ಧಾರವಾಡ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಉದ್ದೇಶಪೂರ್ವಕ. ಈ ಘಟನೆಯಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಶ್ರಿರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿಯಲ್ಲಿ ಕಲ್ಲುಗಳು ಹೇಗೆ ಬರುತ್ತವೆ ಎಂಬುದು ತನಿಖೆಯಾಗಲಿ. ಜೊತೆಗೆ ಮಸೀದಿಯನ್ನು ಸೀಜ್ ಮಾಡಿ ಬುಲ್ಡೋಜರ್ ಹಚ್ಚಬೇಕು. ಮಸೀದಿ ಅಥವಾ ಪ್ರಾರ್ಥನಾ ಸ್ಥಳಗಳು ಬಂದಾಗ ವಾದ್ಯ ಬಾರಿಸಬಾರದು ಎಂಬ ನಿಯಮ ಎಲ್ಲಿಯಾದರೂ ಇದೆಯಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಕುಮ್ಮಕ್ಕನಿಂದ ಮುಸ್ಲಿಂ ಸಮುದಾಯದವರು ಈ ರೀತಿ ಗಲಾಟೆ ಮಾಡುತ್ತಿದ್ದಾರೆ. ಆದ್ದರಿಂದ ಮುಸ್ಲಿಂ ಮುಲ್ಲಾ ಹಾಗೂ ಮೌಲ್ವಿಗಳನ್ನು ಬಹಿಷ್ಕರಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಮುಸ್ಲಿಂ ಸಮಯದಾಯವನ್ನೇ ಬಹಿಷ್ಕರಿಸಬೇಕು ಎಂದು ಮುತಾಲಿಕ್ ಗುಡುಗಿದರು. ಗಣೇಶನಿಗೆ ಅಪಚಾರ ಎಸಲಾಗಿದ್ದು, ಈ ಕುರಿತು ರಾಜ್ಯದಲ್ಲಿ ಉಗ್ರವಾದ ಹೋರಾಟ ಮಾಡುತ್ತೇನೆ. ನಾಗಮಂಗಲಕ್ಕೆ ಹೋಗಿಯೇ ಪ್ರತಿಭಟಿಸುತ್ತೇನೆ ಎಂದರು.==
ನಾಗಮಂಗಲದಲ್ಲಿ 25 ಅಂಗಡಿ ಸುಟ್ಟಿದ್ದು ಚಿಕ್ಕ ಘಟನೆಯೇ?: ಶೋಭಾಬೆಂಗಳೂರು: ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಮೇಲೆ ಚಪ್ಪಲಿ, ಕಲ್ಲು ತೂರಿ ಅಪಮಾನ ಮಾಡಿ ಹಿಂದೂಗಳ 25 ಅಂಗಡಿಗಳನ್ನು ಸುಟ್ಟಿರುವುದು ಚಿಕ್ಕ ಘಟನೆಯೇ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಗುರುವಾರ ನಗರದಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಸಂತ್ರಸ್ತರಾದವರು ಹಿಂದೂಗಳು. ಆದರೆ, ಹಿಂದೂಗಳ ವಿರುದ್ಧವೇ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಕಲ್ಲು ತೂರಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಮೂಲಕ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಇಷ್ಟು ದೊಡ್ಡ ಘಟನೆ ನಡೆದಿದ್ದರೂ ಗೃಹ ಸಚಿವರು, ಸರ್ಕಾರದ ಸಚಿವರು ಸಣ್ಣ ಘಟನೆ ಎಂದು ವ್ಯಾಖ್ಯಾನ ಮಾಡಿದ್ದಾರೆ. ಹಾಗಾದರೆ ಇನ್ನೂ ಏನಾಗಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಕರಣದಲ್ಲಿ ತಾರತಮ್ಯ ಮಾಡದೇ ತಪ್ಪು ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳಿಗೆ ಅಪಮಾನ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿವೆ. ತಮ್ಮ ತಪ್ಪು ಮುಚ್ಚಿಹಾಕಲು ಇಂತಹ ಘಟನೆಗಳನ್ನು ಮಾಡಲಾಗುತ್ತಿದೆಯೇ ಎಂಬ ಅನುಮಾನ ಬಂದಿದೆ. ಈ ಬಗ್ಗೆ ಎನ್‌ಐಎ ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.ಭಾರತವಿರೋಧಿ ನಾಯಕ ರಾಹುಲ್ ಗಾಂಧಿ:
ಅಮೆರಿಕದಲ್ಲಿ ನಿಂತು ಭಾರತದ ವಿರುದ್ಧ ಮಾತನಾಡುತ್ತಿರುವ ರಾಹುಲ್ ಗಾಂಧಿ ಭಾರತದಲ್ಲಿ ವಿರೋಧ ಪಕ್ಷದ ನಾಯಕನಾಗುವ ಬದಲು, ಭಾರತದ ವಿರೋಧಿ ನಾಯಕನಾಗಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದರು.ಬಿಜೆಪಿ, ಆರ್‌ಎಸ್‌ಎಸ್, ದೇಶದ ಅಭಿವೃದ್ಧಿಯ ಕುರಿತು ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ನೀಡಿರುವ ಹೇಳಿಕೆಗಳ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ರಾಹುಲ್ ಗಾಂಧಿ ಹೊರ ದೇಶಕ್ಕೆ ಹೋಗಿ ನಮ್ಮ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ಭಾರತದಲ್ಲಿ ಬರೀ ಸಮಸ್ಯೆಗಳಿವೆ. ಬೇರೇನೂ ಇಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಭಾರತದಲ್ಲಿ 50 ವರ್ಷ ನಿಮ್ಮ ಪಕ್ಷವೇ ಅಧಿಕಾರದಲ್ಲಿತ್ತು. ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವಾಗುವುದಿಲ್ಲವೇ? ಎಂದು ಕರಂದ್ಲಾಜೆ ಪ್ರಶ್ನಿಸಿದರು.