ಬುರುಡೆ ಕೇಸ್‌: ಎಸ್‌ಐಟಿಯಿಂದ4000 ಪುಟಗಳ ಚಾರ್ಜ್‌ಶೀಟ್‌

KannadaprabhaNewsNetwork |  
Published : Nov 21, 2025, 01:45 AM IST
ಬುರುಡೆ ಮ್ಯಾನ್‌ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಮೊದಲ ಹಂತದ ತನಿಖಾ ವರದಿ (ಚಾರ್ಜ್‌ಶೀಟ್‌) ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ:

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಮೊದಲ ಹಂತದ ತನಿಖಾ ವರದಿ (ಚಾರ್ಜ್‌ಶೀಟ್‌) ಸಲ್ಲಿಸಿದೆ. ಈ ವರದಿಯಲ್ಲಿ ಅನೇಕ ಅಚ್ಚರಿಯ ಮಾಹಿತಿಯನ್ನೊಳಗೊಂಡ ವಿವರಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದ್ದು, ಹೆಣಗಳನ್ನು ಹೂತುಹಾಕಿದ್ದೆ ಎಂದು ಹೇಳಿಕೊಂಡಿದ್ದ ಚಿನ್ನಯ್ಯ, ‘ಸುಳ್ಳು ಸಾಕ್ಷಿ’ ನೀಡಿರುವ ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತಾ ಭಟ್ ಸೇರಿದಂತೆ ಒಟ್ಟು 6 ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ.

ಗುರುವಾರ ಮಧ್ಯಾಹ್ನ 3.15ಕ್ಕೆ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಆಗಮಿಸಿದ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ತಂಡದವರು, ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಎಚ್‌.ಟಿ ಮುಂದೆ ತನಿಖಾ ವರದಿ ಸಲ್ಲಿಸಿದರು. ಒಟ್ಟು 3,923 ಪುಟಗಳನ್ನು ಈ ತನಿಖಾ ವರದಿ ಒಳಗೊಂಡಿದೆ. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬುದಾಗಿ ಎಸ್‌ಐಟಿ ಕೋರ್ಟ್‌ ಗಮನಕ್ಕೆ ತಂದಿದೆ. ಇದರ ಆಧಾರದಲ್ಲಿ ಮುಂದಿನ ತನಿಖೆ ಬಗ್ಗೆ ಸೂಚನೆ ನೀಡುವಂತೆ ವರದಿಯಲ್ಲಿ ನ್ಯಾಯಾಲಯವನ್ನು ಕೇಳಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಒಟ್ಟು ಪ್ರಕರಣದ ತನಿಖೆ ಮುಗಿಸಿದ ಬಳಿಕವೇ ಮುಂದಿನ ದಿನಗಳಲ್ಲಿ ಅಂತಿಮ ಚಾರ್ಜ್‌ಶೀಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವ ಸಾಧ್ಯತೆಯಿದೆ.

ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಜುಲೈ 20ರಂದು ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಸುಮಾರು‌ ಮೂರು ತಿಂಗಳ ಕಾಲ ತನಿಖೆ ನಡೆಸಿ, ಈಗ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದೆ. ಅಲ್ಲದೆ, ಎಸ್‌ಐಟಿ ಮುಖ್ಯಸ್ಥ, ಡಿಜಿಪಿ ಪ್ರಣಬ್ ಮೊಹಾಂತಿ ಅವರು ರಾಜ್ಯ ಸರ್ಕಾರಕ್ಕೂ ತನಿಖಾ ವರದಿ ಸಲ್ಲಿಸುವ ಸಾಧ್ಯತೆ ಇದೆ.

PREV

Recommended Stories

ಸೈಬರ್‌ ವಂಚಕರಿಗೆ ಹಣ ನೀಡಲುಸ್ನೇಹಿತನ ಮನೆಯಲ್ಲಿ ಚಿನ್ನ ಕದ್ದ..!
ಮತ್ತೆ ಟೋಯಿಂಗ್‌ ಆರಂಭಿಸಲು ಜಿಬಿಎ ನಿರ್ಧಾರ