ಅಂಗಹೀನ ಮಗುವಿಗೆ ಆತ್ಮವಿಶ್ವಾಸ ಬೆಳೆಸಿ, ಅವಕಾಶ ಕೊಡಿ: ಡಾ.ರಾಜಣ್ಣ

KannadaprabhaNewsNetwork |  
Published : May 27, 2025, 12:11 AM IST
ಮಂಗಳೂರಲ್ಲಿ ದಿ.ಬಿ.ಹರೀಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸಮಾಜ ಸೇವಕ ದಿ.ಬಿ. ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮ ದಿನೋತ್ಸವ ಪ್ರಯುಕ್ತ ನಗರದಲ್ಲಿ ಭಾನುವಾರ 2025ನೇ ಸಾಲಿನ ಬಿ.ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್. ರಾಜಣ್ಣ ಸ್ವೀಕರಿಸಿದರು.

ಮಂಗಳೂರಲ್ಲಿ ದಿ.ಬಿ.ಹರೀಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಡ್ಯ ಜಿಲ್ಲೆಯ ಮೇಲುಕೋಟೆ ನನ್ನ ಹುಟ್ಟೂರು. ನಾನು ಹುಟ್ಟಿದ ಆರೇಳು ತಿಂಗಳಲ್ಲೇ ಪೋಲಿಯೊದಿಂದ ಕೈ ಮತ್ತು ಕಾಲಿನ ಕೆಳಭಾಗದ ಶಕ್ತಿಯನ್ನು ಕಳೆದುಕೊಂಡೆ. ಮನೆಯಲ್ಲಿ ಕಡು ಬಡತನ ಇದ್ದರೂ ಅಪ್ಪ- ಅಮ್ಮ ನನ್ನನ್ನು ಕೈಬಿಡದೆ ಆತ್ಮವಿಶ್ವಾಸ ಬೆಳೆಸಿದರು. ಪರಿಣಾಮ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರ ಒಲಿಯಿತು. ಯಾವುದೇ ಪೋಷಕರಿಗೆ ಅಂಗಹೀನ ಮಗು ಜನಿಸಿದರೆ, ಆ ಮಗುವಿಗೆ ಮೂಲಭೂತ ಹಕ್ಕು ಒದಗಿಸಿ, ಅವಕಾಶಗಳನ್ನು ಕೊಡಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್. ರಾಜಣ್ಣ ಹೇಳಿದರು.

ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಸಮಾಜ ಸೇವಕ ದಿ.ಬಿ. ಹರಿಶ್ಚಂದ್ರ ಆಚಾರ್ಯ ಅವರ 112ನೇ ಜನ್ಮ ದಿನೋತ್ಸವ ಪ್ರಯುಕ್ತ ನಗರದಲ್ಲಿ ಭಾನುವಾರ 2025ನೇ ಸಾಲಿನ ಬಿ.ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಹೆತ್ತವರ ಪ್ರೋತ್ಸಾಹ, ಪ್ರೀತಿಯಿಂದಾಗಿ ಇಂದು ದಿನವಿಡೀ ಈಜುವ ಕಲೆ ಸಿದ್ಧಿಸಿಕೊಂಡಿದ್ದೇನೆ. ಇದು ಸಮಾಜದ ಹಾಗೂ ಸಮಸ್ತ ಕನ್ನಡಿಗರು ನೀಡಿದ ಬೆಂಬಲದ ಫಲ ಎಂದು ಹೇಳಿದ ರಾಜಣ್ಣ, ಅಂಗಹೀನರಿಗೆ ಯಾರ ಅನುಕಂಪವೂ ಬೇಡ. ಬದಲಾಗಿ ಅವಕಾಶಗಳು ಬೇಕು ಎಂದರು.ಶ್ರೀ ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಆನಂದ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಿ.ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಎಸ್.ವಿ.ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ ಶುಭಾಶಂಸನೆಗೈದರು.ಕ್ಯಾ.ಗಣೇಶ್ ಕಾರ್ಣಿಕ್, ಉದ್ಯಮಿ ಶಿವಾನಂದ ಬೈಕಾಡಿ, ಟಾಟಾ ಇಲೆಕ್ಟ್ರಾನಿಕ್ಸ್ ಬೆಂಗಳೂರು ಉಪಾಧ್ಯಕ್ಷ ಭರತ್ ಕುಮಾರ್, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಸ್.ಆರ್. ಹರೀಶ್ ಆಚಾರ್, ಭುವನಜ್ಯೋತಿ ಎಜ್ಯುಕೇಶನ್ ಟ್ರಸ್ಟ್ ವಿಶ್ವಸ್ಥೆ ಲತಾ ಜನಾರ್ದನ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು.ಪಿ.ಉಪೇಂದ್ರ ಆಚಾರ್ಯ ಸಂಸ್ಮರಣಾ ಭಾಷಣ ನಡೆಸಿದರು. ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷರಾದ ಪಿ.ಶಿವರಾಮ ಆಚಾರ್ಯ ಮತ್ತು ಸದಸ್ಯೆ ಶಕುಂತಳಾ ಬಿ.ರಾವ್ ಅವರಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?