ಸಿರಿಗೆರೆ: ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಮಿಂಚೇರಿ ಗುಡ್ಡದ ಜಾತ್ರೆಗೆ ತಾಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಭಕ್ತರು ಸಂಭ್ರಮದ ಮೆರುಗು ತಂದಿದ್ದಾರೆ. ತಮ್ಮ ಊರಿನಿಂದ ಶನಿವಾರ ಬೆಳಗ್ಗೆ ಪೂಜೆ ಸಲ್ಲಿಸಿ ಎತ್ತಿನಗಾಡಿಗಳಲ್ಲಿ ತೆರಳಿದ್ದ ಭಕ್ತರು ಇಂದು ಸಿರಿಗೆರೆ ಮೂಲಕ ಹಾದು ಸಂಜೆಯ ವೇಳೆಗೆ ಐತಿಹಾಸಿಕ ಮಿಂಚೇರಿ ಗುಡ್ಡ ತಲುಪಿದ್ದಾರೆ.
ಚಕ್ಕಡಿ ಗಾಡಿ ಯಾತ್ರೆ ಎಂದೇ ಪ್ರಸಿದ್ಧವಾದ ಮಿಂಚೇರಿ ಯಾತ್ರೆಯಲ್ಲಿ ಈ ವರ್ಷ ನೂರಾರು ಟ್ರ್ಯಾಕ್ಟರ್, ಟೆಂಪೋ, ಕಾರು ಸಹ ಭಾಗವಹಿಸಿದ್ದು, ಗಮನಾರ್ಹವಾಗಿತ್ತು. ವಾಹನಗಳು ಮುಂದೆ ತೆರಳಿದಂತೆ ಹಲವು ಬಗೆಯಲ್ಲಿ ಶೃಂಗರಿಸಿದ ಸಾಲು ಸಾಲು ಎತ್ತಿನ ಗಾಡಿಗಳಲ್ಲಿ ಭಕ್ತರು ಸಂಭ್ರಮದಿಂದ ತೆರಳಿದ್ದನ್ನು ನೋಡುಗರು ಕಣ್ಣು ತುಂಬಿಕೊಂಡರು.ಮಧ್ಯಾಹ್ನ 12 ಗಂಟೆಗೆ ಸಿರಿಗೆರೆಗೆ ಆಗಮಿಸಬೇಕಾಗಿದ್ದ ಯಾತ್ರೆಯು ಕಡ್ಲೇಗುದ್ದು, ಕೋಣನೂರು, ಚಿಕ್ಕೇನಹಳ್ಳಿ ಗ್ರಾಮಗಳನ್ನು ಹಾಯ್ದು 10 ಗಂಟೆಗೇ ಸಿರಿಗೆರೆಗೆ ಬಂದಿತ್ತು. ಗಾಡಿಗಳನ್ನು ಓಡಿಸುತ್ತಿದ್ದ ಭಕ್ತರು ತಾ ಮುಂದು ಎಂಬ ಸ್ಪರ್ಧೆಗೆ ಇಳಿದಂತಿತ್ತು. ಎತ್ತುಗಳ ಬಾಲ ಮುರಿದು ಅವುಗಳನ್ನು ಉರುಪುಗೊಳಿಸುತ್ತಿದ್ದರು. ಹಲವು ಗಾಡಿಗಳು ನಿರೀಕ್ಷೆಗೂ ಮೀರಿ ಜೋರಾದ ವೇಗದಲ್ಲಿ ಚಲಿಸಿದ್ದು ವಿಶೇಷವಾಗಿತ್ತು.
ಭಕ್ತಿಭಾವ ಮೆರೆದ ಭಕ್ತರು: ಮೆದಿಕೇರಿಪುರ ಕೆರೆಯ ಬಳಿ ವಿಶ್ರಾಂತಿ ಪಡೆದು, ನಂತರ ಅಲ್ಲಿ ಗಂಗಾಪೂಜೆ ನೆರವೇರಿಸಿದ ಭಕ್ತರು ಅಲ್ಲಿಂದ ಮಿಂಚೇರಿ ಗುಡ್ಡ ಪ್ರವೇಶ ಮಾಡಿದರು. ಅಲ್ಲಿ ತಲುಪಿದ ನಂತರ ಗಾದ್ರಿಪಾಲ ನಾಯಕ ಸ್ವಾಮಿ ಮುಂತಾದ ಭಾವಚಿತ್ರಗಳನ್ನು ತಲೆಯ ಮೇಲೊತ್ತು ಮೆರವಣಿಗೆ ಮಾಡಿದರು. ಕಂಬಿ ಪೂಜೆ ನೆರವೇರಿಸಿ ಮಿಂಚೇರಿ ಸರಹದ್ದಿನ ತುಂಬಾ ದೇವತೆಯ ಮೆರವಣಿಯನ್ನು ನಡೆಸಿದರು. ಬಚ್ಚಬೋರನಹಟ್ಟಿಯಿಂದ ಆಗಮಿಸಿದ್ದ ಭಕ್ತರು ಮೆರವಣಿಗೆಯಲ್ಲಿ ಭಾವಪರವಶರಾದವರಂತೆ ಭಾಗವಹಿಸಿದ್ದರು.ಮಿಂಚೇರಿಯಲ್ಲಿ ಎರಡು ದಿನ: ಮಿಂಚೇರಿ ಗುಡ್ಡದಲ್ಲಿ ಎರಡು ರಾತ್ರಿ ಕಳೆಯುವ ಭಕ್ತರು ದೇವತೆಯ ಪೂಜೆ, ಮೆರವಣಿಗೆ, ಗಾದ್ರಿಪಾಲನಾಯಕ ಹಾಗೂ ಹುಲಿಯ ಸಮಾಧಿಗಳಿಗೆ ವಿಶೇಷ ಪೂಜೆ ಸಲ್ಲಿಸುವರು. ನಿರ್ಜನ ಪ್ರದೇಶವಾಗಿರುವ ಮಿಂಚೇರಿ ಗುಡ್ಡದಲ್ಲಿ ಈಗ ಬಚ್ಚಬೋರನಹಟ್ಟಿಯ ಭಕ್ತರದೇ ಕಲರವ. ಭಾನುವಾರ ಮತ್ತು ಸೋಮವಾರ ರಾತ್ರಿ ಭಕ್ತರಿಂದ ಹಲವು ಬಗೆಯ ಸಾಂಸ್ಕೃತಿಕ ಚಟುವಟಿಕೆಗಳು ಸಹ ನಡೆಯುತ್ತವೆಯೆಂದು ಭಕ್ತರಲ್ಲೊಬ್ಬರಾದ ದೊರೆ ತಿಳಿಸಿದರು.
ಜಾತ್ರೆಯಲ್ಲಿ ಇದೇ ಮೊದಲ ಬಾರಿ ಎಂಬತ್ತೇ ಗ್ರಾಮದ ಹಸುಗಳೂ ಸಹ ಭಾಗವಹಿಸಿವೆ. ಬಚ್ಚಬೋರನಹಟ್ಟಿ ಗ್ರಾಮದ ಎಲ್ಲಾ ಭಕ್ತರೂ ಸಹ ಮಿಂಚೇರಿ ಆಗಮಿಸಿರುವುದರಿಂದ ಬದುಕಿನ ಜೀವಾಳವಾದ ಹಸುಗಳನ್ನು ಸಹ ಜಾತ್ರೆಗೆ ಕರೆ ತಂದಿದ್ದಾರೆ. 2 ದಿನಗಳ ಕಾಲ ಮಿಂಚೇರಿ ಗುಡ್ಡದ ಆಸುಪಾಸಿನಲ್ಲಿ ಹಸುಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಸಡಗರದಲ್ಲಿವೆ.