ಬಜೆಟ್‌: ಜಿಲ್ಲೆಗೆ ವಿಶೇಷ ಕೊಡುಗೆ: ಉಸ್ತುವಾರಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Updated : Feb 12 2024, 04:45 PM IST

ಸಾರಾಂಶ

ಐದು ವರ್ಷ ರಾಜ್ಯವನ್ನಾಳಿದ ಪಕ್ಷಗಳು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ನೆರವು ನೀಡಿಲ್ಲ. ಈ ಬಾರಿ ಮುಖ್ಯಮಂತ್ರಿಯವರು ಜನಪರ ಬಜೆಟ್ ನೀಡುವುದರ ಜೊತೆಗೆ ಮಂಡ್ಯ ಜಿಲ್ಲೆಗೆ ವಿಶೇಷ ಬಜೆಟ್ ಕೊಡುಗೆ ನೀಡಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಐದು ವರ್ಷ ರಾಜ್ಯವನ್ನಾಳಿದ ಪಕ್ಷಗಳು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ನೆರವು ನೀಡಿಲ್ಲ. ಈ ಬಾರಿ ಮುಖ್ಯಮಂತ್ರಿಯವರು ಜನಪರ ಬಜೆಟ್ ನೀಡುವುದರ ಜೊತೆಗೆ ಮಂಡ್ಯ ಜಿಲ್ಲೆಗೆ ವಿಶೇಷ ಬಜೆಟ್ ಕೊಡುಗೆ ನೀಡಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ಗ್ಯಾರಂಟಿ ಸಮಾವೇಶ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಫೆ. ೧೬ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಅಂದಿನ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ, ಕೃಷಿ ಸೇರಿ ಮೂಲಭೂತ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ. 

ಬಜೆಟ್ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ, ಬಜೆಟ್ ನಂತರ ಮಾತನಾಡುತ್ತೇನೆ ಎಂದು ಸಚಿವರು ತಿಳಿಸಿದರು.

ಗೊಂದಲವೆಬ್ಬಿಸುತ್ತಿರುವವರಿಗೆ ಉತ್ತರ ಕೊಡಿ: ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಪ್ರಣಾಳಿಕೆ ನೀಡಿ, ಅದರಲ್ಲಿ ಕೆಲವನ್ನು ಮಾತ್ರ ಅನುಷ್ಠಾನಗೊಳಿಸುತ್ತವೆ. ಉಳಿದವನ್ನು ಬಿಟ್ಟುಬಿಡುತ್ತವೆ. 

ಆದರೆ ನಾವು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಜಾರಿಗೊಳಿಸಿದ್ದೇವೆ. 

ವಿಪಕ್ಷಗಳು ಇದರ ಬಗ್ಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇವರಿಗೆ ತಕ್ಕ ಉತ್ತರ ಕೊಡುವ ಕಾಲ ಈಗ ಬಂದಿದೆ. ನೀವು ಆ ಕೆಲಸವನ್ನು ಲೋಕಸಭಾ ಚುನಾವಣೆಯಲ್ಲಿ ಮಾಡಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.

೫ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ೫೬ ಸಾವಿರ ಕೋಟಿ ರು. ಅನುದಾನ ಬೇಕಿದೆ. ಮುಂದಿನ ಏಪ್ರಿಲ್‌ನಿಂದ ಇದು ೬೯ ಸಾವಿರ ಕೋಟಿ ರು.ಗೆ ಏರಿಕೆಯಾಗಲಿದೆ. ನಮ್ಮ ಸರ್ಕಾರ ಇರುವ ಐದೂ ವರ್ಷಗಳ ಕಾಲವೂ ಗ್ಯಾರಂಟಿ ಯೋಜನೆಗಳಿರುತ್ತವೆ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಹೇಳಿದರು.

ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ನಿತ್ಯವೂ ಒಂದಲ್ಲ ಒಂದು ಅಪಘಾತಗಳು ನಡೆದು ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದರು. ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಮಾದೇಗೌಡ ಅವರು ಜಿಲ್ಲಾಧಿಕಾರಿಗಳು ಸೇರಿ ಹಲವು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದರು. 

ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಒಂದೆರಡು ಸಭೆ ನಡೆಸಿ ಅಪಘಾತದ ಸಂಖ್ಯೆಯನ್ನು ಕಡಿಮೆ ಮಾಡಿದ್ದೇವೆ ಎಂದು ಹೇಳಿದರು.

ದೇಶದಲ್ಲೇ ತೆರಿಗೆ ಸಂಗ್ರಹದಲ್ಲಿ ೨ನೇ ಸ್ಥಾನದಲ್ಲಿದ್ದೇವೆ. ಮಹಾರಾಷ್ಟ್ರ ಬಿಟ್ಟರೆ ನಮ್ಮ ರಾಜ್ಯವೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುತ್ತಿದೆ. ಆದರೆ ನಮ್ಮ ತೆರಿಗೆ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ೧೫ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿಲ್ಲ. 

ಆದರೂ ನಾವು ಬರ ಪರಿಸ್ಥಿತಿ ಹಿನ್ನೆಲೆ ೩೭ ಲಕ್ಷ ರೈತರಿಗೆ ತಲಾ ೨ ಸಾವಿರ ರು.ನಂತೆ ಅವರ ಖಾತೆಗೆ ಹಣ ಹಾಕಿದ್ದೇವೆ ಎಂದು ಹೇಳಿದರು.

ಸಿಎಂರಿಂದ ಸಾವಿರಾರು ಕೋಟಿ ಅನುದಾನ: ಈಗಾಗಲೇ ಮುಖ್ಯಮಂತ್ರಿಗಳು ಜಿಲ್ಲೆಯ ನೀರಾವರಿ ಯೋಜನೆ, ಕೃಷಿ ಹಾಗೂ ಇತರೆ ಇಲಾಖೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ನೀಡಿದ್ದಾರೆ. ಮುಂದೆಯೂ ಇದೇ ರೀತಿ ಹೆಚ್ಚುವರಿ ಅನುದಾನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ವೇಳೆ, ನಿಮ್ಮ ಪಕ್ಷ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ. 

ಕಳೆದ ಬಾರಿ ಏಳಕ್ಕೆ ಏಳೂ ಶಾಸಕರನ್ನು ಗೆದ್ದ ಜೆಡಿಎಸ್ ಸರ್ಕಾರ ರಚಿಸುವಂತಾಗಿತ್ತು. ಆದೇ ರೀತಿ ಕಾಂಗ್ರೆಸ್ ಗೆದ್ದರೆ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ ಎಂದಿದ್ದರು. 

ನಾಲ್ಕು ವರ್ಷ ಆಡಳಿತ ನಡೆಸಿದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಂಬ ವಿಶ್ವಾಸವೇ ಅವರಿಗಿರಲಿಲ್ಲ ಎಂದು ಅಂದಿನ ಸಂದರ್ಭವನ್ನು ವಿವರಿಸಿದರು.

ಕ್ಷೇತ್ರದ ಶಾಸಕ ಉದಯ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ನೀರಾವರಿಗೆ ೨೦೦ ಕೋಟಿ ರು. ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕರಾದ ಕೆ.ಎಂ. ಉದಯ್, ಪಿ.ರವಿಕುಮಾರ್, ಮರಿತಿಬ್ಬೇಗೌಡ, ದಿನೇಶ್ ಗೂಳೀಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸೀಫ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗೀಗೌಡ, ಉಪ ವಿಭಾಗಾಧಿಕಾರಿ ಶಿವಮೂರ್ತಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Share this article