ಕೊಪ್ಪಳ: ದೊಡ್ಡವರು ಊರಿಗೊಂದು ಗುಡಿ ಕಟ್ಟಿದರೆ, ಶಾಲಾ ಮಕ್ಕಳು ‘ಮನೆಗೊಂದು ಗ್ರಂಥಾಲಯ’ ನಿರ್ಮಿಸುವ ಮೂಲಕ ತಮ್ಮ ಮನೆಯೊಳಗೇ ಜ್ಞಾನದ ಗುಡಿ ಕಟ್ಟಿದ್ದಾರೆ ಎಂದು ಶ್ರೀ ಗವಿಮಠ ಸಂಸ್ಥಾನದ ಕಡಲಬಾಳು ಶಾಖಾ ಮಠದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಹೇಳಿದರು.
ಪುಸ್ತಕ ದೇವಾಲಯವಿದ್ದಂತೆ. ಪುಸ್ತಕ ಓದುವುದರಿಂದ ಮನಸ್ಸಿನ ಗೊಂದಲ ದೂರವಾಗಿ ಜ್ಞಾನ ಮತ್ತು ವಿವೇಚನೆ ಬೆಳೆಯುತ್ತದೆ. ರಾಗ, ದ್ವೇಷ, ದುಃಖ, ಕಾಮ, ಕ್ರೋಧ ಮೊದಲಾದ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಜ್ಞಾನಕ್ಕಿದೆ. ಅಂತಹ ಜ್ಞಾನವನ್ನು ಪುಸ್ತಕಗಳ ಓದಿನಿಂದ ಪಡೆಯಬಹುದು ಎಂದರು.
ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕಾದರೆ ಪಾಲಕರು ಮೊದಲು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ತಂದೆ-ತಾಯಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುವ ಬದಲು ಉತ್ತಮ ಪುಸ್ತಕಗಳನ್ನು ಓದಿದರೆ ಮಕ್ಕಳೂ ಓದುವ ಅಭ್ಯಾಸ ರೂಢಿಸಿಕೊಳ್ಳುತ್ತಾರೆ ಎಂದರು.ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಮಾತನಾಡಿ, ರಾಜ್ಯಾದ್ಯಂತ ಸುಮಾರು ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ. ಬಾಲ್ಯದಲ್ಲಿಯೇ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕು. ‘ಮೊಬೈಲ್ ಬಿಡಿ’ ಎಂದು ಬಲವಂತ ಮಾಡುವ ಬದಲು ಮಕ್ಕಳ ಕೈಗೆ ಪುಸ್ತಕ ನೀಡಿ ಓದುವ ಹವ್ಯಾಸ ಬೆಳೆಸಬೇಕು ಎಂದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಪುಸ್ತಕಗಳ ಕಟ್ಟನ್ನು ಹಿಡಿದು ಶ್ರೀಗವಿಮಠ ಆವರಣದಲ್ಲಿ ಸಂಚರಿಸಿ, ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು.