)
ಜಡೇಕುಂಟೆ ಮಂಜುನಾಥ್
ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿಯ ಅಜ್ಜಪ್ಪ ಎಂಬ 90ರ ಹರೆಯದ ಹಾರ್ಮೋನಿಯಂ ಕಲಾವಿದನಿಗೆ ಸಂಗೀತ ನೃತ್ಯ ಆಕಾಡೆಮಿಯು ಕೊಡಮಾಡುವ 2026ರ ಕರ್ನಾಟಕ ಕಲಾಶ್ರೀ ಪ್ರಶಸ್ತಿಯ ಗರಿಮೆ ಇವರ ಮುಡಿಗೇರಿದೆ.
ಕಡುಬಡತನದಲ್ಲಿ ಜನಿಸಿದ ಅಜ್ಜಪ್ಪ ಓದಿದ್ದು ನಾಲ್ಕನೆ ತರಗತಿವರೆಗೆ ಮಾತ್ರ. ಜೀವನದ ಬಂಡಿ ಸಾಗಿಸಲು ಹೊಟ್ಟೆಯ ತುತ್ತಿನ ಚೀಲ ತುಂಬಿಸಿಕೊಳ್ಳಲು ಊರೂರು ಅಲೆಮಾರಿಯಂತೆ ಸುತ್ತಿ ಹಾರ್ಮೋನಿಯಂ, ಪಿಟೀಲುಗಳ ಮೂಲಕ ಸಂಗೀತ ರಸದೌತಣ ನೀಡುವ ಕಾಯಕ ಮಾಡಿಕೊಂಡು ಬಂದ ಕಲಾವಿದನ ಬದುಕು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಎಂಬಂತೆ ನಡೆದುಕೊಂಡು ಹೋಗುತ್ತಿತ್ತು.ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹ, ಎಲ್ಲಾದರೂ ನಾಟಕ, ಸಂಗೀತ ಕಾರ್ಯಕ್ರಮಗಳು ಎಂದರೆ ಸಾಕು ನೂರಾರು ಕಿ.ಮೀ ಕ್ರಮಿಸಿ ಹಗಲು, ರಾತ್ರಿ ಎನ್ನದೇ ಪಿಟೀಲು, ಹಾರ್ಮೋನಿಯಂ ಬಾರಿಸುವ ಬದ್ಧತೆಯುಳ್ಳ ಈ ಕಲಾವಿದ ಹಾರ್ಮೋನಿಯಂ ರಿಪೇರಿ ಎಂದು ಯಾರಾದರೂ ಕರೆ ಮಾಡಿದರೆ ಕ್ಷಣಾರ್ಧದಲ್ಲಿ ಹೊರಡುತ್ತಾರೆ. ಕಣ್ಣಿಗೆ ಕಾಣುವ ಯಾವುದೇ ವಾದ್ಯ ಇರಲಿ ಅದನ್ನು ಅಲ್ಲಿಯೇ ಸರಿ ಮಾಡಿ ಒಂದು ಜಾನಪದ ಹಾಡು ಹಾಡಿ ಅಲ್ಲಿರುವವರನ್ನು ರಂಜಿಸುವ ಮಗುವಿನ ಮನಸ್ಸು ಇವರದ್ದು.
ಸಂಗೀತ ಮತ್ತು ಬಯಲಾಟ ಆಡಿಸುವ ದೊಂಬಿದಾಸ ಕಲಾವಿದ ರಾಮಪ್ಪ ಮತ್ತು ರಂಗಮ್ಮ ದಂಪತಿಯ ಪುತ್ರ ಈ ಅಜ್ಜಪ್ಪ.
ಆಧುನಿಕ ಭರಾಟೆಯಲ್ಲೂ ನೂರಾರು ಸಂಗೀತ ಉಪಕರಣಗಳು ಮಾರುಕಟ್ಟೆಯಲ್ಲಿದ್ದರೂ ಹಳೇ ಹಾರ್ಮೋನಿಯಂ ಮೂಲಕವೇ ಜನರ ಮನವನ್ನ ತೂಗಾಡಿಸುವ ಕಲೆ ಇವರ ಕಿಸೆಯಿಂದ ಬರುವ ಸಂಗೀತಕ್ಕಿದೆ.
ಶಾಸ್ತ್ರೀಯ ಗಾಯನದಲ್ಲಿ ಜೂನಿಯರ್, ಸೀನಿಯರ್ ಕಲಿತು ಗಾಯನ ಮಾಡುತ್ತಾ ಹಾಡುತ್ತಲೇ ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡುತ್ತಾ ಸಾಗಿ ಸುಮಾರು 65 ವರ್ಷಗಳಾದವು. ಈಗ ಅವರಿಗೆ 90 ವರ್ಷ.
ನಾಡಿನ ಬೇರೆ, ಬೇರೆ ಜಿಲ್ಲೆಗಳಿಂದ ಶ್ರುತಿ ತಿದ್ದಿಸಿಕೊಳ್ಳಲು ಹಾರ್ಮೋನಿಯಂ ತಯಾರಿಸಿಕೊಳ್ಳಲು ಇವರನ್ನು ಹುಡುಕಿಕೊಂಡು ಬರುತ್ತಾರೆ. ಜಾತಿ ಜನಾಂಗ ಪಕ್ಷಪಾತಿಗಳ ಮಧ್ಯೆ ಇಂತಹ ವ್ಯಕ್ತಿತ್ವಗಳು ಮುನ್ನಲೆಗೆ ಬಾರದೆ ಹಾಗೆಯೇ ತೆರೆಮರೆಗೆ ಸರಿದಿದ್ದಾರೆ. ಇಂತಹವರನ್ನು ಗುರುತಿಸುವ ಕೆಲಸ ಬಹಳಷ್ಟಿದೆ ಎನ್ನುತ್ತಾರೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ರಮೇಶ್ ಗಬ್ಬೂರ್.
ಬುಡ್ನಹಟ್ಟಿಯ ಅಜ್ಜಪ್ಪನವರು ಸುಮಾರು 30ವರ್ಷಗಳಿಂದ ಹಲವಾರು ವಿಧದ ನೂರಾರು ಸಂಗೀತ ವಾದ್ಯಗಳ ರೀಪೇರಿ ಮಾಡಿದ ಕೀರ್ತಿ ಇವರದ್ದು. 200ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಯಾವುದೇ ಪ್ರಚಾರ ಗೀಳು ಹತ್ತಿಸಿಕೊಳ್ಳದೆ ಎಲೆಮರೆಕಾಯಿಯಂತೆ ನಾನು ಮಾಡುವ ಸೇವೆ ಕಲಾಸೇವೆ ಎಂದು ನಿಸ್ವಾರ್ಥದಿಂದಲೇ ಕಲೆ, ಸಂಗೀತ, ಸರಸ್ವತಿಯ ಸೇವೆ ಮಾಡುತ್ತಾ ತಮ್ಮ ಜೀವನವನ್ನು ಸವಿಸುತ್ತಿದ್ದಾರೆ. ಇಂತಹ ಕಲಾವಿದನನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಗ್ರಾಮದ ಜನರು ಸರ್ಕಾರವನ್ನ ಅಭಿನಂದಿಸಿದ್ದಾರೆ.