ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಬಿಕ್ಕಟ್ಟು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಡೆಸಿದ ಸಂಧಾನ ಪ್ರಯತ್ನ ಸಫಲವಾಗಿದೆ. ಪ್ರತಿ ಟನ್‌ ಕಬ್ಬಿಗೆ 3,600 ರೂ. ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.

ಬೆಳಗಾವಿ: ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಬಿಕ್ಕಟ್ಟು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಡೆಸಿದ ಸಂಧಾನ ಪ್ರಯತ್ನ ಸಫಲವಾಗಿದೆ. ಪ್ರತಿ ಟನ್‌ ಕಬ್ಬಿಗೆ 3,600 ರೂ. ನೀಡಲು ಕಾರ್ಖಾನೆಗಳ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ. ಇದನ್ನು 3,500 ರೂ. ಮುಂಗಡ ಹಾಗೂ ಎರಡನೇ ಕಂತಿನಲ್ಲಿ 100 ರೂ.ಆಗಿ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಕ್ಕರೆಯ ಕನಿಷ್ಠ ಮಾರಾಟ ದರ (ಎಂಎಸ್‌ಪಿ) ಹೆಚ್ಚಳದಿಂದ ಹೆಚ್ಚುವರಿ ಆದಾಯ ಬಂದರೆ ಅದನ್ನು ಮತ್ತೊಂದು ಕಂತಿನಲ್ಲಿ ರೈತರಿಗೆ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ರೈತರಿಗೆ ಭರವಸೆ ನೀಡಿದ್ದು, ರೈತರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಹೀಗಾಗಿ, ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಕಬ್ಬು ರೈತರ ಹೋರಾಟ ಬಹುತೇಕ ಸುಖಾಂತ್ಯವಾಗುತ್ತಿದೆ. ಆದರೆ, ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹1,000 ಪರಿಹಾರ ಘೋಷಣೆ ಮಾಡಬೇಕು ಎಂಬ ರೈತರ ಆಗ್ರಹ ಮುಂದುವರಿದಿದ್ದು, ಈ ಬೇಡಿಕೆಗೆ ಆಗ್ರಹಿಸಿ ಗುರುವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಚಿವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹3,600 ನೀಡಲು ಒಪ್ಪಿದ್ದಾರೆ. ರೈತ ಮುಖಂಡರಿಗೆ ಈ ದರಕ್ಕೆ ಒಪ್ಪಿಕೊಳ್ಳಲು ಮನವಿ ಮಾಡಿದ್ದೇನೆ. ಮೊದಲು ಕಾರ್ಖಾನೆಗಳು ಆರಂಭವಾಗಬೇಕು. ಸಕ್ಕರೆಯ ಕನಿಷ್ಠ ಮಾರಾಟ ದರ (ಎಂಎಸ್‌ಪಿ) ಹೆಚ್ಚಳದಿಂದ ಹೆಚ್ಚುವರಿ ಆದಾಯ ಬಂದರೆ ಅದನ್ನು ಮತ್ತೊಂದು ಕಂತಿನಲ್ಲಿ ರೈತರಿಗೆ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಮೊದಲು ಕಾರ್ಖಾನೆ ಆರಂಭವಾಗಲಿ:

ಕಾರ್ಖಾನೆಗಳು ಆರಂಭವಾಗುವುದು ಮುಖ್ಯ. ರೈತರ ಹೋರಾಟದಿಂದಾಗಿ ಕಬ್ಬು ಕಟಾವು ಹಾಗೂ ಸಾಗಣೆ ವಿಳಂಬವಾದರೆ ರೈತರಿಗೇ ತೊಂದರೆಯಾಗುತ್ತದೆ. ಕಾರ್ಖಾನೆ ಆರಂಭಿಸಲು ಮಾಲೀಕರಿಗೆ ಸೂಚಿಸಲಾಗಿದೆ. ಅಗತ್ಯಬಿದ್ದರೆ ರೈತರು ಮತ್ತು ಕಾರ್ಖಾನೆಗಳ ನಡುವೆ ಒಪ್ಪಂದ ಮಾಡಿಕೊಳ್ಳಬಹುದು. ಜಿಲ್ಲಾಡಳಿತವೂ ಈ ಪ್ರಕ್ರಿಯೆಗೆ ನೆರವಾಗಲಿದೆ. ರೈತರು ಹೆಚ್ಚುವರಿ ಪ್ರೋತ್ಸಾಹಧನಕ್ಕಾಗಿ ಸರ್ಕಾರದ ವಿರುದ್ಧ ಪ್ರತ್ಯೇಕವಾಗಿ ಹೋರಾಟ ಮುಂದುವರಿಸಬಹುದು. ಆದರೆ, ಕಾರ್ಖಾನೆಗಳ ಆರಂಭಕ್ಕೆ ಅಡ್ಡಿಯಾಗಬಾರದು ಎಂಬುದು ನಮ್ಮ ಆಶಯ ಎಂದರು.

ಬೆಳಗಾವಿ ಜಿಲ್ಲೆಯ ದರವನ್ನು ರಾಜ್ಯದ ಇತರ ಜಿಲ್ಲೆಗಳ ದರದೊಂದಿಗೆ ಹೋಲಿಕೆ ಮಾಡಬಾರದು. ಬಾಗಲಕೋಟೆ, ಕಲಬುರಗಿ, ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳ ಕಾರ್ಖಾನೆಗಳ ಪರಿಸ್ಥಿತಿ ಮತ್ತು ಒಪ್ಪಂದಗಳು ಭಿನ್ನವಾಗಿವೆ. ಬೆಳಗಾವಿ ಜಿಲ್ಲೆಯ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದರದ ವಿಚಾರ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗುರ್ಲಾಪುರದಿಂದ ಪಾದಯಾತ್ರೆ ನಡೆಸುತ್ತಿರುವ ರೈತರು ಹಾಗೂ ಮುಕ್ತಿಮಠದಲ್ಲಿ ವಾಸ್ತವ್ಯ ಹೂಡಿರುವ ಮುಖಂಡರ ಮನವೊಲಿಸಲು ಪ್ರಯತ್ನಿಸಲಾಗುವುದು. ಪ್ರತಿಭಟನೆ ಕೈಬಿಡಲು ಮನವಿ ಮಾಡಲಾಗುವುದು ಎಂದು ತಿಳಿಸಿದರು.

ನಾಳೆ ಸಕ್ಕರೆ ಕಾರ್ಖಾನೆಗಳ ಆರಂಭ:

ಈ ಮಧ್ಯೆ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದರಿ ಗ್ರಾಮದ ಹೊಳ್ಳೆಮ್ಮ ದೇವಿ ದೇವಸ್ಥಾನದ ಬಳಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ, ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಕಬ್ಬು ರೈತರ ಹೋರಾಟ ಬಹುತೇಕ ಸುಖಾಂತ್ಯವಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹1,000 ಪರಿಹಾರ ಘೋಷಿಸದಿದ್ದರೆ ಗುರುವಾರ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಇದರ ನಡುವೆ ನ.6ರಿಂದಲೇ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದರು.

ಕಬ್ಬಿನ ದರ ನಿಗದಿ ಕುರಿತು ಅಧಿಕೃತವಾಗಿ ಒಪ್ಪಂದ ಪತ್ರದ ಆದೇಶ ಪ್ರತಿ ನೀಡಿದ ಬಳಿಕವೇ ಸಕ್ಕರೆ ಕಾರ್ಖಾನೆಗಳನ್ನು ಕಾರ್ಯಾರಂಭಿಸಬೇಕು. ಪ್ರೋತ್ಸಾಹದ ಕುರಿತು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ವಹಿಸಬೇಕು. ಗುರುವಾರ ಬೆಳಗಾವಿಯಲ್ಲಿ ನಡೆಯುವ ರೈತರ ಹೋರಾಟ ಸ್ಥಳದಲ್ಲೇ ಬಂದು ಸಚಿವರು ಸ್ಪಷ್ಟಪಡಿಸಬೇಕು.

- ಚುನ್ನಪ್ಪ ಪೂಜೇರಿ, ರೈತ ಮುಖಂಡ.

ಸದ್ಯ ಅಲ್ಪಾವಧಿ ಹುದ್ದೆಯಾಗಿರುವ ಅಗ್ನಿವೀರರಿಗೆ 4 ವರ್ಷ ಸೇವೆ ಅವಕಾಶ

ಬಿಕ್ಕಟ್ಟು ಇತ್ಯರ್ಥ ಸಂಬಂಧ ಕಾರ್ಖಾನೆ ಮಾಲೀಕರ ಜೊತೆ ಸರ್ಕಾರ ಚರ್ಚೆ

ಈ ವೇಳೆ ಪ್ರತಿ ಟನ್‌ಗೆ 3500 ರು. ಮುಂಗಡ, ಬಳಿಕ 100 ರು. ನೀಡಲು ಒಪ್ಪಿಗೆ

ಆದ್ರೆ ಸರ್ಕಾರ ಹೆಚ್ಚುವರಿಯಾಗಿ ಟನ್‌ಗೆ 1000 ರು.ನೀಡಬೇಕೆಂದು ರೈತರ ಪಟ್ಟು

ಹೀಗಾಗಿ ಗುರುವಾರ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆಗೆ ರೈತರ ನಿರ್ಧಾರ