ಬಸವರಾಜ ಜಾಧವ
ಹುಬ್ಬಳ್ಳಿ:ನಾನು ಹಾವೇರಿಗೆ ಹೋಗ್ಬೇಕಿತ್ರಿ... ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣಕ್ಕೆ ಹೋಗೋಣ ಅಂದ್ರೆ ಯಾವ ಸಿಟಿ ಬಸ್ ಹತ್ಬೇಕು ಅಂತ ತಿಳಿವಲ್ದ್ರಿ.. ನಂಗೂ ಹಂಗ್ ಆಗೇತ್ರಿ, ನಾನು ಬಾದಾಮಿಗೆ ಹೋಗಬೇಕಿತ್ತು, ಒಂದ್ ಸಿಟಿ ಬಸ್ ಕೇಳಿ ಹತ್ತಿದೆ... ಆ ಬಸ್ ಹೋಗಲ್ಲಾ ಅಂದ್ರ... ಇನ್ನೊಂದು ಬಸ್ ಕೇಳಿದ್ನ್ಯಾ... ಅವಾ ಕಂಡಕ್ಟರ್ ಏನು ಮಾತಾಡಲಿಲ್ಲ.... ಇನ್ನು ನಿಂದ್ ಭೇಷ್... ನಾ ಅರ್ಧ ದಾರಿಗೆ ಹೋಗಿ ಬಂದೆ... ಅವಾ ನಡು ದಾರ‍್ಯಾಗ ಇಳಿಸಿಬಿಟ್ಟಾ...
ಇಂತಹ ಸಂಭಾಷಣೆಗಳು ಮಹಾನಗರದ ಬಸ್ ನಿಲ್ದಾಣಗಳಲ್ಲಿ ಕೇಳಿ ಬರುವುದು ಸಾಮಾನ್ಯ. ಮಹಾನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಹಳೆಯ ಬಸ್ ನಿಲ್ದಾಣಕ್ಕೆ (ನಗರ- ಉಪನಗರ ಬಸ್ ನಿಲ್ದಾಣ) ನಿತ್ಯ ಬರುವ ಸಾವಿರಾರು ಪ್ರಯಾಣಿಕರಿಗೆ ಬಸ್ ನಿಲ್ದಾಣಕ್ಕೆ ಹೇಗೆ ಹೋಗಬೇಕು ಎನ್ನುವ ಗೊಂದಲ ಕಾಡುತ್ತಿದೆ.ನಗರದಲ್ಲೀಗ ೩ ಪ್ರಮುಖ ಬಸ್ ನಿಲ್ದಾಣಗಳಿವೆ. ಅವುಗಳಲ್ಲಿ ಚೆನ್ನಮ್ಮ ವೃತ್ತದ ಬಳಿ ಇರುವ ಹಳೇ ಬಸ್ ನಿಲ್ದಾಣಕ್ಕೆ ಬರುವ ಚವರಗುಡ್ಡ, ರಾಮಾಪುರ, ಮಿಶ್ರಿಕೋಟಿ, ಬೆಟದೂರ, ಬಂಡಿವಾಡ, ಮಂಟೂರ ಮತ್ತಿತರ ಬಸ್‌ನಿಂದ ಇಳಿದವರಿಗೆ ದೂರದ ಬಸ್ ಹತ್ತಬೇಕಿರುತ್ತದೆ. ಅವರು ಮುಂದಿನ ಊರಿಗೆ ಹೋಗಲು ಗೋಕುಲ ರಸ್ತೆಯ ಕೇಂದ್ರ ಬಸ್ ನಿಲ್ದಾಣ ಅಥವಾ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಕ್ಕೋ ಹೋಗಬೇಕು. ಆದರೆ, ಈ ಎರಡೂ ನಿಲ್ದಾಣಕ್ಕೆ ಹೋಗಲು ಸಂಪರ್ಕ ವ್ಯವಸ್ಥೆ ಇಲ್ಲ. ಇದರಿಂದಾಗಿ ನಗರದಲ್ಲಿ ಓಡಾಡುವ ಯಾವುದಾದರೂ ಸಿಟಿ ಬಸ್ ಹತ್ತಬೇಕು. ಹೀಗಾಗಿ ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿದೆ.
ಏನಿದು ಗೊಂದಲ?
ಹಳೆಯ ಬಸ್ ನಿಲ್ದಾಣದಲ್ಲಿ (ನಗರ- ಉಪನಗರ ಬಸ್ ನಿಲ್ದಾಣ) ಕೆಳ ಅಂತಸ್ತಿನಲ್ಲಿ ಜಿಲ್ಲೆ, ತಾಲೂಕಿನ ಹಾಗೂ ನಗರಗಳ ಬಸ್‌ಗಳು ನಿಲ್ಲುತ್ತವೆ. ಮೇಲಂತಸ್ತಿನಲ್ಲಿ ಗ್ರಾಮಾಂತರ ಬಸ್‌ಗಳು ನಿಲ್ಲುತ್ತವೆ. ಅಲ್ಲಿಂದಲೇ ಗೋಕುಲ್ ಬಸ್ ನಿಲ್ದಾಣ ಹಾಗೂ ಹೊಸೂರು ಬಸ್ ನಿಲ್ದಾಣಗಳಿಗೆ ನೇರವಾಗಿ ಹೋಗಲು ನಿರಂತರ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪ್ರಯಾಣಿಕರ ಬೇಡಿಕೆ. ಕೆಲವು ಪ್ರಯಾಣಿಕರಿಗೆ ಗೋಕುಲ್ ರಸ್ತೆ ಬಸ್ ನಿಲ್ದಾಣ ಹಾಗೂ ಹೊಸೂರು ಬಸ್ ನಿಲ್ದಾಣಗಳ ಹೆಸರು ಸಹ ಗೊಂದಲ ಉಂಟು ಮಾಡುತ್ತಿದ್ದು, ಕಂಡಕ್ಟರ್ ಬಳಿ ಟಿಕೆಟ್ ತೆಗೆಯುವಾಗ ಗೊಂದಲ ಮೂಡಿಸುತ್ತಿದ್ದಾರೆ. ಈ ಗೊಂದಲ ನಿವಾರಿಸಲು ಬಸ್ ನಿಲ್ದಾಣಗಳ ಹೆಸರು ಬದಲಾಯಿಸಬೇಕು ಎಂಬುದು ಹಲವು ಪ್ರಯಾಣಿಕರ ಒಕ್ಕೊರಲ ಒತ್ತಾಯವಾಗಿದೆ.ಗೊಂದಲ ಗಮನಿಸುತ್ತೇವೆ
ಹೊಸ ಸಿಬ್ಬಂದಿಗೆ ಸರಿಯಾಗಿ ಮಾಹಿತಿ ಇರುವುದಿಲ್ಲ. ಈ ಬಸ್ ನಿಲ್ದಾಣದಲ್ಲಿ ಅಂಕಣ-೧, ಅಂಕಣ-೨ ಅಂಕಣ-೩ ಬೋರ್ಡ್ ಲಗತ್ತಿಸಲಾಗಿದೆ. ಅವುಗಳಲ್ಲಿ ಅಂಕಣ-೧ರಲ್ಲಿ ಹೊಸ ಬಸ್ ನಿಲ್ದಾಣಕ್ಕೆ ಹೋದರೆ, ಅಂಕಣ-೨ ಮತ್ತು ೩ರಲ್ಲಿ ಹೊಸೂರು ನಿಲ್ದಾಣದ ಕಡೆಗೆ ಹೋಗುವ ಕೆಎಂಸಿಆರ್‌ಐ, ಸಾಯಿನಗರ, ತಾಜನಗರ, ಗಾಮನಗಟ್ಟಿ ಮುಂತಾದ ಬಸ್‌ಗಳು ಬರುತ್ತವೆ. ಅವುಗಳಲ್ಲಿ ಪ್ರಯಾಣಿಸಬಹುದು. ಪ್ರಯಾಣಿಕರಿಗೆ ಗೊಂದಲ ಉಂಟಾಗುತ್ತಿರುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹಳೆಯ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ಎಂ.ಬಿ. ಸುಂಕದ "ಕನ್ನಡಪ್ರಭ "ಕ್ಕೆ ಮಾಹಿತಿ ನೀಡಿದರು.ಹಳ್ಳಿ ಜನರಿಗೆ ಸರಿಯಾಗಿ ತಿಳಿಯುತ್ತಿಲ್ಲ. ಈ ಎರಡು ನಿಲ್ದಾಣಗಳಿಂದ ಹೆಸರು ಒಂದೇ ರೀತಿಯಾಗಿ ಕೇಳುವುದರಿಂದ ನಮಗೆ ತುಂಬಾ ಸಮಸ್ಯೆಯಾಗುತ್ತಿದೆ. ಗೊತ್ತಿಲ್ಲದ ಬಸ್ ಹತ್ತಿದಾಗ ಮಾರ್ಗ ಮಧ್ಯದಲ್ಲಿಯೇ ನಮ್ಮನ್ನು ಇಳಿಸಿ ಬಿಡುತ್ತಾರೆ.ಕಮಲ್ಲವ್ವ ಕಾಡನಕೊಪ್ಪ, ಪ್ರಯಾಣಿಕರುಹೊಸೂರು ಬೋರ್ಡ್ ಇರುವ ಅಥವಾ ಹೊಸ ಬಸ್ ನಿಲ್ದಾಣ ಇರುವ ಬಸ್ ಹತ್ತಲು ಹೋದಾಗ ನಿರ್ವಾಹಕರು ಮಹಿಳೆಯರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಆ ಬಸ್ ಅಲ್ಲಿಗೆ ಹೋಗುತ್ತೆ ಅಂತಾ ಗೊತ್ತಿದ್ದರೂ ಖಚಿತಪಡಿಸಿಕೊಳ್ಳಲು ನಿರ್ವಾಹಕರನ್ನು ಕೇಳಿದರೆ “ಹಿಂದ್ ಇನ್ನೊಂದ್ ಬಸ್ ಬರತೇತಿ, ಅವರನ್ನಾ ಕೇಳಮ್ಮ, ಇದು ಹೋಗಲ್ಲಾ” ಎಂಬ ನಿರ್ಲಕ್ಷ್ಯ ಉತ್ತರ ನೀಡುತ್ತಾರೆ.
ನೀಲಮ್ಮ ವೀರಾಪುರ ಪ್ರಯಾಣಿಕರು