ಹುಬ್ಬಳ್ಳಿ: ಬಂಟರ ಸಮಾಜ ಕಾಯಕದಿಂದಲೇ ಬದುಕು ಕಟ್ಟಿಕೊಂಡವರು. ಜಗಜ್ಯೋತಿ ಬಸವೇಶ್ವರರ ಕಾಯಕವೇ ಕೈಲಾಸ ಎಂಬ ತತ್ವವನ್ನು ಜೀವನದಲ್ಲಿ ಪಾಲಿಸಿಕೊಂಡು ಬಂದವರು. ಇತರ ಸಮಾಜ ಬಾಂಧವರು ಇವರನ್ನು ನೋಡಿ ಕಲಿಯಬೇಕಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ವಿವಿಧ ಊರುಗಳಿಂದ ಉದ್ಯೋಗ ಅರಸಿ ಹು-ಧಾ ಅವಳಿ ನಗರಕ್ಕೆ ಆಗಮಿಸಿದ ಬಂಟರ ಸಮುದಾಯದವರು, ತಾವಷ್ಟೇ ಬೆಳೆಯದೇ, ತಮ್ಮವರನ್ನೆಲ್ಲ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕಾಯಕದ ಜತೆಗೆ ತಮ್ಮ ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗೂ ಬಂಟರ ಸಮಾಜ ಆದ್ಯತೆ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮೂಲತಃ ಕರ್ನಾಟಕದ ಕರಾವಳಿ ಪ್ರದೇಶದವರಾದ ಬಂಟರ ಸಮಾಜದವರು ಇಂದು ದೇಶ-ವಿದೇಶ ಸೇರಿದಂತೆ ಎಲ್ಲೆಡೆ ತಮ್ಮ ಉದ್ಯಮದ ಛಾಪನ್ನು ಮೂಡಿಸಿದ್ದಾರೆ. ಶ್ರೀಕೃಷ್ಣ ದೇವರಾಯನ ಆಡಳಿತದ ಕಾಲದಲ್ಲಿಯೂ ಈ ಬಂಟರ ಸಮಾಜ ಭೂ ಒಡೆಯರು, ಕೃಷಿಕರು ಹಾಗೂ ರಕ್ಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.ಹು-ಧಾ ಬಂಟರ ಸಂಘದವರು ಎಲ್ಲರೂ ಒಟ್ಟಾಗಿ ಸುವರ್ಣ ಮಹೋತ್ಸವ ಸಮಾರಂಭವನ್ನು ಆಯೋಜಿಸಿದ್ದು ಹೆಮ್ಮೆಯ ಸಂಗತಿ. ಸಮಾಜದ ಏಳ್ಗೆಗೆ ಏಕತೆ ಅತಿ ಅವಶ್ಯಕ ಎಂಬುದು ಬಂಟರ ಸಮಾಜದ ಗುಟ್ಟಾಗಿದೆ. ಬಂಟರ ಸಮಾಜದಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯರಿಗೂ ಸ್ವಾತಂತ್ರ್ಯ ನೀಡಿದ ಮಾದರಿ ಸಮಾಜವಾಗಿದೆ ಎಂದರು.
ಉದ್ಯಮಿ ಪ್ರಸನ್ನ ಶಂಕರ ಶೆಟ್ಟಿ, ಹು-ಧಾ ಬಂಟರ ಸಂಘದ ಉಪಾಧ್ಯಕ್ಷ ಕೆ. ಸುರೇಶ ಶೆಟ್ಟಿ, ರಾಜೇಂದ್ರ ವಿ. ಶೆಟ್ಟಿ, ಪ್ರದೀಪ ಟಿ. ಪಕ್ಕಳ, ಹರ್ಷಕುಮಾರ ಶೆಟ್ಟಿ, ರತ್ನಾಕರ ಎಂ. ಶೆಟ್ಟಿ, ಉಪೇಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಮಹೇಶ ಶೆಟ್ಟಿ ಸೇರಿದಂತೆ ಅನೇಕರಿದ್ದರು.