ರಾಮನಗರ: ಸಾಂಸ್ಕೃತಿಕ ಮನಸ್ಸನ್ನು ಕಟ್ಟುವಲ್ಲಿ ಶೈಕ್ಷಣಿಕ ಕ್ಷೇತ್ರ ಸಫಲವಾದಾಗ ಜೀವಪರವಾದ ಸಮಾಜವನ್ನು ನಿರ್ಮಾಣ ಮಾಡುವುದು ಸಾಧ್ಯವಾಗುತ್ತದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಯುದ್ಧ, ಕ್ರೌರ್ಯ, ಹಿಂಸೆ, ಜನಾಂಗೀಯ ದ್ವೇಷಗಳಿಂದ ಜನ ತತ್ತರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ತಿರುಚಿದ ಚರಿತ್ರೆಯನ್ನು ಬೋಧಿಸುವುದರಿಂದ ಯುವಜನರ ಮನಸ್ಸು ಹಾದಿ ತಪ್ಪುತ್ತಿದೆ. ಕ್ರೌರ್ಯ, ಹಿಂಸೆಗಳು ಹಿಂದೆಂದೂ ಈ ಪ್ರಮಾಣದಲ್ಲಿ ಘಟಿಸುತ್ತಿರಲಿಲ್ಲ. ಬರ, ಪ್ರವಾಹ, ಇತ್ಯಾದಿ ಪ್ರಾಕೃತಿಕ ವಿಕೋಪಗಳನ್ನು ಕಂಡಿದ್ದೇವೆ. ಮನುಷ್ಯ ನಿರ್ಮಿತವಾದ ಎರಡು ಮಹಾ ಯುದ್ಧಗಳ ನಂತರ ಬಂದ ರಾಜಕಾರಣಿಗಳು ಹಿಂಸೆಯನ್ನು ಪ್ರತಿಪಾದಿಸುವ ಮನಸ್ಸನ್ನು ಹೊಂದಿರಲಿಲ್ಲ ಎಂದು ಹೇಳಿದರು.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅದೆಷ್ಟೋ ಜನರ ಕೊಲೆ, ಹಿಂಸೆ, ಕಣ್ಣೀರಿಗೆ ಕಾರಣನಾಗಿದ್ದಾನೆ. ಅವನು ಸಾಂಸ್ಕೃತಿಕ ಮನಸ್ಸಿಗನಲ್ಲ. ರಾಜಕಾರಣಿಗಳಿಗೆ ಸಾಂಸ್ಕೃತಿಕ ಮನಸ್ಸು ಇದ್ದಲ್ಲಿ ಕ್ರೌರ್ಯ ನಡೆಯದೆ ಶಾಂತಿ ನೆಲೆಸುತ್ತದೆ. ಹಿಟ್ಲರ್ ಜನಾಂಗೀಯ ದ್ವೇಷ ಮತ್ತು ವರ್ಣ ದ್ವೇಷ ಇತ್ಯಾದಿಗಳನ್ನು ನಡೆಸಿದ್ದರಿಂದಾಗಿ ಕ್ರೌರ್ಯ ವಿಪರೀತವಾಯಿತು ಎಂದು ವಿಷಾದಿಸಿದರು.ಸಾಂಸ್ಕೃತಿಕ ಮನಸ್ಸು ಸ್ಪರ್ಧೆಯಲ್ಲಿ ಸ್ನೇಹ ಮತ್ತು ಬಾಂಧವ್ಯವನ್ನು ಸಂವಧಿಸುತ್ತದೆ. ರಾಷ್ಟ್ರ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳು ಮನಷ್ಯ, ಮನುಷ್ಯನ ನಡುವಿನ ಸ್ನೇಹ ಮತ್ತು ಭ್ರಾತೃತ್ವ ಭಾವನೆಗಳನ್ನು ವೃದ್ಧಿಸುತ್ತವೆ. ಗೆದ್ದವರು ಸೋತವರಿಗೆ ಹಸ್ತ ಲಾಘವ ನೀಡಿ, ಆತ್ಮವಿಶ್ವಾಸ ವೃದ್ಧಿಸಬೇಕು. ಆದರೆ, ಮೊನ್ನೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಆಟಗಾರರು ಹಸ್ತಲಾಘವ ನೀಡದಿರುವುದು ದೇಶ ತಲೆ ತಗ್ಗಿಸುವ ವಿಚಾರವಾಗಿದೆ. ಶತೃತ್ವವನ್ನು ಗೆಲ್ಲುವುದೇ ಕ್ರೀಡಾ ಸ್ಫೂರ್ತಿ. ಸೋಲು ಗೆಲುವಿಗಿಂತ ಮುಖ್ಯವಾಗಿ ಸ್ನೇಹ ಬಾಂಧವ್ಯ ವೃದ್ಧಿಯಾಗಬೇಕು. ಅದು ನಿಜವಾದ ಸಾಂಸ್ಕೃತಿಕ ಗೆಲುವು ಎಂದು ಸಿದ್ದರಾಮಯ್ಯ ಹೇಳಿದರು.
ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳನ್ನು ಮೂಟೆಗಟ್ಟಲೆ ತುಂಬುವುದು ಶಿಕ್ಷಕರ ಕೆಲಸವಲ್ಲ. ವಿದ್ಯಾರ್ಥಿಗಳ ಮೃದು ಮನಸ್ಸನ್ನು ಮನುಷ್ಯ ಮತ್ತು ಜೀವ ಜಗತ್ತನ್ನು ಪ್ರೀತಿಸುವಂತೆ ಮಾಡುವ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಬೆಳೆಸಬೇಕು. ಜೀವ ಜಗತ್ತಿನ ಉಳಿವಿಗೆ ಮಿಡಿಯುವಂತೆ ಮಾಡುವುದೇ ನಿಜವಾದ ಸಾಂಸ್ಕೃತಿಕ ಜವಾಬ್ದಾರಿ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು, ಗೆಲುವು, ಪ್ರಶಸ್ತಿ ಪತ್ರ, ಸ್ಮರಣಿಕೆ ಪತ್ರ, ಬಹುಮಾನಗಳು ಮುಖ್ಯವಾಗುವುದಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳ ನಡುವಿನ ಒಡನಾಟ, ನೃತ್ಯ ಮಾಡುವ ಶೈಲಿ, ವಾದ ಮಂಡಿಸುವ ರೀತಿ, ಪರಸ್ಪರ ಪ್ರೀತಿ, ವಿಶ್ವಾಸಗಳನ್ನು ಬೆಳೆಸಿಕೊಳ್ಳುವುದು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ದೊರೆಯುವ ಪ್ರಮುಖ ಪ್ರಯೋಜನಗಳಾಗಿರುತ್ತವೆ ಎಂದು ತಿಳಿಸಿದರು.
ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಜಿಲ್ಲೆಯ ೯೫ ಕಾಲೇಜುಗಳಿಂದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಸುಪ್ತವಾಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಲಭ್ಯವಾಗಿದೆ. ಬಹುಮಾನ ಜತೆಗೆ ಸ್ಪರ್ಧಾ ವಿಷಯದಲ್ಲಿ ಆಳವಾದ ಅಧ್ಯಯನ ಮತ್ತು ಪ್ರದರ್ಶನ ಮಾಡುವ ಅವಕಾಶದಿಂದ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಹಾಗೂ ಸಾರ್ವಜನಿಕ ಜೀವನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.
16ಕೆಆರ್ ಎಂಎನ್ 3.ಜೆಪಿಜಿ