ಬಡವರಿಗೆ ಮೊದಲು ಮನೆ ಕಟ್ಟಿಸಿಕೊಡಿ

KannadaprabhaNewsNetwork | Updated : Nov 10 2023, 01:05 AM IST

ಸಾರಾಂಶ

ನಗರಸಭೆ ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದಲ್ಲಿ ಬಡವರಿಗೆ ಸರ್ಕಾರಿ ಜಾಗ ಗುರುತಿಸಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕು. ಈಗಾಗಲೇ 600 ಮನೆಗಳು ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿದ್ದು, ಕೂಡಲೇ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ನಗರಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ಲತಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯ ಹುಲುಗಪ್ಪ ಮಾತನಾಡಿ, ನಗರದಲ್ಲಿ ಬಡವರು ಹೆಚ್ಚಿದ್ದಾರೆ. ಹಾಗಾಗಿ ಬಡವರ ಅನುಕೂಲಕ್ಕಾಗಿ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟರೆ ಅವರು ಈ ದುಬಾರಿ ಜಮಾನಾದಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದರು.

ಈ ವೇಳೆ ಪೌರಾಯುಕ್ತ ಬುಡ್ಡಪ್ಪ ಬಂಡಿವಡ್ಡರ್‌ ಪ್ರತಿಕ್ರಿಯಿಸಿ, ರಾಜೀವ್‌ ಗಾಂಧಿ ವಸತಿ ನಿಗಮದಿಂದ 600 ಮನೆಗಳು ನಗರಸಭೆಗೆ ಮಂಜೂರಾಗಿದ್ದು, ಈಗ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 145 ಮನೆಗಳು ಮಂಜೂರಾಗಿವೆ. ಈಗಾಗಲೇ 76 ಅರ್ಜಿಗಳು ಬಂದಿವೆ. ಉಳಿದ ಅರ್ಜಿಗಳನ್ನು ಕ್ರೋಡೀಕರಿಸಿ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕ ಎಚ್‌.ಆರ್‌. ಗವಿಯಪ್ಪ ಅವರಿಂದ ಮಂಜೂರಾತಿ ಪಡೆದು ಸರ್ಕಾರಿ ಜಾಗ ಗುರುತಿಸಿ ಆಶ್ರಯ ಮನೆಗಳನ್ನು ನಿರ್ಮಿಸಲಾಗುವುದು ಎಂದು ಉತ್ತರಿಸಿದರು.

ಸದಸ್ಯರ ತರಾಟೆ:

ನಗರಸಭೆ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ನಗರಸಭೆಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ 600 ಮನೆಗಳು ಮಂಜೂರಾಗಿರುವ ವಿಷಯವನ್ನೇ ಗಮನಕ್ಕೆ ತಂದಿಲ್ಲ ಎಂದು ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಗುಜ್ಜಲ ರಾಘವೇಂದ್ರ, ವಿ. ಕನಕಮ್ಮ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರಸಭೆಯ ಸಿಬ್ಬಂದಿ ಈರಣ್ಣ ಮಾತನಾಡಿ, ನಾವು ಈಗಾಗಲೇ ಪರಿಶಿಷ್ಟ ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಮಂಜೂರಾಗಿರುವ 145 ಮನೆಗಳಿಗೆ ಅರ್ಜಿ ಸ್ವೀಕಾರ ಆರಂಭಿಸಿದ್ದೇವೆ. ಈಗ ಎಸ್ಸಿ, ಎಸ್ಟಿ ಮನೆಗಳಿಗೆ ಮಂಜೂರಾತಿ ದೊರೆತಿದ್ದು, ಉಳಿದ ಮನೆಗಳ ನಿರ್ಮಾಣಕ್ಕೂ ಆದೇಶ ಬರುವ ನಿರೀಕ್ಷೆ ಇದೆ. ನಗರಸಭೆ ಸದಸ್ಯರು ಕೆಲ ಅರ್ಜಿಗಳನ್ನು ನೀಡಿದ್ದಾರೆ. ಉಳಿದಂತೆ ಸಾರ್ವಜನಿಕರೇ ಖುದ್ದಾಗಿ ಬಂದು ಅರ್ಜಿ ನೀಡಿದ್ದಾರೆ ಎಂದು ಉತ್ತರಿಸಿದರು.

ಈ ವೇಳೆ ಸದಸ್ಯರು, ಕಳೆದ ಆರು ತಿಂಗಳಿನಿಂದ 600 ಮನೆಗಳು ಮಂಜೂರಾಗಿವೆ ಎಂದು ಹೇಳುತ್ತಲೇ ಬರುತ್ತಿದ್ದೀರಿ, ಪ್ರಗತಿ ಮಾತ್ರ ಶೂನ್ಯವಾಗಿದೆ ಎಂದರು. ಪೌರಾಯುಕ್ತರು ಪ್ರತಿಕ್ರಿಯಿಸಿ, ಎಸ್ಸಿ, ಎಸ್ಟಿ 145 ಮನೆಗಳ ಪೈಕಿ ಈಗ 76 ಅರ್ಜಿಗಳು ಮಾತ್ರ ಬಂದಿವೆ. ಉಳಿದ ಅರ್ಜಿಗಳನ್ನು ಕ್ರೋಡೀಕರಿಸಿ ಶಾಸಕರ ಅನುಮೋದನೆ ಪಡೆದು, ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಲಾಗುವುದು. ಅರ್ಹ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕ್ರಮ ವಹಿಸಲಾಗುವುದು ಎಂದರು.

ಶಾಸಕರು ನಗರಸಭೆಗೆ ಬರಲಿ:

ಸದಸ್ಯ ತಾರಿಹಳ್ಳಿ ಜಂಬುನಾಥ ಮಾತನಾಡಿ, ನಗರಸಭೆಗೆ ಶಾಸಕ ಎಚ್‌.ಆರ್‌. ಗವಿಯಪ್ಪನವರು ಬರಲಿ. ಅಭಿವೃದ್ಧಿ ವಿಷಯದಲ್ಲಿ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ನಗರಸಭೆ ಮಾಡಿದ ಕೆಲಸಗಳನ್ನು ಶಾಸಕರು ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿದೆ ಎಂದರು.

ಸದಸ್ಯ ಅಬ್ದುಲ್‌ ಖದೀರ್‌ ಮಾತನಾಡಿ, ನಗರಸಭೆಯಲ್ಲಿ ನಡೆಯುವ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ಮುನ್ನ ನಿಯಮಾನುಸಾರ ಕ್ರಮವಹಿಸಬೇಕು. ನಗರಸಭೆ ಎಇಇ ಸತೀಶ್‌ ಸರಿಯಾಗಿ ಪರಿಶೀಲಿಸಿ ಜಿಲ್ಲಾಧಿಕಾರಿಯವರ ಅನುಮೋದನೆಗೆ ಕಳುಹಿಸಬೇಕು. ಈಗ ಜಿಲ್ಲಾಧಿಕಾರಿಯವರು ಕೆಲ ಕಾಮಗಾರಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ವಾಪಸ್‌ ಕಳುಹಿಸಿದ್ದಾರೆ ಎಂದು ಸದಸ್ಯರು ಪೌರಾಯುಕ್ತರಿಗೆ ದೂರಿದರು.

ಸದಸ್ಯ ಕೆ. ಗೌಸ್‌ ಮಾತನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್‌ ಕುಮಾರ, ಉಪಾಧ್ಯಕ್ಷ ರೂಪೇಶ್‌ಕುಮಾರ ಸೇರಿದಂತೆ ಸದಸ್ಯರು ಸಭೆಯಲ್ಲಿದ್ದರು.

ಸ್ಮಶಾನ ಜಾಗ ಸ್ಥಳಾಂತರಕ್ಕಾಗಿ ಸದಸ್ಯರ ನಡುವೆ ಜಟಾಪಟಿ

ನಗರದ ಜಂಬುನಾಥ ರಸ್ತೆಯಲ್ಲಿರುವ ಸ್ಮಶಾನ ಸ್ಥಳಾಂತರ ಮಾಡಬೇಕು. ಇಲ್ಲಿ ಶವಗಳನ್ನು ಸುಡುವುದರಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳು ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಒಂದು ಸ್ಥಳಾಂತರ ಮಾಡಿ, ಇಲ್ಲವೇ ಎಲೆಕ್ಟ್ರಿಕಲ್‌ ಯಂತ್ರಗಳನ್ನು ಅಳವಡಿಕೆ ಕಾರ್ಯ ಮಾಡಬೇಕು ಎಂದು ಸದಸ್ಯ ಶೇಕ್ಷಾವಲಿ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ಈ ವೇಳೆ ಸದಸ್ಯ ರಮೇಶ್‌ ಗುಪ್ತಾ ಮಾತನಾಡಿ, ಇದು 1910ರಿಂದ ಇರುವ ಸ್ಮಶಾನವಾಗಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿಲ್ಲ. ಇದರಲ್ಲಿ ರಾಜಕೀಯ ಬೆರೆತಿದೆ. ಆರ್ಯ ಸಮಾಜದವರ ಆಸ್ತಿಯಾಗಿದೆ. ಇದಕ್ಕೆ ದಾಖಲೆಗಳಿವೆ. ಸ್ಥಳಾಂತರ ಮಾಡಿದರೆ ನಮಗೆ ಐದು ಎಕರೆ ಜಾಗ ಸೂಕ್ತ ಸ್ಥಳದಲ್ಲಿ ನೀಡಲಿ ಎಂದರು.

ಇದಕ್ಕೆ ಸದಸ್ಯ ಶೇಕ್ಷಾವಲಿ ಖಾರವಾಗಿಯೇ ಪ್ರತಿಕ್ರಿಯಿಸಿ, ಜನರ ಸಮಸ್ಯೆಗಾಗಿ ನಾವು ಸದಸ್ಯರಾಗಿ ಧ್ವನಿ ಎತ್ತಿದ್ದೇವೆ. ಇದರಲ್ಲಿ ರಾಜಕೀಯ ಏನಿಲ್ಲ. ಪಕ್ಕದಲ್ಲೇ ಇನ್ನೊಂದು ಸ್ಮಶಾನ ಇದೆ. ಅಲ್ಲಿ ಹೂಳಲಾಗುತ್ತದೆ. ಇಲ್ಲಿ ಶವಗಳನ್ನು ಕಟ್ಟಿಗೆಯಿಂದ ಸುಡಲಾಗುತ್ತದೆ. ಜನರು ವಾಸನೆಯಿಂದ ಕಂಗೆಟ್ಟಿದ್ದಾರೆ. ಇದರಲ್ಲಿ ರಾಜಕೀಯ ಎಲ್ಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯ ಗುಜ್ಜಲ ರಾಘವೇಂದ್ರ ಕೂಡ ಧ್ವನಿಗೂಡಿಸಿದರು. ಆಗ ಸದಸ್ಯರಾದ ರಮೇಶ್‌ ಗುಪ್ತಾ, ಶೇಕ್ಷಾವಲಿ ನಡುವೆ ಏಕವಚನದಲ್ಲೇ ಮಾತಿನ ಚಕಮಕಿ ನಡೆಯಿತು.

ಸದಸ್ಯ ರಮೇಶ್ ಗುಪ್ತಾ ಮಾತನಾಡಿ, ನಮ್ಮ ಸಮಾಜ ಯಾರಿಗೂ ಅನ್ಯಾಯ ಮಾಡಿಲ್ಲ. ಸ್ಮಶಾನ ನಮ್ಮ ಸಮಾಜದ ಆಸ್ತಿ ಎನ್ನುತ್ತಲೇ, ಸದಸ್ಯ ಗುಜ್ಜಲ ರಾಘವೇಂದ್ರ ಪ್ರತಿಕ್ರಿಯಿಸಿ, ನಮ್ಮ ಸಮಾಜ ಯಾರಿಗೆ ತೊಂದರೆ ಮಾಡಿದೆ. ಇಲ್ಲಿ ಆ ಸಮಾಜ, ಈ ಸಮಾಜ ಬರುವುದಿಲ್ಲ. ಜನರಿಗೆ ತೊಂದರೆಯಾಗುತ್ತಿರುವುದನ್ನು ಚರ್ಚಿಸಿದ್ದೇವೆ ಎಂದರು. ಈ ವೇಳೆ ಸದಸ್ಯರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಚರ್ಚೆ ತಲುಪಿತ್ತು. ಆಗ ಉಳಿದ ಸದಸ್ಯರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ವೇಳೆ ಸದಸ್ಯೆ ರೋಹಿಣಿ ವೆಂಕಟೇಶ್‌ ಮಾತನಾಡಿ, ನಗರಸಭೆಯ ಸಾಮಾನ್ಯ ಸಭೆಯೋ ಫಿಶ್ ಮಾರ್ಕೆಟ್ ನಾ? ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಭೆ ತಿಳಿಗೊಳಿಸಬೇಕು. ಒಬ್ಬರು ಸದಸ್ಯರು ಮಾತನಾಡುವಾಗ, ಇನ್ನೋರ್ವ ಸದಸ್ಯರು ಮಾತನಾಡಬಾರದು. ಎಲ್ಲರೂ ಮಾತನಾಡಿದರೇ ಈ ರೀತಿ ಗೊಂದಲ ಏರ್ಪಡುತ್ತದೆ ಎಂದು ಖಾರವಾಗಿಯೇ ಹೇಳಿದರು.

ಪೌರಾಯುಕ್ತರು, ಸ್ಮಶಾಸನ ಪರಿಶೀಲನೆ ಮಾಡಿ ಸೂಕ್ತ ಕ್ರಮ ವಹಿಸುವವರೆಗೆ ಈ ವಿಷಯದ ಬಗ್ಗೆ ಯಾರೂ ಚರ್ಚಿಸಬೇಡಿ. ನಗರಸಭೆಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

Share this article