ಬಳ್ಳಾರಿ: ಮಾದಕ ಮುಕ್ತ ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ತಿಳಿಸಿದ್ದಾರೆ.
ಇಂದಿನ ದಿನಗಳಲ್ಲಿ ದೇಶದ ಯುವಶಕ್ತಿಯು ಮಾದಕ ವ್ಯಸನಗಳ ಜಾಲಕ್ಕೆ ಸಿಲುಕಿ ತತ್ತರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಯುವಜನತೆಯನ್ನು ಈ ಮಾರಕ ಜಾಲದಿಂದ ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಯುವಶಕ್ತಿ ದೇಶದ ಬೆನ್ನೆಲುಬು. ಅವರು ದಾರಿ ತಪ್ಪದಂತೆ ನೋಡುವುದು ಮತ್ತು ಮಾದಕ ದ್ರವ್ಯಗಳ ಮುಕ್ತ ಸಮಾಜವನ್ನು ನಿರ್ಮಿಸುವುದು ಕೇವಲ ಕಾನೂನು ಸಂಸ್ಥೆಗಳ ಕೆಲಸವಲ್ಲ, ಅದು ಇಡೀ ಸಮಾಜದ ಹೊಣೆಯಾಗಿದೆ ಎಂದು ಅವರು ಕರೆ ನೀಡಿದರು.ಸಮಾಜದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದ್ದು, ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ಮಾದಕ ವಸ್ತುಗಳಿಂದ ದೂರವಿರುತ್ತೇನೆ ಎಂಬ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡಲಾಯಿತು.
ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಗಣ್ಯರು ಚಾಲನೆ ನೀಡಿದರು.
ಜಾಥಾವು ಬಿಎಂಸಿಆರ್‌ಸಿ ಮೈದಾನದಿಂದ ಆರಂಭಗೊಂಡು ಸುಧಾ ಕ್ರಾಸ್ ವೃತ್ತ, ಇನ್‌ಫ್ಯಾಂಟರಿ ರಸ್ತೆ, ಎಸ್‌ಪಿ ವೃತ್ತ, ಕನಕ ದುರ್ಗಮ್ಮ ದೇವಸ್ಥಾನದ ವೃತ್ತದ ಮೂಲಕ ಎಸ್‌ಪಿ ಕಚೇರಿ ಆವರಣಕ್ಕೆ ತಲುಪಿ ಅಂತ್ಯಗೊಂಡಿತು.
ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ದುಷ್ಪರಿಣಾಮಗಳನ್ನು ಬಿಂಬಿಸುವ ವಿವಿಧ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿಶೇಷವಾಗಿ, ಧೂಮಪಾನ ಮತ್ತು ಮಾದಕ ದ್ರವ್ಯಗಳು ಮನುಷ್ಯನ ಜೀವಕ್ಕೆ ಹೇಗೆ ಕಂಟಕವಾಗುತ್ತವೆ ಎಂಬುದನ್ನು ತೋರಿಸುವ ‘ಡ್ರಗ್ಸ್ ಜೀವವನ್ನು ನಾಶಪಡಿಸುತ್ತವೆ’ಎಂಬ ಸಂದೇಶವುಳ್ಳ ತಲೆಬುರುಡೆಯ ಆಕೃತಿಯು ಎಲ್ಲರ ಗಮನ ಸೆಳೆಯಿತು.