ಹಾವೇರಿ: ಹೋರಿ ಬಂತು ಹಿಡೀರಲೇ.... ಹೋರಿ ಬಂತು ಸೈಡ್ ಬಿಡ್ರೀಪಾ... ಅಬ್ಬಬ್ಬಬ್ಬಾ..... ಅಲೆಲೇ... ಹೊಡಿ ಹಲಗಿ, ಹಿಡಿ ಹೋರಿ, ಹರಿ ಕೊಬ್ರಿ... ಹೀಗೆ ಯುವ ಜನತೆಯನ್ನು ಹುಚ್ಚೆಬ್ಬಿಸುವ ಘೋಷಣೆಗಳೊಂದಿಗೆ ನಗರದ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಬುಧವಾರ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ದೀಪಾವಳಿ ಹಬ್ಬಕ್ಕೆ ಮೆರುಗು ನೀಡಿತು.
ಪ್ರಸಕ್ತ ವರ್ಷವೂ ಶ್ರೀ ವೀರಭದ್ರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿತ್ತು. ನಗರದ ಮೈಲಾರ ಮಹದೇವ ವೃತ್ತದಿಂದ ಹಳ್ಳೂರು ಓಣಿವರೆಗೆ ಎತ್ತುಗಳನ್ನು ಓಡಿಸಲಾಯಿತು. ಹೋರಿಗಳನ್ನು ಓಡಿಸುವಾಗ ತಮ್ಮಿಷ್ಟದ ಹೆಸರಿನಲ್ಲಿ ಧ್ವಜವನ್ನು ಹಿಡಿದು ಯುವಕರು ಅಖಾಡದ ಸುತ್ತಲು ಸಂಭ್ರಮದಿಂದ ಕುಣಿಯುತ್ತಿದ್ದರೆ, ಅಖಾಡಕ್ಕೆ ಬಿಟ್ಟ ಹೋರಿ ಚೆಂಗನೇ ಜಿಗಿದು ನಾಗಾಲೋಟದಲ್ಲಿ ಓಡುತ್ತಿದ್ದರೆ, ಮತ್ತೊಂದು ಕಡೆ ಹೋರಿ ಕೊರಳಿಗೆ ಕಟ್ಟಿದ್ದ ಕೊಬ್ಬರಿ ಹಾರವನ್ನು ಹರಿಯಲು ಯುವಕರ ತಂಡವೇ ಮುಗಿಬೀಳುತ್ತಿದ್ದ ದೃಶ್ಯ ರೋಮಾಂಚನಗೊಳಿಸಿತು. ಸಿಳ್ಳೆ, ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದ ಯುವಕರು, ಅಭಿಮಾನಿಗಳು ತಮ್ಮಿಷ್ಟದ ಹೋರಿಗಳು ಅಖಾಡಕ್ಕೆ ಇಳಿಯುತ್ತಿದ್ದಂತೆ ಜನರು ಜೋರಾಗಿ ಕೂಗಿ ಹುರುಪು ನೀಡುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು.
ಸ್ಪರ್ಧೆಗೆಂದೇ ಮೀಸಲಾಗಿರುವ ದಷ್ಟಪುಷ್ಟವಾಗಿ ಕೊಬ್ಬಿದ ಹೋರಿಗಳಿಗೆ ಮಾಲೀಕರು ಕೊಂಬಣಸು, ಜೂಲಾ, ಗೆಜ್ಜೆಸರ, ಗಂಟೆ, ರಿಬ್ಬನ್, ಬಲೂನ್ ಮತ್ತು ಕೊಬ್ಬರಿಗಳನ್ನ ಕಟ್ಟಿ ಶೃಂಗಾರ ಮಾಡಿ ಅಖಾಡಕ್ಕೆ ತರುತ್ತಿದ್ದರು. ಜಿಲ್ಲೆಯ ನಾನಾ ಕಡೆಗಳಿಂದ ಹೋರಿಗಳು ಬಂದು ತಮ್ಮ ಶಕ್ತಿ ಪ್ರದರ್ಶನ ಮಾಡಿದವು.ಹಾವೇರಿ ಅನ್ನದಾತ, ಹಾವೇರಿ ಸಲಗ, ಹಾವೇರಿ ಭೈರವ, ಹಾವೇರಿ ಹುಲಿ, ಹಾವೇರಿ ಅನ್ನದಾತರ ಅಪರಂಜಿ, ಲಕಮಾಪುರ ಕೋಟಿಗೊಬ್ಬ, ಇಮ್ಮಡಿ ಪುಲಕೇಶಿ, ಹಾವೇರಿ ಪವರ್, ಹಾವೇರಿ ಡಾನ್, ಹಾವೇರಿ ಕಿಂಗ್, ಜ್ಯೂನಿಯರ್ ಕಿಂಗ್, ಶಿವಶಕ್ತಿ, ಆರ್‌ಸಿಬಿ, ಜನನಾಯಕ, ಹಾವೇರಿ ಭೀಮ, ಆ್ಯಕ್ಷನ್ ಕಿಂಗ್, ದುಶ್ಯಾಸನ, ಹಾವೇರಿ ದುಷ್ಟ, ವೇದಾ, ಭೈರವ ಹೀಗೆ ನಾನಾರೀತಿಯ ಹೆಸರುಗಳು ಹೋರಿ ಅಭಿಮಾನಿಗಳ ಗಮನಸೆಳೆದವು.