ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕು ಕಚೇರಿ ಕಂದಾಯ ಭವನ ಸಭಾಂಗಣದಲ್ಲಿ ವಿಪ್ರ ಸಮಾಜ ಸಹಯೋಗದಲ್ಲಿ ನಡೆದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ವೇದಘೋಷ ಹಾಗೂ ಭಗದ್ಗೀತೆ ಪಠಣ ಮೂಲಕ ಆಚರಿಸಲಾಯಿತು. ಶಿರಸ್ತೇದಾರ್ ವರುಣ್ ಮಾತನಾಡಿ ಅದ್ವೈತ ವೇದಾಂತದ ಅಡಿಪಾಯವನ್ನು ಹಾಕಿದ ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಶ್ರೀ ಶಂಕರಾಚಾರ್ಯರ ತತ್ವಗಳ ಮಾರ್ಗದರ್ಶನದಲ್ಲಿ ಎಲ್ಲರೂ ಸಮಾಜ ಕಟ್ಟೋಣ ಎಂದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಸಿ.ಎಸ್.ಅರುಣ್ ಮಾತನಾಡಿ ಎಂಟನೇ ವಯಸ್ಸಿಗೆ ಸನ್ಯಾಸತ್ವ ಪಡೆದು ಹಿಂದೂ ಧರ್ಮದ ಪ್ರಚಾರ ಕಾರ್ಯವನ್ನು ಇಡೀ ದೇಶದಲ್ಲಿ ನಡೆಸಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಮಠಗಳನ್ನು ನಿರ್ಮಿಸಿದ್ದರು. ಶೃಂಗೇರಿ ಮಠ ಅವರ ಬದುಕಿನ ಪ್ರಮುಖ ಸ್ಥಳವಾಗಿದೆ ಎಂದರು.ವಿಪ್ರ ಮುಖಂಡ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ, ಶಂಕರರ ಜನ್ಮದಿನವು ಕೇವಲ ಜಯಂತಿಯಲ್ಲ, ಅದು ದಾರ್ಶನಿಕರ ದಿನ. ನಮ್ಮೆಲ್ಲರ ಮೂಲ ಗುರುಗಳಾದ ಶಂಕರಾಚಾರ್ಯರ ಪರಂಪರೆ ಇಂದಿಗೂ ಅವಿರತವಾಗಿ ಸಾಗುತ್ತಿರುವುದು ನಮ್ಮ ಸೌಭಾಗ್ಯ. ಇಂದು ಪ್ರಪಂಚವು ಯುದ್ಧದ ಕಾರ್ಮೋಡಗಳ ನಡುವೆ ಸಿಲುಕಿ ದಿಕ್ಕು ತಪ್ಪಿ ಸಾಗುತ್ತಿದೆ. ಆದರೆ ಇಂತಹ ಆತಂಕದ ನಡುವೆಯೂ ನಮ್ಮ ದೇಶದಲ್ಲಿ ಶಾಂತಿಯುತ ವಾತಾವರಣವಿದೆ ಎಂದರೆ ಅದಕ್ಕೆ ಈ ಪುಣ್ಯಭೂಮಿಯ ದಾರ್ಶನಿಕ ಚಿಂತನೆಗಳೇ ಕಾರಣ. ಶಂಕರರ ವೈಚಾರಿಕತೆ ಇನ್ನಷ್ಟು ಬೆಳೆಯುವ ಮೂಲಕ ಜಗತ್ತಿಗೆ ಬೆಳಕಾಗಲಿ ಎಂದು ಕರೆ ನೀಡಿದರು.ಉಪನ್ಯಾಸಕ ಮುರುಳೀಧರ್ ಮಾತನಾಡಿ ಶಂಕರರು ಜಾತಿ, ಪಂಗಡ ಹಾಗೂ ದೇಶಗಳನ್ನು ಮೀರಿ ಜಗತ್ತಿಗೆ ಅನ್ವಯವಾಗುವ ಸತ್ಯವನ್ನು ಬೋಧಿಸಿದ ಜಗದ್ಗುರುಗಳು. ಅಂತಃಕರಣ ಶುದ್ಧಿಯಾದರೆ ಪ್ರತಿಯೊಬ್ಬ ಮನುಷ್ಯನಿಗೂ ಮೋಕ್ಷದ ಅಧಿಕಾರವಿದೆ. ಅಜ್ಞಾನದ ನಿವೃತ್ತಿಯೇ ಮುಕ್ತಿಗೆ ದಾರಿ ಎಂದು ಶಂಕರರು ತೋರಿಸಿಕೊಟ್ಟಿದ್ದಾರೆ ಎಂದರು.
ವೇದಿಕೆಯಲ್ಲಿ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಉಪ ತಹಸೀಲ್ದಾರ್ ಖಾನ್ ಸಾಬ್, ಆನಂದ್, ಸ್ವಾಮಿ, ವಿಪ್ರ ಸಮಾಜದ ಜಿ.ಸತೀಶ್, ಕೊಡಿಯಾಲ ರಮೇಶ್, ಶ್ರೀನಿವಾಸ್, ಶಿವಂಪಾಂಡೆ, ಆನಂದ್ ದೀಕ್ಷಿತ್, ಯೋಗ ನರಸಿಂಹರಾಜು, ಶ್ರೀನಾಥ್, ಕಡಬ ರಾಜೇಶ್, ರಾಘವೇಂದ್ರ, ಅರುಣಾ, ರೇಖಾ, ಮೇಘನಾ ಇತರರು ಇದ್ದರು.