ಗಾಂಧಿ ಕನಸಿನ ಭಾರತ ಕಟ್ಟಲು ಶಾಸಕ ಬಿ.ಆರ್.ಪಾಟೀಲ್ ಕರೆ

KannadaprabhaNewsNetwork |  
Published : Oct 29, 2024, 12:48 AM IST
ಫೋಟೋ- ಗಾಂಧೀಜಿ 1 ಮತ್ತು ಗಾಂಧೀಜಿ 2 | Kannada Prabha

ಸಾರಾಂಶ

ಕಲಬುರಗಿಯ ಪಂಡಿತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರಗಿ ರಂಗಾಯಣದಿಂದ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ‘ಬಾಪೂಜಿ’ ತೊಗಲು ಬೊಂಬೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಸಲಹೆಗಾರ ಬಿ.ಆರ್ ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಗಾಂಧೀಜಿಯವರನ್ನು ಜಗತ್ತಿನ ಇತರೆ ದೇಶಗಳು ಗೌರವಿಸಿ ಪೂಜಿಸುತ್ತಾರೆ. ಆದರೆ, ಭಾರತ ದೇಶದಲ್ಲಿ ಗಾಂಧೀಜಿಯ ಚಾರಿತ್ರ್ಯಹರಣ ಮಾಡುತ್ತಿರುವುದು ನೋವಿನ ಸಂಗತಿ ಎಂದು ಸಿಎಂ ಸಲಹೆಗಾರ ಬಿ.ಆರ್ ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಪಂಡಿತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರಗಿ ರಂಗಾಯಣದಿಂದ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ‘ಬಾಪೂಜಿ’ ತೊಗಲು ಬೊಂಬೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಬಗ್ಗೆ ಗಾಂಧೀಜಿಗೆ ಸಾಕಷ್ಟು ಒಲವಿತ್ತು. ಬಸವಣ್ಣ ಹೇಳಿದ್ದನ್ನೇ ಗಾಂಧೀಜಿಯವರು ತಮ್ಮ ಅಹಿಂಸಾ ತತ್ವ ಸಾರುವ ಮೂಲಕ ಗಾಂಧೀಜಿ ಜಗತ್ತಿನ 186ಕ್ಕೂ ಹೆಚ್ಚಿನ ದೇಶಗಳಿಗೆ ಮಾದರಿಯಾಗಿದ್ದಾರೆ. ಗಾಂಧೀಜಿಯನ್ನು ಮೀರಿಸುವ ಎರಡನೇ ಶಕ್ತಿ ಇಂದಿಗೂ ಜಗತ್ತಿನಲ್ಲಿ ಹುಟ್ಟಿಲ್ಲ. ನಾವೆಲ್ಲರೂ ಸೇರಿ ಬಾಪು ಕನಸಿನ ಭಾರತ ಕಟ್ಟಬೇಕಿದೆ ಎಂದರು.

ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಗಾಂಧೀಜಿಯವರ ಜೀವನ ಸ್ಫೂರ್ತಿಯಾಗಬೇಕೆಂದರು. ಲೇಖಕಿ ಆಶಾದೇವಿ, ಗಾಂಧಿ ಹೇಳಿದ ಸರಳ ಸ್ವಾವಲಂಬಿ ಬದುಕಿಗೆ ನಾವು ಮರಳಬೇಕಿದೆ. ಗಾಂಧಿಯ ಆದರ್ಶಗಳಿಂದ ನಾಗರೀಕತೆ ಉಳಿಯಲು ಸಾಧ್ಯವೆಂದರು.

ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಗ್ರಾಮೀಣ, ಹೋಬಳಿ ಮಟ್ಟಕ್ಕೂ ಕಲಬುರಗಿ ರಂಗಾಯಣ ತೆಗೆದುಕೊಂಡು ಹೋಗುತ್ತೇವೆ. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಅವರ ತತ್ವಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸ ರಂಗಾಯಣ ಮಾಡಲಿದೆ ಎಂದರು.

ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ನಾಸಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಾರ್ಥ ಚಿಮ್ಮಾಇದ್ಲಾಯಿ ತಂಡದಿಂದ ಗಾಂಧೀಜಿ ಕುರಿತು ಗೀತ ಗಾಯನ ನಡೆಯಿತು. ಬಳ್ಳಾರಿ ಶ್ರೀರಾಮಾಂಜನೇಯ ತೊಗಲು ಬೊಂಬೆ ಮೇಳದ ಬೆಳಗಲ್ಲು ಹನುಮಂತ ಅವರು ಬೆಳಗಲ್ಲು ವೀರಣ್ಣ ನಿರ್ದೇಶನದ ತೊಗಲು ಬೊಂಬೆಯಾಟ ಪ್ರಸ್ತುತ ಪಡಿಸಿದರು. ಕಪಿಲ ಚಕ್ರವರ್ತಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!