ಭೀಮಾ ನದಿ ನೀರಿನ ನಮ್ಮ 15 ಟಿಎಂಸಿ ಪಾಲು ಪಡೆಯಯಲು ಪ್ರಯತ್ನ ಸಾಗಿದೆ ಎಂದಿರುವ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಈ ಸಂಬಂಧ ಮುಂದಿನ ವಾರ ಬೆಂಗಳೂರಲ್ಲಿ ಸಿಎಂ ಡಿಕೆ ಶಿವಕುಮಾರ್‌ ಜತೆ ಮಹತ್ವದ ಸಭೆ ನಡೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಕಲಬುರಗಿಭೀಮಾ ನದಿ ನೀರಿನ ನಮ್ಮ 15 ಟಿಎಂಸಿ ಪಾಲು ಪಡೆಯಯಲು ಪ್ರಯತ್ನ ಸಾಗಿದೆ ಎಂದಿರುವ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಈ ಸಂಬಂಧ ಮುಂದಿನ ವಾರ ಬೆಂಗಳೂರಲ್ಲಿ ಸಿಎಂ ಡಿಕೆ ಶಿವಕುಮಾರ್‌ ಜತೆ ಮಹತ್ವದ ಸಭೆ ನಡೆಯಲಿದೆ ಎಂದರು.ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾ ನದಿ ನೀರಿನ ವಿಚಾರವಾಗಿ ತಮ್ಮ ಸರ್ಕಾರ ಗಂಭೀರವಾಗಿದೆ. ಈಗಾಗಲೇ ಕಲಬುಗಿಯಿಂದಲೇ ಮಹತ್ವದ ಸಭೆ ತಮ್ಮ ಅಧ್ಯಕ್ಷತೆಯಲ್ಲೇ ಶುರುವಾಗಿದ್ದು, ದೆಹಲಿ ಹಂತದಲ್ಲಿ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೇಗೆಲ್ಲಾ ನದಿ ನೀರಿನ ನಮ್ಮ ಪಾಲು ಪಡೆಯಬಹುದು ಎಂದು ವಿವರವಾಗಿ ಚರ್ಚಿಸಲು 2 ಮಹತ್ವದ ಸಭೆಗಳನ್ನು ನಡೆಸಲಾಗಿದೆ ಎಂದು ಸಚಿವರು ಹೇಳಿದರು.ದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್‌ನ ಅನುಭವಿ ವಕೀಲರೊಂದಿಗೆ ತಾವೇ ಖುದ್ದು ಮಾತುಕತೆ ನಡೆಸಿದ್ದಾಗಿ ಹೇಳಿದ ಖರ್ಗೆ ಭೀಮಾ ನೀರಿನ ವಿಚಾರ ಫಾಸ್ಟ್‌ ಟ್ರ್ಯಾಕ್‌ ಗೆ ತರಲು ಅಡಚಣೆ ಇರುವುದಾಗಿ ವಕೀಲರೇ ಹೇಳಿದ್ದಾರೆ. ಹೀಗಾಗಿ ಕೋರ್ಟ್‌ ಮೊರೆ ಹೋಗುವುದುಕ್ಕಿಂತ ಪೂರ್ವದಲ್ಲಿ ರಾಜಕೀಯವಾಗಿ ನಾವು ಹೇಗೆಲ್ಲಾ ಭೀಮಾ ಪಾಲಿನ ನೀರನ್ನು ಪಡೆಯಬಹುದು ಎಂಬುದರ ಚರ್ಚೆಗೆ ಮುಂದಾಗಿದ್ದೇವೆ. ಈಗಾಗಲೇ ಸಿಎಂ ಜತೆ 1 ಹಂತದ ಮಾತುಕತೆ ಆಗಿದೆ. ಮುಂದಿನ ವಾರ ಮತ್ತೊಂದು ಸುತ್ತಿನ ಮಹತ್ವದ ಸಭೆ ನಡೆಸಲಾಗುತ್ತದೆ ಎಂದರು.ಈಗಾಗಲೇ ಅಫಜಲ್ಪುರ ಬಾಗದಲ್ಲಿ ಭೀಮಾ ತೀರದ ರೈತರು, ಸಾರ್ವಜನಿಕರು ಹೋರಾಟ ಆರಂಭಿಸಿದ್ದಾರೆ. ಈ ಬೇಸಿಗೆ ಕಠಿಣವಾಗಿದೆ. ಭೀಮಾ ಪಾಲಿನ ನೀರು ಪಡೆಯುವುದು ನಮ್ಮ ಮುಂದಿನ ಆದ್ಯತೆ. ಈ ನಿಟ್ಟಿನಲ್ಲಿ ಹೇಗೆ ಮುಂದಿನ ಹೆಜ್ಜೆ ಇಡಬೇಕು ಎಂಬುದರ ಬಗ್ಗೆಯೇ ಮುಖ್ಯಮಂತ್ರಿಗಳ ಜತೆಯಲ್ಲಿ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರೆಲ್ಲರ ಸೇರಿ ಚರ್ಚೆ ನಡೆಸಲಾಗುತ್ತದೆ ಎಂದು ಖರ್ಗೆ ಹೇಳಿದರು.---- ಬಾಕ್ಸ್‌---------

ಭೀಮಾ ನೀರಿಗಾಗಿ ರೈತರ ಮನವಿಅಫಜಲ್ಪುರದ ಭೀಮಾ ತೀರದಿಂದ ಬಂದಿದ್ದ ಶಾಶ್ವತ ನೀರಾವರಿ ಹೋರಾಟ ಸಮೀತಿಯ ಮುಖಂಡರಾದ ರಮೇಶ ಪಾಟೀಲ್‌, ಶ್ರೀಮಂತ ಬಿರಾದಾರ್‌ ಸಹಿತ ಅನೇಕರು ಭೀಮಾ ನದಿಯಲ್ಲಿನ ನಮ್ಮ ಹಕ್ಕಿನ ನೀರು ಪಡೆಯಲು ಸರ್ಕಾರ ತಕ್ಷಣ ಕ್ರಮಕ್ಕೆ ಮುಂದಾಗುವಂತೆ ಕೋರಿ ಮನವಿ ಸಲ್ಲಿಸಿದರು. ಈಗಾಗಲೇ ಡೀಸಿ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿಯೇ ಸಭೆ ಮಾಡಿದ್ದೀರಿ. ಮುಂದಿನ ಹಂತವಾಗಿ ನೀರಾವರಿ ರೈತರನ್ನು ಕರೆದು ಚರ್ಚಿಸಿರಿ. ಆದಷ್ಟು ಬೇಗ ಭೀಮಾ ಪಾಲಿನ ನೀರಿಗೆ ಹಕ್ಕು ಮಂಡಿಸಿರಿ ಎಂದು ರೈತ ಸಮೂಹದ ಪ್ರಮುಖರು ಪ್ರಿಯಾಂಕ್‌ ಖರ್ಗೆಯವರಿಗೆ ಆಗ್ರಹಿಸಿದರು.ಕೆವಿಕೆ 12 ಎಕರೆಯಲ್ಲಿ ಅಂಗಾಂಗ ಕಸಿ ಆಸ್ಪತ್ರೆ- ಖರ್ಗೆ ಸಮರ್ಥನೆ: ಕಲಬುರಗಿ ಬಳಿಯ ಕೃಷಿ ವಿಜ್ಞಾನ ಕೇಂದ್ರದ 12 ಎಕರೆ ಭೂಮಿಯಲ್ಲಿ ಸರ್ಕಾರದ ಸಹಯೋಗದಲ್ಲಿ ಅಜೀಂ ಪ್ರೇಮ್‌ ಜಿ ಅಂಗಾಂಗ ಕಸಿ ಆ್ಪತ್ರೆ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಆಸ್ಪತ್ರೆ ಬಂದಾಕ್ಷಣ ರೈತರ ಸಂಶೋಧನೆಗೆ ಯಾವುದೇ ಅಡಚಣೆ ಆಗುವುದಿಲ್ಲ. ಸಮಾಜದಲ್ಲಿನ ಕಡು ಬಡವರು ಅಂಗಾಂಗ ಕಸಿಗೆ ಹೋಗಲಾಗುತ್ತಿಲ್ಲ. ಇದನ್ನೆಲ್ಲ ಪರಿಗಣಿಸಿಯೇ ತಾವು ಕಲಬುಗಿಗೆ ಈ ಆಸ್ಪತ್ರೆ ತರಲು ಯೋಚಿಸಿದ್ದಾಗಿ ಖರ್ಗೆ ಹೇಳಿದರು.ಕೃಷಿ ಚಟುವಟಿಕೆಗೆ ತಾವು ಸದಾಕಾಲ ಪ್ರೋತ್ಸಾಹ ನೀಡುವುದಾಗಿ ಹೇಳಿದ ಖರ್ಗೆ ತಮ್ಮ ಅವಧಿಯಲ್ಲಿನ ಕೃಷಿ ಮೌಲ್ಯ ವರ್ಧನೆಯ ಚಟುವಟಿಕೆಗಳನ್ನೆಲ್ಲ ಪಟ್ಟಿ ಮಾಡುತ್ತ ಕೃಷಿ ವಿಜ್ಞಾನ ಕೇಂದ್ರದ 12 ಎಕರೆ ಜಾಗ ಆಸ್ತ್ರೆಗೆ ನೀಡಿದಾಕ್ಷಣ ಅಲ್ಲಿನ ಕೃಷಿ ಸಂಶೋಧನೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಬಡವರ ಆರೋಗ್ಯ ತಾಳಜಿಯೂ ನಮ್ಮ ಆದ್ಯತೆಯಾಗಬೇಕು ಎಂದರು. ಆದಾಗ್ಯೂ, ಈ ವಿಚರದಲ್ಲಿ ಇನ್ನೂ ಅಂತಿಮ ನಿರ್ಣಯವಾಗಿಲ್ಲ. ಪರಿಶೀಲನೆ ಸಾಗಿದೆ ಎಂದರು.