‘ಬಿಜೆಪಿ ನಾಯಕರದ್ದು ಅತಿಯಾಗುತ್ತಿದೆ. ಕಾಂಗ್ರೆಸ್‌ನವರನ್ನು ಕಡಿಯುತ್ತೇವೆ, ಬಡಿಯುತ್ತೇವೆ ಎಂದರೆ ಸುಮ್ಮನಿರಲ್ಲ. ಸಂವಿಧಾನ, ಕಾನೂನಿನ ಶಕ್ತಿಯನ್ನು ತೋರಿಸಿ ಕಂಬಿ ಎಣಿಸುವಂತೆ ಮಾಡುತ್ತೇವೆ’ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ‘ಬಿಜೆಪಿ ನಾಯಕರದ್ದು ಅತಿಯಾಗುತ್ತಿದೆ. ಕಾಂಗ್ರೆಸ್‌ನವರನ್ನು ಕಡಿಯುತ್ತೇವೆ, ಬಡಿಯುತ್ತೇವೆ ಎಂದರೆ ಸುಮ್ಮನಿರಲ್ಲ. ಸಂವಿಧಾನ, ಕಾನೂನಿನ ಶಕ್ತಿಯನ್ನು ತೋರಿಸಿ ಕಂಬಿ ಎಣಿಸುವಂತೆ ಮಾಡುತ್ತೇವೆ’ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ

‘ಬಿಜೆಪಿಯವರು ಕಾಂಗ್ರೆಸ್‌ ನಾಯಕರನ್ನು ಕಡಿದು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂಬ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ನಾರಾಯಣ ಸ್ವಾಮಿಯವರ ನಾಲಿಗೆಗೂ, ಮೆದುಳಿಗೂ ಸಂಪರ್ಕವಿಲ್ಲ. ಆರ್‌ಎಸ್ಎಸ್ ಚಡ್ಡಿಯನ್ನು ತಲೆ ಮೇಲೆ ಹೊತ್ತುಕೊಂಡು ಸರ್ವಜ್ಞ ಎಂದುಕೊಂಡಿದ್ದಾರೆ. ಇವರದ್ದು ಅತಿಯಾಗುತ್ತಿದೆ. ಉತ್ತರ ಪ್ರದೇಶ ಅಥವಾ ಗುಜರಾತ್‌ನಲ್ಲಿ ಆಡಿದಂತೆ ಆಡಲು ಬಿಡುವುದಿಲ್ಲ. ಇದು ಕೊಲೆಗೆ ಪ್ರಚೋದನೆ, ಹೀಗಾಗಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ ಬಿ.ವೈ.ವಿಜಯೇಂದ್ರ‌ ಅವರು ‘ಕಾಂಗ್ರೆಸ್ ನನ್ಮಕ್ಕಳು’ ಎಂದು ಹೇಳಿದ್ದಾರೆ. ಈ ಹಿಂದೆ ಇದೇ ಛಲವಾದಿ ನಾರಾಯಣಸ್ವಾಮಿ ಕಲಬುರಗಿಗೆ ಬಂದು ನನ್ನನ್ನು ‘ನಾಯಿ’ ಎಂದಿದ್ದರು. ಬಳಿಕ ‘ನಾಯಿ ನಾರಾಯಣ’ ಎಂದು ಸ್ಪಷ್ಟನೆ ಕೊಟ್ಟಿದ್ದರು. ಈಗಲೂ ನಾನು ಆ ರೀತಿ ಹೇಳಿಲ್ಲ, ಈ ರೀತಿ ಹೇಳಿಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ ಸ್ಪಷ್ಟನೆ ನೀಡಿದರೆ ಆಗುತ್ತದೆಯೇ?. ಬಿಜೆಪಿಯವರದು ದಿನದಿಂದ ದಿನಕ್ಕೆ ಅತಿಯಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಕಂಬಿ ಎಣಿಸಬೇಕಾಗುತ್ತದೆ ಎಂದು ಕಿಡಿ ಕಾರಿದರು.

ಇವರಿಗೆ ಬೆಳಗ್ಗೆ ಆರ್‌ಎಸ್‌ಎಸ್‌ನಿಂದ ವಾಟ್ಸಾಪ್‌ ಸಂದೇಶ ಬರುತ್ತದೆ. ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡು, ಪ್ರಿಯಾಂಕ್ ಖರ್ಗೆ ವಿರುದ್ದ ಮಾತನಾಡು ಎಂಬ ಸೂಚನೆ ಮೇರೆಗೆ ಇವರು ಮಾತನಾಡುತ್ತಾರೆ ಎಂದು ಖರ್ಗೆ ದೂರಿದರು.