ಹಾಲಿನ ದರ ಹೆಚ್ಚಳದ ಬಿಸಿಯನ್ನು ಶ್ರೀಸಾಮಾನ್ಯ ಅರಗಿಸಿಕೊಳ್ಳುವ ಮೊದಲೇ ರಾಜ್ಯ ಸರ್ಕಾರ ನಿರೀಕ್ಷೆಯಂತೆಯೇ ಬಸ್ ದರವನ್ನು ಹೆಚ್ಚಿಸಿದೆ. ಆದರೆ, ಸಾಮಾನ್ಯದಂತೆ ಶೇಕಡಾವಾರು ದರ ಹೆಚ್ಚಳ ತೋರಿಸದೆ ಸ್ಟೇಜ್ ವಾರು ಪ್ರಯಾಣ ದರ ಹೆಚ್ಚಳ ಮಾಡಿದೆ.

ಬೆಂಗಳೂರು: ಹಾಲಿನ ದರ ಹೆಚ್ಚಳದ ಬಿಸಿಯನ್ನು ಶ್ರೀಸಾಮಾನ್ಯ ಅರಗಿಸಿಕೊಳ್ಳುವ ಮೊದಲೇ ರಾಜ್ಯ ಸರ್ಕಾರ ನಿರೀಕ್ಷೆಯಂತೆಯೇ ಬಸ್ ದರವನ್ನು ಹೆಚ್ಚಿಸಿದೆ. ಆದರೆ, ಸಾಮಾನ್ಯದಂತೆ ಶೇಕಡಾವಾರು ದರ ಹೆಚ್ಚಳ ತೋರಿಸದೆ ಸ್ಟೇಜ್ ವಾರು ಪ್ರಯಾಣ ದರ ಹೆಚ್ಚಳ ಮಾಡಿದೆ. ಆದರೆ ಶೇ.23ರಿಂದ ಶೇ.35ರವರೆಗೂ ಆಗಿರುವ ಈ ಪ್ರಮಾಣದ ಏರಿಕೆ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಎನ್ನಲಾಗಿದೆ. ಹೀಗಾಗಿ ದೀಪಾವಳಿಯ ಹೊತ್ತಿನಲ್ಲಿ ಪಟಾಕಿಗೆ ಮೊದಲೇ ಬಸ್‌ ದರ ಜನಸಾಮಾನ್ಯರ ಕೈಸುಡುವಂತಾಗಿದೆ.

ಈ ಸ್ಟೇಜ್ ವಾರು ದರ ಹೆಚ್ಚಳದ ಸರಾಸರಿ ಲೆಕ್ಕ ಮಾಡಿದರೆ ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ಪ್ರಯಾಣ ದರ ಸರಾಸರಿ ಶೇ.23 ಹಾಗೂ ಬಿಎಂಟಿಸಿ ಪ್ರಯಾಣ ದರ ಗರಿಷ್ಠ ಶೇ.35ರಷ್ಟು ಹೆಚ್ಚಳವಾಗಿದೆ.

ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ ನಿವಾರಿಸುವ ಉದ್ದೇಶದೊಂದಿಗೆ ಕಳೆದ ವರ್ಷ (2025)ದ ಆರಂಭದಲ್ಲೇ ಸರ್ಕಾರಿ ಸಾರಿಗೆ ಬಸ್‌ ಗಳ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿತ್ತು. ಇದೀಗ ಒಂದು ವರ್ಷದೊಳಗೇ ಮತ್ತೆ ಸರ್ಕಾರಿ ಸಾರಿಗೆ ಬಸ್‌ ಪ್ರಯಾಣ ದರಗಳನ್ನು ಹೆಚ್ಚಳ ಮಾಡಲಾಗಿದೆ. ಈ ಬಾರಿ ಶೇಕಡಾವಾರು ಬೆಲೆ ಹೆಚ್ಚಳ ಮಾಡದೆ ಸ್ಟೇಜ್‌ (ಹಂತ)ವಾರು ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ಅದರಲ್ಲೂ ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಗಿಂತ ಬಿಎಂಟಿಸಿ ಪ್ರಯಾಣ ದರದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ.

ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳ ಸಾಮಾನ್ಯ ಸಾರಿಗೆಗಳಲ್ಲಿ ಸ್ಟೇಜ್‌ವಾರು ಗರಿಷ್ಠ 9 ರು.ಹಾಗೂ ವೇಗದೂತ ಸಾರಿಗೆಗಳಲ್ಲಿ 18 ರು.ಹೆಚ್ಚಳ ಮಾಡಲಾಗಿದೆ. ಹಾಗೆಯೇ, ಬಿಎಂಟಿಸಿಯ ಕನಿಷ್ಠ ಪ್ರಯಾಣ ದರವನ್ನು 6 ರು.ನಿಂದ 10 ರು.ಗೆ ಹೆಚ್ಚಳ ಮಾಡಲಾಗಿದ್ದು, ಗರಿಷ್ಠ 12 ರು. ಏರಿಕೆ ಮಾಡಲಾಗಿದೆ. ಈ ದರ ಹೆಚ್ಚಳವು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಶೇ.23ರಿಂದ 35ರಷ್ಟು ಹೆಚ್ಚಳ:

ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನಾಧರಿಸಿ ನಿವೃತ್ತ ಐಎಎಸ್‌ ಅಧಿಕಾರಿ ಅತುಲ್‌ ತಿವಾರಿ ನೇತೃತ್ವದಲ್ಲಿ ರಚಿಸಲಾಗಿದ್ದ ದರ ಏರಿಕೆ ಸಮಿತಿಯು ಶೇ.45ರಷ್ಟು ಪ್ರಯಾಣ ದರ ಹೆಚ್ಚಳ ಮಾಡುವಂತೆ ವರದಿಯಲ್ಲಿ ತಿಳಿಸಿತ್ತು. ಇನ್ನು, ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳು ಶೇ.45ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಬಿಎಂಟಿಸಿ ಶೇ.90 ರಷ್ಟು ಬೆಲೆ ಹೆಚ್ಚಳ ಕೋರಿತ್ತು. ಆದರೆ, ಎರಡೂ ಪ್ರಸ್ತಾವನೆ ಮತ್ತು ಮನವಿಯನ್ನು ಪುರಸ್ಕರಿಸದ ಸರ್ಕಾರ ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಗೆ ಸರಾಸರಿ ಶೇ.23ರಷ್ಟು ಮತ್ತು ಬಿಎಂಟಿಸಿಗೆ ಶೇ.33- 35ರಷ್ಟು ಪ್ರಯಾಣ ದರ ಹೆಚ್ಚಳ ಮಾಡಿದೆ.

ದರ ಏರಿಕೆ ಏಕೆ?:

ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ನಾಲ್ಕೂ ನಿಗಮಗಳ ಇಂಧನ ಬಾಕಿ ಸೇರಿದಂತೆ ಇನ್ನಿತರ ಬಾಕಿಗಳೇ 7719.31 ಕೋಟಿ ರು.ಗಳಿದ್ದು, ಸಾಲದ ಪ್ರಮಾಣ 2192.79 ಕೋಟಿ ರು.ಗಳಾಗಿವೆ. ನಾಲ್ಕೂ ನಿಗಮಗಳ ಮೇಲೆ ಒಟ್ಟಾರೆ 9912.10 ಕೋಟಿ ರು. ಹೊಣೆಗಾರಿಕೆಯಿದೆ. ಹೀಗಾಗಿ ಪ್ರಯಾಣ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಅಲ್ಲದೆ, ಸಿಬ್ಬಂದಿ ವೇತನ ಹೆಚ್ಚಳ, ವೇತನ ಹೆಚ್ಚಳ ಹಿಂಬಾಕಿ ಪಾವತಿಯ ಹೊರೆ ಸಾರಿಗೆ ನಿಗಮಗಳ ಮೇಲೆ ಬಿದ್ದಿದೆ. ಅದರಲ್ಲಿ ಕೆಎಸ್ಸಾರ್ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಗಳಿಗೆ ಶೇ.18 ಮತ್ತು ಬಿಎಂಟಿಸಿ ಮೇಲೆ ಶೇ.27ರಷ್ಟು ಹೊರೆ ಬಿದ್ದಿದೆ. ಹಾಗೆಯೇ, 2026ರ ಮೇ 15ರಿಂದ ಅ.1ರವರೆಗೆ 10.47 ರು. ಡೀಸೆಲ್‌ ದರ ಹೆಚ್ಚಳವಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯುವಂತಾಗಿದ್ದು, ನಿಗಮಗಳ ಒಟ್ಟು ವೆಚ್ಚದಲ್ಲಿ ಶೇ. 80ರಷ್ಟು ಡೀಸೆಲ್‌ ಮತ್ತು ಸಿಬ್ಬಂದಿ ವೆಚ್ಚಕ್ಕೆ ವ್ಯಯಿಸಲಾಗುತ್ತಿದೆ. ಜತೆಗೆ ವಾರ್ಷಿಕ 2 ಸಾವಿರ ಕೋಟಿ ರು. ನಷ್ಟವುಂಟಾಗುತ್ತಿದೆ. ಈ ಕಾರಣದಿಂದಾಗಿ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಇಲಾಖೆ ಹೇಳಿದೆ.

ಸರ್ಕಾರದ ಅನುದಾನ ಬಾಕಿ:

ಶಕ್ತಿ ಯೋಜನೆ ಸೇರಿದಂತೆ ಇನ್ನಿತರ ಸಹಾಯಧನದ ಅಡಿಯಲ್ಲಿ ರಾಜ್ಯ ಸರ್ಕಾರವು ಸಾರಿಗೆ ನಿಗಮಗಳಿಗೆ 6,362 ಕೋಟಿ ರು. ಬಾಕಿ ನೀಡಬೇಕಿದೆ. ಅದರಲ್ಲಿ ಶಕ್ತಿ ಯೋಜನೆ ಅಡಿಯ ಸಹಾಯಧನವೇ 5 ಸಾವಿರ ಕೋಟಿ ರು.ಗಳಿವೆ. 2023-24ರಿಂದಲೂ ಸರ್ಕಾರ ಪೂರ್ಣಪ್ರಮಾಣದಲ್ಲಿ ಅನುದಾನ ನೀಡಿಲ್ಲ. ಆ ಅನುದಾನವನ್ನು ಹಂತಹಂತವಾಗಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದ್ದರೂ, ಸಂಕಷ್ಟದಲ್ಲಿರುವ ನಿಗಮಗಳಿಗೆ ಆ ಅನುದಾನ ನೀಡಿದರೆ ಅನುಕೂಲವಾಗಲಿದೆ.

ದರ ಏರಿಕೆ ಏಕೆ?

4 ನಿಗಮಗಳ ಇಂಧನ ಸೇರಿ ಇತರೆ ಬಾಕಿ 7720 ಕೋಟಿ ರು.ಇದೆ

ಇದರ ಜೊತೆಗೆ ಸಾಲದ ಪ್ರಮಾಣ 2192 ಕೋಟಿ ರು.ನಷ್ಟು ಇದೆ

ಈ ಮೂಲಕ ನಿಗಮಗಳ ಒಟ್ಟು ಹೊಣೆಗಾರಿಕೆ ₹ 9912 ಕೋಟಿ

ವೇತನ, ಹಿಂಬಾಕಿ, ಡೀಸೆಲ್‌ ಏರಿಕೆಯಿಂದ ₹2000 ಕೋಟಿ ಹೊರೆ

ಹೀಗಾಗಿ ಟಿಕೆಟ್‌ ದರ ಏರಿಕೆ ಅನಿವಾರ್ಯ ಎಂಬುದು ಸರ್ಕಾರದ ವಾದ

ಮೋದಿ ಡೀಸೆಲ್‌ ದರ ಇಳಿಸಿದ್ರೆ ನಾವು ರೆಡಿ

ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾದಾಗ ವಿಪಕ್ಷಗಳು ಏಕೆ ಮಾತನಾಡಲಿಲ್ಲ?. ಮೋದಿಯವರಿಗೆ ಹೇಳಿ ಇಂಧನ ಬೆಲೆ ಕಡಿಮೆ ಮಾಡಿಸಲಿ. ಅದಕ್ಕೆ ಅನುಗುಣವಾಗಿ ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸಿದ್ಧ.

ಡಿ.ಕೆ.ಶಿವಕುಮಾರ್,ಮುಖ್ಯಮಂತ್ರಿ

ನಷ್ಟದಿಂದ ಹೊರಬರಲು ದರ ಏರಿಕೆ ಅನಿವಾರ್ಯ

ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಿನಿಂದ ಈವರೆಗೆ 7 ಬಾರಿ ಡೀಸೆಲ್‌ ಬೆಲೆ ಹೆಚ್ಚಳ ಮಾಡಿದೆ. ವಾಹನಗಳ ಬಿಡಿಭಾಗ ಬೆಲೆ ಏರಿಕೆ ಆಗಿದೆ. ಹೀಗಾಗಿ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅದರಿಂದ ಹೊರಬರಲು ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯ.

ಬೈರತಿ ಸುರೇಶ್‌, ಸಾರಿಗೆ ಸಚಿವ

ಸರ್ಕಾರದ ನಡೆ ಅಮಾನವೀಯ

ಇದೊಂದು ಅಮಾನವೀಯ ವರ್ತನೆ. ಸರ್ಕಾರ ದಾಖಲೆ ಬರೆಯುವಂತೆ ಬಸ್‌ ಟಿಕೆಟ್‌ ದರ ಏರಿಸಿದೆ. ಇದು ಜನರನ್ನು ಸುಲಿಗೆ ಮಾಡುವ ವಿಧಾನ.. ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದ್ದರೂ, ಜನರ ಬದುಕಲ್ಲಿ ಕತ್ತಲಿನ ಆಚರಣೆಯಾಗಲಿದೆ.

ಆರ್‌.ಅಶೋಕ್‌, ವಿಪಕ್ಷ ನಾಯಕ