ನಾವು ಪಂಚಭೂತಗಳಲ್ಲಿ ಮಾತ್ರ ದೇವರನ್ನು ಕಾಣಲು ಸಾಧ್ಯ. ದೇಹ, ವರ್ಣ, ರೂಪ ಇಲ್ಲದವನೇ ದೇವರಾಗಿದ್ದಾನೆ. ಭಗವಂತನನ್ನು ಕಾಣಬೇಕಾದರೆ ಪಂಚಭೂತಗಳ ದೀಪ ಹಚ್ಚಬೇಕು.

ಯಲ್ಲಾಪುರ: ಭಗವದ್ಗೀತೆಯು ಒಂದು ಮಠ, ಜಾತಿಗೆ ಸೀಮಿತವಾದದ್ದಲ್ಲ. ಸಮಾಜಕ್ಕೆ ಅದರ ಸಂದೇಶಗಳು ಇನ್ನೂ ಹೆಚ್ಚಿಗೆ ತಲುಪುವಂತಾಗಬೇಕು. ಇಂದಿನ ಮಕ್ಕಳಲ್ಲಿ ಸನಾತನ ಧರ್ಮದ ಅಸ್ಮಿತೆಯನ್ನು ಬಿತ್ತರಿಸಬೇಕು ಎಂದು ಬಾರಕೂರು ಮಹಾಸಂಸ್ಥಾನದ ಪೀಠಾಧಿಪತಿ ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರು ನುಡಿದರು.

ಮಂಗಳವಾರ ಸಂಕಲ್ಪ ಸೇವಾ ಸಂಸ್ಥೆಯ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು, ಮಹಾಭಾರತ ಮತ್ತು ಇಂದಿನ ರಾಜಕಾರಣ ವಿಷಯದ ಕುರಿತು ಆಶೀರ್ವಚನ ನೀಡಿದರು.

ಸನಾತನ ಧರ್ಮದ ಉಳಿವಿಗಾಗಿ ಭಾರತದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಸಂಚರಿಸಿದವರು ಕ್ರಾಂತಿಯೋಗಿ ಶಂಕರಾಚಾರ್ಯರು. ಅಂದು ಅಘೋರಿಗಳು ಹಾಗೂ ನಾಗಸಾಧುಗಳನ್ನು ಸಂಘಟಿಸಿ ಬೌದ್ಧಧರ್ಮವು ಭಾರತವನ್ನು ಆವರಿಸುತ್ತಿದ್ದದನ್ನು ತಡೆಯಲು ಕುಂಭಮೇಳವನ್ನು ಆರಂಭಿಸಿದರು.

ಹಿಂದೂಗಳ ನೂರಾರು ದೇವರುಗಳೆಲ್ಲ ಒಂದೇ ಶಕ್ತಿಯ ಪ್ರತಿರೂಪ, ಅದೇ ಅದ್ವೈತ ಎಂದು ಸಾರಿದ್ದಾರೆ ಎಂದ ಅವರು, ನಾವು ಪಂಚಭೂತಗಳಲ್ಲಿ ಮಾತ್ರ ದೇವರನ್ನು ಕಾಣಲು ಸಾಧ್ಯ. ದೇಹ, ವರ್ಣ, ರೂಪ ಇಲ್ಲದವನೇ ದೇವರಾಗಿದ್ದಾನೆ. ಭಗವಂತನನ್ನು ಕಾಣಬೇಕಾದರೆ ಪಂಚಭೂತಗಳ ದೀಪ ಹಚ್ಚಬೇಕು. ಕನ್ನಡದಲ್ಲಿ ವೇದ- ಉಪನಿಷತ್ತುಗಳ ಸಾರವನ್ನು ಸರಳವಾಗಿ ತಿಳಿಸಿದವರು ಬಸವಣ್ಣ. ಆದರೆ ಅವರ ಹೆಸರಲ್ಲಿ ಬೇರೆ ಧರ್ಮವೇ ಆಗಬೇಕೆಂದು ಅಜ್ಞಾನಿಗಳ ಕಿತ್ತಾಟವೇ ನಡೆದಿದೆ ಎಂದರು.

ಮಹಾಭಾರತದಲ್ಲಿ ಹೇಳಿದಷ್ಟು ರಾಜಕೀಯವನ್ನು ಎಲ್ಲೂ ಹೇಳಲಾಗಿಲ್ಲ. ಕೃಷ್ಣ, ಭೀಷ್ಮ, ಶಕುನಿ ಅಂದಿನ ಪ್ರಮುಖ ರಾಜಕೀಯ ರೂವಾರಿಗಳು. ಅಂದಿನ ಮಹಾಭಾರತದ ರಾಜಕೀಯ ನಡೆ ಇಂದಿಗೂ ಪ್ರಸ್ತುತವಾಗಿದೆ. ನಾವು ಮಕ್ಕಳಿಗೆ ಕಲೆ, ಮಹಾಕಾವ್ಯದ ಅರಿವನ್ನು ಮೂಡಿಸಿ, ಸಂಸ್ಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಎಸ್. ಭಟ್ಟ ಆನಗೋಡ, ನಾಗರಾಜ ಮದ್ಗುಣಿ, ಶ್ರೀಧರ ಅಣಲಗಾರ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಹೊನ್ನಾವರದ ಉದ್ಯಮಿ ಎನ್.ಎಸ್. ಹೆಗಡೆ ಮಾತನಾಡಿದರು. ಸಂಸ್ಥೆಯ ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಎಂ.ಎನ್. ಹೆಗಡೆ, ಡಿ. ಶಂಕರ ಭಟ್ಟ, ಆರ್.ವಿ. ಹೆಗಡೆ, ಡಿ.ಎನ್. ಗಾಂವ್ಕರ್, ಡಿ.ಎನ್. ನಾಯಕ ಉಪಸ್ಥಿತರಿದ್ದರು. ರವಿ ಭಟ್ಟ ಬರಗದ್ದೆ ಸ್ವಾಗತಿಸಿದರು. ಸುಧಾಕರ ನಾಯಕ ನಿರೂಪಿಸಿದರು. ಮುಕ್ತಾ ಶಂಕರ ವಂದೇ ಮಾತರಂ ಗೀತೆ ಪ್ರಸ್ತುತಪಡಿಸಿದರು.

ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಯಲ್ಲಾಪುರ: ಪಟ್ಟಣದ ಗಾಂಧೀ ಕುಟೀರದಲ್ಲಿ ಸಂಕಲ್ಪ ಉತ್ಸವದ ಸಮಾರೋಪ ನ. ೫ರಂದು ೪.೧೫ರಿಂದ ಭಗವದ್ಗೀತಾ ಪಠಣ, ನಂತರ ಗಾನವೈಭವದಲ್ಲಿ ಭಾಗವತರಾಗಿ ಪ್ರಸನ್ನ ಭಟ್ಟ ಭಾಳ್ಕಲ್, ಸ್ರುಜನ್ ಗಣೇಶ ಹೆಗಡೆ, ಗಣೇಶ ಬಿಲ್ಲಾಡಿ ; ಮದ್ದಳೆಯಲ್ಲಿ ಅನಿರುದ್ಧ ಹೆಗಡೆ; ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ್ ಭಾಗವಹಿಸುವರು.

೫.೪೫ಕ್ಕೆ ನಡೆಯುವ ಸಮಾರೋಪದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ಆಶೀರ್ವಚನ ನೀಡುವರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ವಿ.ಎಸ್. ಪಾಟೀಲ, ಸುನೀಲ ಹೆಗಡೆ, ಪ್ರಮುಖರಾದ ಜಿ.ಜಿ. ಹೆಗಡೆ ಇತರರು ಉಪಸ್ಥಿತರಿರುವರು.