ಸೈಬರ್‌ ವಂಚಕರಿಗೆ ಹಣ ನೀಡಲುಸ್ನೇಹಿತನ ಮನೆಯಲ್ಲಿ ಚಿನ್ನ ಕದ್ದ..!

| Published : Nov 21 2025, 04:00 AM IST

ಸೈಬರ್‌ ವಂಚಕರಿಗೆ ಹಣ ನೀಡಲುಸ್ನೇಹಿತನ ಮನೆಯಲ್ಲಿ ಚಿನ್ನ ಕದ್ದ..!
Share this Article
  • FB
  • TW
  • Linkdin
  • Email

ಸಾರಾಂಶ

ಸೈಬರ್ ವಂಚನೆಯಿಂದ ಹಣ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬ, ತನ್ನ ಪಿಜಿ ಮೇಲ್ವಿಚಾರಕನ ಮನೆಯಲ್ಲಿ ಚಿನ್ನಾಭರಣ ಕದ್ದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೈಬರ್ ವಂಚನೆಯಿಂದ ಹಣ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬ, ತನ್ನ ಪಿಜಿ ಮೇಲ್ವಿಚಾರಕನ ಮನೆಯಲ್ಲಿ ಚಿನ್ನಾಭರಣ ಕದ್ದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

ಆಂಧ್ರಪ್ರದೇಶದ ತಿರುಪತಿ ಮೂಲದ ಕೊತ್ತಾಪು ಷಣ್ಮುಗಂ ರೆಡ್ಡಿ ಬಂಧಿತನಾಗಿದ್ದು, ಆರೋಪಿಯಿಂದ ₹12 ಲಕ್ಷ ಮೌಲ್ಯದ 102 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳವು ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಪಟ್ಟಂದೂರು ಅಗ್ರಹಾರದ ಮಹಿಳೆಯೊಬ್ಬರು ದೂರು ಕೊಟ್ಟಿದ್ದರು. ಅದರನ್ವಯ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಷಣ್ಮುಗಂನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ.

ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಷಣ್ಮುಗಂ ರೆಡ್ಡಿ, ತಮ್ಮ ಕಂಪನಿ ಸಮೀಪದಲ್ಲಿರುವ ಪಟ್ಟಂದ್ದೂರಿನ ಪಿಜಿಯಲ್ಲಿ ನೆಲೆಸಿದ್ದ. ಇದೇ ಪಿಜಿಯ ಮೇಲ್ವಿಚಾರಕನ ಜತೆ ಆತನಿಗೆ ಆಪ್ತ ಸ್ನೇಹವಿತ್ತು. ಈ ಗೆಳೆತನದಲ್ಲೇ ಮೇಲ್ವಿಚಾರಕನ ಮನೆಗೆ ಆಗಾಗ್ಗೆ ರೆಡ್ಡಿ ಭೇಟಿ ನೀಡುತ್ತಿದ್ದ. ಹೀಗಾಗಿ ಮೇಲ್ವಿಚಾರಕನ ಕುಟುಂಬದವರಿಗೂ ರೆಡ್ಡಿ ಪರಿಚಯವಿತ್ತು. ಈ ಗೆಳತನದಲ್ಲಿ ಅವರ ಮನೆಯಲ್ಲಿ ಷಣ್ಮುಗಂ ರೆಡ್ಡಿ ಚಿನ್ನಾಭರಣ ಕಳವು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ನನಗೆ ಅಪರಿಚಿತರ ಸ್ನೇಹವಾಯಿತು. ಆ ಅಪರಿಚಿತರ ಸಲಹೆ ಮೇರೆಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ಮೋಸವಾಯಿತು. ನಾನು ಹಣ ವರ್ಗಾಯಿಸಲು ಒಪ್ಪದಿದ್ದಾಗ ಖಾಸಗಿ ಫೋಟೊಗಳನ್ನು ತಿರುಚಿ ವೈರಲ್‌ ಮಾಡುವುದಾಗಿ ಸೈಬರ್ ವಂಚಕರು ಬೆದರಿಸಿದ್ದರು. ಇದರಿಂದ ಹೆದರಿ ಸುಮಾರು ₹50 ಲಕ್ಷ ಹಣ ಕೊಟ್ಟಿದ್ದೆ. ಇದಕ್ಕಾಗಿ ಪರಿಚಯಸ್ಥರು ಹಾಗೂ ಸಂಬಂಧಿಕರಿಂದ ಸಾಲ ಮಾಡಿದ್ದೆ. ಈ ಸಾಲ ತೀರಿಸಲು ಪಿಜಿ ಮೇಲ್ವಿಚಾರಕನ ಮನೆಯಲ್ಲಿ ಚಿನ್ನ ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ರೆಡ್ಡಿ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ವಂಚನೆ ಸತ್ಯಾಸತ್ಯತೆ ತನಿಖೆ

ತಾನು ಸೈಬರ್ ವಂಚನೆಗೊಳಗಾಗಿರುವುದಾಗಿ ರೆಡ್ಡಿ ನೀಡಿರುವ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಆತನ ಬ್ಯಾಂಕ್ ವಹಿವಾಟಿನ ಬಗ್ಗೆ ದಾಖಲೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.