ರಾಜ್ಯ ಸರ್ಕಾರ ಸಾರಿಗೆ ಬಸ್‌ಗಳ ದರವನ್ನು ಬುಧವಾರ ಮಧ್ಯರಾತ್ರಿಯಿಂದಲೇ ಏರಿಕೆ ಮಾಡಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಿದ್ದು ಉಚಿತ ಉಚಿತ ಎನ್ನುತ್ತಲೇ ಸಾರ್ವಜನಿಕರ ಜೇಬಿಗೆ ಕೈ ಹಾಕಿದೆ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿ:

ರಾಜ್ಯ ಸರ್ಕಾರ ಸಾರಿಗೆ ಬಸ್‌ಗಳ ದರವನ್ನು ಬುಧವಾರ ಮಧ್ಯರಾತ್ರಿಯಿಂದಲೇ ಏರಿಕೆ ಮಾಡಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಿದ್ದು ಉಚಿತ ಉಚಿತ ಎನ್ನುತ್ತಲೇ ಸಾರ್ವಜನಿಕರ ಜೇಬಿಗೆ ಕೈ ಹಾಕಿದೆ ಎಂದು ಕಿಡಿಕಾರಿದ್ದಾರೆ.

ಪ್ರತಿ ಆರು ಕಿಲೋ ಮೀಟರ್‌ಗೆ ಒಂದು ಸ್ಟೇಜ್‌ ಎಂದು ಗುರುತಿಸಿದ್ದು ಮೊದಲನೆಯ ಸ್ಟೇಜ್‌ಗೆ ₹ 15, ಎರಡನೆಯ ಸ್ಟೇಜ್‌ಗೆ ₹ 24, ಮೂರನೆಯ ಸ್ಟೇಜ್‌ಗೆ ₹ 41, ನಾಲ್ಕನೆಯ ಸ್ಟೇಜ್‌ಗೆ ₹ 64 ದರ ಹೆಚ್ಚಳವಾಗಿದೆ.

2 ದಿನ ಬಿಟ್ಟು ಪ್ರತಿಷ್ಠಿತ ಸಾರಿಗೆ:

ಸದ್ಯಕ್ಕೆ ಸಾರಿಗೆ ಸಂಸ್ಥೆಯ ಎಕ್ಸ್‌ಪ್ರೆಸ್‌ ಬಸ್‌ (ಕೆಂಪು ಬಸ್‌) ದರ ಹೆಚ್ಚಳವಾಗಿದೆ. ರಾಜಹಂಸ, ವೋಲ್ವೋ, ರಾಜರಥ, ಪಲ್ಲಕ್ಕಿ, ಎಸಿ ಸ್ಲೀಪರ್‌, ನಾನ್‌ ಎಸಿ ಸ್ಲೀಪರ್‌ಗಳ ಸೇರಿದಂತೆ ಪ್ರತಿಷ್ಠಿತ ಬಸ್‌ಗಳ ದರ ಈಗಲೇ ಹೆಚ್ಚಳವಾಗಿಲ್ಲ. ಅವುಗಳ ದರವನ್ನು ಲೆಕ್ಕಹಾಕಿ ಮುಂದಿನ ಎರಡು ದಿನಗಳಲ್ಲಿ ನಿಗದಿಪಡಿಸಲಾಗುತ್ತದೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಅಧಿಕಾರಿ ವರ್ಗ ತಿಳಿಸಿವೆ.,

ಸಾರ್ವಜನಿಕರ ಆಕ್ರೋಶ:

ಬಸ್‌ ದರ ಹೆಚ್ಚಳ ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ನೀಡಿ ಎಂದು ನಾವೇನು ಕೇಳಿರಲಿಲ್ಲ. ಅಧಿಕಾರಕ್ಕೆ ಬರಬೇಕೆಂದು ತಾವೇ ಘೋಷಿಸಿ ಶಕ್ತಿ ಯೋಜನೆ ಜಾರಿಗೊಳಿಸಿದರು. ಶಕ್ತಿ ಯೋಜನೆಯ ಹಣವನ್ನು ಈ ವರೆಗೂ ನಿಗಮಕ್ಕೆ ಸರ್ಕಾರ ಭರಣ ಮಾಡುತ್ತಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿದೆ. ಇದೀಗ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಿದೆ. ಈ ಮೂಲಕ ಮಹಿಳೆಯರು ಶಕ್ತಿ ಯೋಜನೆಯಡಿ ₹ 2 ಖರ್ಚು ಮಾಡಿದರೆ, ಅದನ್ನು ಪುರುಷರಿಂದ ₹ 10 ವಸೂಲಿ ಮಾಡಲು ಮುಂದಾಗಿದೆ. ಮಹಿಳೆಯರಿಗೆ ಉಚಿತ ನೀಡಬೇಡಿ. ಬಸ್‌ ದರ ಏರಿಸಬೇಡಿ. ಬಸ್‌ ದರ ಏರಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೂ ಸಜ್ಜಾಗುತ್ತಿದ್ದಾರೆ.ಮುಖ್ಯಮಂತ್ರಿಗಳೇ ಸರ್ಕಾರ ಪಾಪರ್‌ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಈ ಕಾಂಗ್ರೆಸ್‌ ಅಧೋಗತಿಗೆ ತಂದು ನಿಲ್ಲಿಸಿದೆ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಮಹಿಳೆಯರ ಉಚಿತ ಪ್ರಯಾಣದ ವೆಚ್ಚದ ಖರ್ಚನ್ನು ಪುರುಷರಿಂದ ಮೂರ್ನಾಲ್ಕು ಪಟ್ಟು ವಸೂಲಿ ಮಾಡುತ್ತಿದ್ದಾರೆ. ಅತ್ಯಂತ ಲಜ್ಜೆಗೆಟ್ಟ ಸರ್ಕಾರವಿದೆ.

ಮಹೇಶ ಟೆಂಗಿನಕಾಯಿ, ಶಾಸಕ

ಹಬ್ಬಗಳ ಸಂದರ್ಭದಲ್ಲಿ ಜನರಿಗೆ ಸಿಹಿ ಸುದ್ದಿ ನೀಡಬೇಕಾದ ಸರ್ಕಾರ ಬರೀ ಬೆಲೆ ಏರಿಕೆಯ ಕಹಿ ಸುದ್ದಿಯನ್ನೇ ನೀಡುತ್ತಿದೆ. ದಸರಾ ಸಮಯದಲ್ಲಿ ಹಾಲಿನ ದರ ಹೆಚ್ಚಳ. ಈಗ ಬಸ್‌ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನರ ಸಂಭ್ರಮಕ್ಕೆ ತಣ್ಣೀರೆಚಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ, ಮತ್ತೊಂದೆಡೆ ಅಗತ್ಯ ಸೇವೆಗಳ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಲಿಂಗರಾಜ ಪಾಟೀಲ, ವಿಪ ಸದಸ್ಯ ಹಾಲು, ಮೊಸರು ಹೀಗೆ ದಿನಕ್ಕೊಂದರಂತೆ ಬೆಲೆ ಏರಿಸುತ್ತಲೇ ಈ ಸರ್ಕಾರ ಸಾಗಿದೆ. ಯಾರು ಗ್ಯಾರಂಟಿ ಯೋಜನೆಗಳನ್ನು ಕೇಳಿರಲಿಲ್ಲ. ತಾವು ಅಧಿಕಾರಕ್ಕೆ ಬರಬೇಕೆಂದು ನೀಡುತ್ತೇವೆ ಎಂದ್ಹೇಳಿದ್ದರು. ಇದೀಗ ಗ್ಯಾರಂಟಿ ಯೋಜನೆ ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿ ಪುರುಷರ ಜೇಬಿಗೆ ಕೈ ಹಾಕುತ್ತಿದೆ ಸರ್ಕಾರ. ಬಸ್‌ ದರ ಇಳಿಸಬೇಕು. ಬಡವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಬೇಕು.

ಲಕ್ಷ್ಮಿಕಾಂತ ಘೋಡಕೆ, ಸಾರ್ವಜನಿಕ