾಡಿರುವುದು ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಾಡುವ ಸಾಧ್ಯತೆಯಿದೆ.
ನಿಷೇಧಾಜ್ಞೆ ಜಾರಿ:ಫೆ.12 ರಿಂದ 23 ರವರೆಗೆ ಒಟ್ಟು ಹತ್ತು ದಿನಗಳ ಕಾಲ ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಕಲಾಪದ ಹಿನ್ನೆಲೆಯಲ್ಲಿ ಫೆ.12 ರಿಂದ 23ರವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ವಿಧಾನಸೌಧ ಕಟ್ಟಡದ 2 ಕಿ.ಮೀ. ವ್ಯಾಪ್ತಿಯಲ್ಲಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಾಮಫಲಕಗಳಲ್ಲಿ 60% ಕನ್ನಡ ಕಡ್ಡಾಯ ವಿಧೇಯಕ
ಸದನದಲ್ಲಿ ಮಂಡಿಸುವಂತೆ ರಾಜ್ಯಪಾಲರು ವಾಪಸ್ ಕಳಿಸಿರುವ ರಾಜ್ಯಾದ್ಯಂತ ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ’ವನ್ನು ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.
ಮೇಲ್ಮನೆಯಲ್ಲೂ ಛಾಯಾಗ್ರಾಹಕರಿಗೆ ನಿರ್ಬಂಧ?
ಈಗಾಗಲೇ ವಿಧಾನ ಸಭೆಯಲ್ಲಿ ಪತ್ರಿಕಾ ಛಾಯಾಗ್ರಾಹಕರಿಗೆ ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ನೀಡುತ್ತಿಲ್ಲ. ಈ ನಿಯಮ ಪ್ರಸಕ್ತ ಅಧಿವೇಶನದಿಂದ ವಿಧಾನ ಪರಿಷತ್‌ನಲ್ಲೂ ಜಾರಿಯಾಗುವ ಸಾಧ್ಯತೆಯಿದೆ.