ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆಬಿಲ್ಡರ್‌ಗಳು ಎಲ್ಲಾ ದಾಖಲೆ ನೀಡಬೇಕು

KannadaprabhaNewsNetwork |  
Published : Jul 19, 2026, 03:00 AM IST
ಶಾಸಕರಿಗೆ ಸನ್ಮಾನ | Kannada Prabha

ಸಾರಾಂಶ

ಎಲ್ಲಾ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ್ದರೂ ಅಪಾರ್ಟ್‌ಮೆಂಟ್‌ ಮೇಲೆ ಹಿಡಿತ ಸಾಧಿಸುವ, ಅಸೋಸಿಯೇಷನ್ ಚಟುವಟಿಕೆಗಳ ಮೇಲೆ ಮೂಗು ತೂರಿಸುವ, ಜಾಗ ನನ್ನದು ಎನ್ನುವ ಮನೋಭಾವ ತೋರುವ ಬಿಲ್ಡರ್‌, ಡೆವಲಪರ್, ಪ್ರಮೋಟರ್‌ಗಳ ಪ್ರಾಬಲ್ಯಕ್ಕೆ ‘ಕರ್ನಾಟಕ ಅಪಾರ್ಟ್‌ಮೆಂಟ್ (ನಿರ್ವಹಣೆ ಮತ್ತು ಮಾಲೀಕತ್ವ) ಕಾಯ್ದೆ-2026’ರ ಕರಡು ವಿಧೇಯಕದಲ್ಲಿ ಇತಿಶ್ರೀ ಹೇಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಲ್ಲಾ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ್ದರೂ ಅಪಾರ್ಟ್‌ಮೆಂಟ್‌ ಮೇಲೆ ಹಿಡಿತ ಸಾಧಿಸುವ, ಅಸೋಸಿಯೇಷನ್ ಚಟುವಟಿಕೆಗಳ ಮೇಲೆ ಮೂಗು ತೂರಿಸುವ, ಜಾಗ ನನ್ನದು ಎನ್ನುವ ಮನೋಭಾವ ತೋರುವ ಬಿಲ್ಡರ್‌, ಡೆವಲಪರ್, ಪ್ರಮೋಟರ್‌ಗಳ ಪ್ರಾಬಲ್ಯಕ್ಕೆ ‘ಕರ್ನಾಟಕ ಅಪಾರ್ಟ್‌ಮೆಂಟ್ (ನಿರ್ವಹಣೆ ಮತ್ತು ಮಾಲೀಕತ್ವ) ಕಾಯ್ದೆ-2026’ರ ಕರಡು ವಿಧೇಯಕದಲ್ಲಿ ಇತಿಶ್ರೀ ಹೇಳಲಾಗಿದೆ.

ಕರಡು ವಿಧೇಯಕವು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಿ ಕಾಯ್ದೆಯ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿ, ಪೂರಕ ಎನಿಸುವ, ಸೂಕ್ತ ಎನಿಸುವ ಅಂಶಗಳನ್ನು ಪರಿಶೀಲಿಸಿ ಸೇರ್ಪಡೆಗೊಳಿಸಲು ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಸೋಸಿಯೇಷನ್ ಪ್ರತಿನಿಧಿಗಳಿಂದ ನೇರವಾಗಿಯು ಅಭಿಪ್ರಾಯ ಸಂಗ್ರಹಿಸಲಾಗಿದೆ.

ಜಾಗದ ಒಡೆತನ, ಅಪಾರ್ಟ್‌ಮೆಂಟ್‌ನ ಕಾಮನ್ ಏರಿಯಾ ಬಳಕೆ, ನಿರ್ವಹಣೆ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಅನೇಕ ವರ್ಷಗಳಿಂದ ಬಿಲ್ಡರ್‌ಗಳು ಫ್ಲ್ಯಾಟ್ ಮಾಲೀಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಯೋಜನೆ ಸಂಪೂರ್ಣವಾಗಿ ಮುಗಿದಿದ್ದರೂ ಜಾಗದಲ್ಲಿ ನಮ್ಮದು ವಿಶೇಷ ಪಾಲು ಇದೆ ವಾದಿಸಿದ್ದಾರೆ. ಆದರೆ, ಇನ್ನು ಮುಂದೆ ಅವಿಭಾಜಿತ ಪಾಲು (ಯುಡಿಎಸ್) ಕುರಿತಾದ ವಿವರಗಳನ್ನೆಲ್ಲ ಆಸ್ತಿ ಖರೀದಿ ಪತ್ರದಲ್ಲಿಯೇ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎನ್ನುವುದನ್ನು ‍ಕರಡು ವಿಧೇಯಕದಲ್ಲಿ ಸ್ಪಷ್ಟಪಡಿಸಲಾಗಿದೆ.

ಬಿಲ್ಡರ್‌ಗಳ ಕಿರುಕುಳದಿಂದ ಬೇಸತ್ತು ಫ್ಲ್ಯಾಟ್ ಮಾಲೀಕರು ಸಿವಿಲ್ ನ್ಯಾಯಾಲಯ, ರೇರಾ, ಗ್ರಾಹಕರ ನ್ಯಾಯಾಲಯಗಳ ಮೆಟ್ಟಿಲೇರಿದ್ದಾರೆ. ಹಲವು ಪ್ರಕರಣಗಳು ಈಗಲೂ ವಿಚಾರಣೆ ಹಂತದಲ್ಲಿವೆ. ಆದರೆ, ವಿಧೇಯಕದಲ್ಲಿ ಫ್ಲ್ಯಾಟ್ ಮಾಲೀಕರು, ಖರೀದಿದಾರರಿಗೆ ಇರುವ ಹಕ್ಕುಗಳ ಕುರಿತು ಸ್ಪಷ್ಟತೆ ನೀಡಿದೆ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಮಾಜಿ ಅಧ್ಯಕ್ಷ ವಿಕ್ರಮ್ ರೈ ತಿಳಿಸಿದರು.

ಎಲ್ಲಾ ದಾಖಲೆಗಳನ್ನು ಹಸ್ತಾಂತರಿಸಬೇಕು:

ಅಪಾರ್ಟ್‌ಮೆಂಟ್ ಅಸೋಸಿಯೇಷನ್ ರಚನೆಯಾದ ನಂತರ ಅಪಾರ್ಟ್‌ಮೆಂಟ್ ಜಾಗದ ಒಡೆತನ ಕುರಿತಾದ ದಾಖಲೆಗಳು, ಲೀಸ್ ದಾಖಲೆ, ಪ್ರಮಾಣಪತ್ರ, ಪ್ಲಾನ್ ಅನುಮೋದನೆ, ನಿರ್ಮಾಣ ಪೂರ್ಣಗೊಳಿಸಿರುವ ಕುರಿತಾದ ಪ್ರಮಾಣಪತ್ರಗಳು, ಕಟ್ಟಡ ಡ್ರಾಯಿಂಗ್, ಸ್ಟ್ರಕ್ಚರಲ್ ಡ್ರಾಯಿಂಗ್, ಅಗ್ನಿ ಸುರಕ್ಷತೆ, ಲಿಫ್ಟ್ ಸುರಕ್ಷತೆ, ಪರಿಸರ ಸಂಬಂಧಿಸಿದ ಅನುಮೋದನೆಗಳು, ವಿಮೆ, ಇ.ಸಿ ಮತ್ತು ಸಂಬಂಧಿಸಿದ ದಾಖಲೆಗಳು, ವೈರಿಂಗ್, ಪ್ಲಂಬಿಂಗ್ ಲೇಔಟ್ ಪ್ಲಾನ್ ಮತ್ತಿತರ ಸೇವೆಗಳ ದಾಖಲೆಗಳು ಹಾಗೂ ಸಾಮಗ್ರಿ ಖರೀದಿ ವಾರಂಟಿ ದಾಖಲೆಗಳನ್ನು ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಹಸ್ತಾಂತರಿಸಬೇಕು.

ಒಂದು ವೇಳೆ ಡೆವಲಪರ್‌ಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರೆ ಅಥವಾ ಫ್ಲ್ಯಾಟ್ ಮಾರಾಟದ ಸಂದರ್ಭದಲ್ಲಿ ನೀಡಿದ ಭರವಸೆಗೆ ತದ್ವಿರುದ್ಧವಾಗಿ ನಡೆದುಕೊಂಡರೆ ಫ್ಲ್ಯಾಟ್ ಮಾಲೀಕರು ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಪಡೆದಿರುವ ಅಡಮಾನ ಸಾಲ ಮತ್ತಿತರ ಬಾಕಿ ವಿವರಗಳನ್ನು ಕಡ್ಡಾಯವಾಗಿ ಫ್ಲ್ಯಾಟ್ ಖರೀದಿದಾರರಿಗೆ ತಿಳಿಸಬೇಕು. ಸಂಬಂಧಿಸಿದ ದಾಖಲೆಗಳನ್ನು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗೆ ಹಸ್ತಾಂತರಿಸಬೇಕು. ಒಮ್ಮೆ ಮಾರಾಟ ಮಾಡಿದ ಬಳಿಕ ಜಾಗದ ದಾಖಲೆ, ಕಟ್ಟಡಗಳನ್ನು ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲ. ಎಂಟಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ ಈ ವಿಧೇಯಕ ಅನ್ವಯವಾಗುತ್ತದೆ ಎಂದು ವಿಕ್ರಮ್ ರೈ ತಿಳಿಸಿದರು.

30 ವರ್ಷಗಳ ಬಳಿಕ ಕಟ್ಟಡ ಗುಣಮಟ್ಟ ತಪಾಸಣ

ನಿರ್ಮಾಣವಾದ 30 ವರ್ಷಗಳ ಬಳಿಕ ಕಡ್ಡಾಯವಾಗಿ ಅಪಾರ್ಟ್‌ಮೆಂಟ್ ಕಟ್ಟಡದ ಒಟ್ಟಾರೆ ಗುಣಮಟ್ಟ ತಪಾಸಣೆ (ಸ್ಟ್ರಕ್ಚರಲ್ ಸ್ಟೆಬಿಲಿಟಿ) ಮಾಡಿಸಬೇಕು. ನಂತರದ ಪ್ರತಿ 5 ವರ್ಷಗಳಿಗೊಮ್ಮೆ ತಪಾಸಣೆ ಮಾಡಿಸುತ್ತಿರಬೇಕು ಎಂದು ಕರಡು ವಿಧೇಯಕದಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಗೀತೆಗೆ ಬೌದ್ಧರುದ್ಯಾನ ಪದಸೇರ್ಪಡೆಗೆ ಸಂಘ-ಸಂಸ್ಥೆ ಬೆಂಬಲ
ಹಾಸನದಲ್ಲಿ ರೌಡಿ ಶೀಟರ್ ಮಂಜೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು