ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ್ ಮೈ ಭಾರತ್, ತುಮಕೂರು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಯುವ ಸಂವಾದ -2026ರ ಅಂಗವಾಗಿ ನಡೆದ ನಿಮ್ಮ ಮತವನ್ನು ತಿಳಿಯಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
18ವರ್ಷ ಪೂರ್ಣಗೊಳಿಸಿದ ಪ್ರತಿ ಅರ್ಹ ನಾಗರಿಕನಿಗೂ ಮತದಾನದ ಹಕ್ಕಿದೆ. ಮತದಾನ ಕೇವಲ ಹಕ್ಕು ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಪ್ರಜಾಪ್ರಭುತ್ವದ ಮೌಲ್ಯ ಉಳಿಸಿ ಬೆಳೆಸುವಲ್ಲಿ ಯುವಜನತೆ ಪಾತ್ರ ಮಹತ್ವದ್ದಾಗಿದೆ. ಯುವಕರು ಮತದಾನದ ಪ್ರಕ್ರಿಯೆ, ಅದರ ಮಹತ್ವ ಹಾಗೂ ತಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿಗಳ ಕುರಿತು ಅರಿವು ಹೊಂದಬೇಕು. ದೇಶದ ಆಸ್ತಿಯಾಗಿರುವ ಜಾಗೃತ ಮತದಾರರು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ತಮ್ಮ ಜ್ಞಾನ, ಕೌಶಲ್ಯ ಹಾಗೂ ಸಾಮರ್ಥ್ಯವನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದರ ಜತೆಗೆ ಜೀವನದಲ್ಲಿ ಉನ್ನತ ಗುರಿ ಹೊಂದಿ ಸಾಧನೆಯತ್ತ ಸಾಗಬೇಕು. ವೈಯಕ್ತಿಕ ಬೆಳವಣಿಗೆಯೊಂದಿಗೆ ದೇಶದ ಅಭಿವೃದ್ಧಿಗೂ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಂಡಾಗ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.ಯುವಶಕ್ತಿಯೇ ಭವಿಷ್ಯ: ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಬಿ. ಶೇಖರ್ ಮಾತನಾಡಿ, ಯುವಜನರಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶ, ಕೌಶಲ್ಯ ತರಬೇತಿ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅತ್ಯಗತ್ಯ. ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ. ಯುವಕರ ಕನಸು, ಪರಿಶ್ರಮ ಮತ್ತು ಸಾಧನೆಯೇ ವಿಕಸಿತ ಭಾರತದ ಭವಿಷ್ಯ ಹಾಗೂ ದೇಶದ ನಿಜವಾದ ಶಕ್ತಿ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಮಹಾಂತೇಶ್ ಬಂಡಿ ಅವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಮಾಹಿತಿ ನೀಡಿದರು. ಎಸ್‌ಐಆರ್ ಜಾರಿಗೊಳಿಸುವ ಉದ್ದೇಶ, ಅದರ ಪ್ರಕ್ರಿಯೆ, ಸಾಧಕ - ಬಾಧಕಗಳು ಹಾಗೂ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವ ಅಗತ್ಯದ ಕುರಿತು ವಿವರಿಸಿದರು. ಮೃತಪಟ್ಟವರ ಹೆಸರಿನಲ್ಲಿ ಮತದಾರರ ಗುರುತಿನ ಚೀಟಿಗಳು ಉಳಿಯುವುದು ಸೇರಿದಂತೆ ಮತದಾರರ ಪಟ್ಟಿಯ ದುರುಪಯೋಗ ತಡೆಯುವಲ್ಲಿ ಈ ಪ್ರಕ್ರಿಯೆ ಮಹತ್ವವನ್ನು ತಿಳಿಸಿದರು. ಕೆ. ಶ್ರೀವಾಣಿ ಸ್ವಾಗತಿಸಿದರು. ವರ್ಷಿತ ನಿರೂಪಿಸಿದರು.