ಬೆಂಗಳೂರು : ಮೇಕೆದಾಟು ಯೋಜನೆ ಸಂಬಂಧ ಚರ್ಚೆಗೆ ಆ.3ರಂದು ಬರುವಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಆಹ್ವಾನ ನೀಡಿದ್ದು, ಸಭೆಗೆ ರಾಜ್ಯ ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಆದರೆ, ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ವಿಜಯ್ ಅವರು ರಾಜ್ಯಕ್ಕೆ ಬರುತ್ತಾರೆಯೇ? ಅಥವಾ ಇಲ್ಲವೇ ಎಂಬುದರ ಬಗ್ಗೆ ತಮಿಳುನಾಡು ಸರ್ಕಾರ ಇನ್ನೂ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ರಾಜ್ಯಕ್ಕೆ ಬರುತ್ತಾರೆಯೇ? ಅಥವಾ ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆಯೇ? ಅಥವಾ ಚರ್ಚೆಯಿಂದ ಅಂತರ ಕಾಯ್ದುಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಮೇಕೆದಾಟು ವಿಚಾರವಾಗಿ ಚರ್ಚಿಸಲು ವಿಜಯ್ ಆಸಕ್ತಿ ತೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಭೆಗೆ ದಿನಾಂಕ ನಿಗದಿ ಮಾಡಿ ಆಹ್ವಾನ ಕಳುಹಿಸಿದ್ದರು. ಈ ಬಗ್ಗೆ ತಮಿಳುನಾಡಿನಿಂದ ಸ್ಪಷ್ಟತೆ ದೊರೆತಿಲ್ಲ.
ಇದರ ನಡುವೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ವಿಜಯ್ ಅವರು ರಾಜ್ಯಕ್ಕೆ ಬರಲು ಆಸಕ್ತಿ ತೋರಿದ್ದರು. ಹೀಗಾಗಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ಜತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಸ್ಥಿತಿ ತೋರಿಸಲು ಸಹ ಸಿದ್ಧತೆ ಮಾಡಿದ್ದೇವೆ. ಏನಾಗುತ್ತದೆಯೋ ನೋಡೋಣ ಎಂದಿದ್ದಾರೆ.
ಇದರ ನಡುವೆ ಗುರುವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಹೊರ ಬೀಳಲಿದ್ದು, ಉಭಯ ರಾಜ್ಯಗಳಲ್ಲೂ ಕಾವೇರಿ ಹೋರಾಟ ಜೋರು ಪಡೆದಿದೆ. ತಮಿಳುನಾಡಿನಲ್ಲಿ ವಿಜಯ್ ಕರ್ನಾಟಕಕ್ಕೆ ತೆರಳುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಈ ಎಲ್ಲ ಕಾರಣಗಳಿಂದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕರ್ನಾಟಕ ಭೇಟಿ ಬಗ್ಗೆ ಕುತೂಹಲ ಮೂಡಿದೆ.
ದೆಹಲಿಯಲ್ಲಿಂದು ಕಾವೇರಿ ನೀರು ಪ್ರಾಧಿಕಾರದ ಸಭೆ
ಮುಂಗಾರು ಮಳೆ ಕೊರತೆ, ರಾಜ್ಯದಲ್ಲಿನ ತೀವ್ರ ಬರ ಹಾಗೂ ತಮಿಳುನಾಡಿಗೆ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ಬೆನ್ನಲ್ಲೇ ದೆಹಲಿಯಲ್ಲಿ ಗುರುವಾರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಮುಂದಿನ 15 ದಿನ ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನಂತೆ 4.5 ಟಿಎಂಸಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ಸಭೆ
ದೆಹಲಿಯ ಕಾವೇರಿ ಪ್ರಾಧಿಕಾರದ ಕಚೇರಿಯಲ್ಲಿ ಮಧ್ಯಾಹ್ನ 2.30ಕ್ಕೆ ಸಭೆ ನಡೆಯಲಿದ್ದು, ಕರ್ನಾಟಕ ಎಸಿಎಸ್ ಗೌರವಗುಪ್ತಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ತೀವ್ರ ಬರದ ನಡುವೆಯೇ ತಮಿಳುನಾಡಿಗೆ ನೀರು ಹರಿಸಬೇಕೆಂಬ ಸಮಿತಿಯ ಶಿಫಾರಸ್ಸು, ಕಾವೇರಿ ಕೊಳ್ಳದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ, ಗುರುವಾರ ನಡೆಯಲಿರುವ ಪ್ರಾಧಿಕಾರದ ಸಭೆ ಎಲ್ಲರ ಗಮನ ಸೆಳೆದಿದ್ದು, ಸಮಿತಿಯ ಆದೇಶಕ್ಕೆ ಪ್ರಾಧಿಕಾರ ತಡೆ ನೀಡುತ್ತಾ? ಎಂಬುದು ಕುತೂಹಲ ಮೂಡಿಸಿದೆ.
ಇದೇ ವೇಳೆ, ಕಾವೇರಿ ಜಲಾನಯನ ಪ್ರದೇಶದ ಜಲ-ಹವಾಮಾನ ಪರಿಸ್ಥಿತಿ ಕುರಿತಾಗಿಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ, 2026-27ರ ಜಲ ವರ್ಷದಲ್ಲಿ ಪುದುಚೇರಿಯ ಯು.ಟಿ.ಯ ಬಿಳಿಗುಂಡ್ಲು ಮತ್ತು ಕಾರೈಕಲ್ ಪ್ರದೇಶದಲ್ಲಿ ಕಂಡು ಬಂದ ಸಂಚಿತ ಹರಿವಿನ ಕೊರತೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
