ಸುಟ್ಟ ಕೊಳವೆ ಬಾವಿ ಮೋಟಾರ್‌: ನೀರಿಗಾಗಿ ಅಲೆದಾಟ

KannadaprabhaNewsNetwork | Published : Mar 21, 2025 12:31 AM

ಸಾರಾಂಶ

ಬೋರ್‌ವೆಲ್‌ ಮೋಟಾರ್‌ ಸುಟ್ಟಿರುವ ಹಿನ್ನೆಲೆಯಲ್ಲಿ ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಲಿಂಗನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಜನ ಮತ್ತು ಜಾನುವಾರುಗಳು ಪರಿತಪಿಸುವಂತಾಗಿದೆ.

ಚಂದ್ರು ಕೊಂಚಿಗೇರಿಹೂವಿನಹಡಗಲಿ: ಕಡು ಬೇಸಿಗೆಯ ಬಿರು ಬಿಸಿಲಿಗೆ ಕುಡಿವ ನೀರಿನ ಸಮಸ್ಯೆ ಹಳ್ಳಿಗಳಲ್ಲಿ ಉಲ್ಬಣವಾಗಿದ್ದು, ಕೊಳವೆ ಬಾವಿ ಮೋಟಾರ್‌ ಸುಟ್ಟಿರುವ ಹಿನ್ನೆಲೆ ಮಹಿಳೆಯರು, ಪುರುಷರು ಕೊಡಗಳನ್ನು ಹಿಡಿದು ನೀರಿಗಾಗಿ ಹೊಲಗಳಿಗೆ ಅಲೆದಾಡುತ್ತಿದ್ದಾರೆ.

ಹೌದು, ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಲಿಂಗನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಜನ ಮತ್ತು ಜಾನುವಾರುಗಳು ಪರಿತಪಿಸುವಂತಾಗಿದೆ.

ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಕೆ.ಅಯ್ಯನಹಳ್ಳಿ ಬಳಿ ನಿರ್ಮಿಸಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ತುಂಗಭದ್ರಾ ನದಿ ನೀರು ಪೂರೈಕೆಯಾಗುತ್ತಿದೆ. ಜತೆಗೆ ಗ್ರಾಮದಲ್ಲಿ 4 ಕೊಳವೆ ಬಾವಿಗಳಿವೆ. ಇದರಲ್ಲಿ ಒಂದು ಕೊಳವೆ ಬಾವಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಂಪರ್ಕವಿದೆ. ಉಳಿದ 3 ಕೊಳವೆ ಬಾವಿಗಳಲ್ಲಿ 2 ಮೋಟಾರ್‌ ಸುಟ್ಟು 15 ದಿನ ಕಳೆದಿವೆ. ಜತೆಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮಕ್ಕೆ ಪೂರೈಕೆಯಾಗುವ ನೀರು ಶುದ್ಧವಾಗಿಲ್ಲ. ಇದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಈ ನೀರನ್ನು ಜನ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕಾಗಿ ನೀರಿಗಾಗಿ ಜನ ಪರದಾಡುವ ಪರಿಸ್ಥಿತಿ ಬಂದಿದೆ.

ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮಕ್ಕೆ ಒಂದೇ ಕೊಳವೆ ಬಾವಿ ಇದೆ. ಈ ನೀರು ಇಡೀ ಗ್ರಾಮಕ್ಕೆ ಪೂರೈಕೆಯಾಗುತ್ತಿಲ್ಲ, ಇದರಿಂದ ಸುಡು ಬಿಸಿಲು ಲೆಕ್ಕಿಸದೇ ಮಹಿಳೆಯರು ರೈತರ ಹೊಲದಲ್ಲಿನ ಕೊಳವೆ ಬಾವಿ ನೀರನ್ನು ಹುಡುಕುತ್ತಾ ಅಲೆದಾಡುತ್ತಿದ್ದಾರೆ. ಕಿಮೀ ಗಟ್ಟಲೆ ದೂರ ಹೋಗಿ ನೀರು ತರುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಆಗಿದ್ದರೂ ಇಲ್ಲಿನ ಗ್ರಾಪಂ ಅಧ್ಯಕ್ಷೆ ಹಾಗೂ ಅಧಿಕಾರಿಗಳು ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾ, ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ. ಈ ವರೆಗೂ ಕೊಳವೆ ಬಾವಿ ದುರಸ್ತಿ ಮಾಡಿರುವ ಬಿಲ್‌ಗಳು ಪಾವತಿಯಾಗಿಲ್ಲ, ಇಂತಹ ಹಲವಾರು ಸಮಸ್ಯೆಗಳು ಇವೆ. ಈ ಕುರಿತು ಮೇಲಾಧಿಕಾರಿಗಳು ಗಮನ ಹರಿಸಬೇಕೆಂದು ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರು ತಾಪಂ ಇಒಗೆ ಮನವಿ ಸಲ್ಲಿಸಿದ್ದಾರೆ.

ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದಿದೆ. ಈ ವರೆಗೂ ಪಿಡಿಒ ಹಾಗೂ ಅಧ್ಯಕ್ಷರು ಗಮನ ಹರಿಸುತ್ತಿಲ್ಲ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಮುನ್ನಚ್ಚರಿಕೆ ಕ್ರಮ ವಹಿಸಬೇಕೆಂಬ ಮೇಲಾಧಿಕಾರಿಗಳ ಸೂಚನೆ ಇದ್ದರೂ, ಅಧ್ಯಕ್ಷರು ಮತ್ತು ಪಿಡಿಒ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಮನವಿಯಲ್ಲಿ ಗ್ರಾಮಸ್ಥರು ದೂರಿದ್ದಾರೆ.

ಕೊಳವೆ ಬಾವಿಗಳ ಮೋಟಾರ್‌ ಸುಟ್ಟಿವೆ. ನೀರಿನ ತೊಂದರೆ ಆಗದಂತೆ ಬಹು ಗ್ರಾಮ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಮೋಟಾರ್‌ಗಳನ್ನು ದುರಸ್ತಿ ಮಾಡಿಸಲು ಕೂಡಲೇ ಕ್ರಮ ಕೈಗೊಳ್ಳುತ್ತೇವೆ ಎಂದು ದೇವಗೊಂಡನಹಳ್ಳಿ ಪಿಡಿಒ ಶಂಭುಲಿಂಗನಗೌಡ ಹೇಳಿದರು.

ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಬಂದರೂ ರಿಪೇರಿ ಮಾಡಲು ಅನುದಾನವಿಲ್ಲ. ಕೊಳವೆ ಬಾವಿಗಳ ಮೋಟಾರ್‌ ದುರಸ್ತಿ ಮಾಡುತ್ತಿಲ್ಲ, ಇದರಿಂದ ಮಹಿಳೆಯರು ನೀರಿಗಾಗಿ ರೈತರ ಜಮೀನುಗಳಿಗೆ ಅಲೆದಾಡುತ್ತಿದ್ದಾರೆ. ಈ ಕೂಡಲೇ ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂದು ಶಿವಲಿಂಗನಹಳ್ಳಿ ಗ್ರಾಪಂ ಸದಸ್ಯ ಎಚ್‌.ಸಂಘರ್ಷ ಹೇಳಿದರು.

Share this article