ಕಾಂಗ್ರೆಸ್‌ನ ಸುಳ್ಳು ಪ್ರಚಾರಕ್ಕೆ ತಕ್ಕ ಉತ್ತರ ನೀಡುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನ. 6ರಂದು ಕೊಪ್ಪಳದಲ್ಲಿ ಬಿಜೆಪಿ ವಿಭಾಗ ಮಟ್ಟದ ಬೃಹತ್ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷದ ಮುಖ್ಯಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಕುಷ್ಟಗಿ: ಎಸ್‌ಐಆರ್‌ (ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ) ಹಾಗೂ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್‌ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಅಸ್ಥಿರತೆ ಸೃಷ್ಟಿಸಲು ಮುಂದಾಗಿದೆ ಎಂದು ವಿರೋಧ ಪಕ್ಷದ ಮುಖ್ಯಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಸುಳ್ಳು ಪ್ರಚಾರಕ್ಕೆ ತಕ್ಕ ಉತ್ತರ ನೀಡುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನ. 6ರಂದು ಕೊಪ್ಪಳದಲ್ಲಿ ಬಿಜೆಪಿ ವಿಭಾಗ ಮಟ್ಟದ ಬೃಹತ್ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 10 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ದೇಶದಲ್ಲಿ ಈ ವರೆಗೆ ಸುಮಾರು 12 ಬಾರಿ ಎಸ್‌ಐಆರ್‌ ಪ್ರಕ್ರಿಯೆ ನಡೆದಿದ್ದು, ಬಹುತೇಕ ಬಾರಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೇ ನಡೆದಿದೆ. ವಾಜಪೇಯಿ ಹಾಗೂ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ತಲಾ ಒಂದು ಬಾರಿ ನಡೆದಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಎಸ್‌ಐಆರ್‌ ಸರಿಯಾಗಿದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ತಪ್ಪಾಗಿದೆ ಎನ್ನುವ ದ್ವಂದ್ವ ನಿಲುವು ಸರಿಯಲ್ಲ ಎಂದು ಟೀಕಿಸಿದರು.

ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಸತ್ಯವೆಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ. ಡಾ. ಬಿ.ಆರ್‌. ಅಂಬೇಡ್ಕರ್‌ ರೂಪಿಸಿದ ಸಂವಿಧಾನದ ಆಶಯದಂತೆ ದೇಶದ ಆಡಳಿತ ನಡೆಯಬೇಕು. ರಾಜಕೀಯ ಲಾಭಕ್ಕಾಗಿ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನಗಳಿಗೆ ಮರುಳಾಗಬಾರದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ್‌ ಮಾತನಾಡಿ, ಆಡಳಿತ ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುವ ನಿಲುವು ತಾಳುವುದು ಖಂಡನೀಯ ಎಂದರು.

ಬಳ್ಳಾರಿ ವಿಭಾಗದ ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳನ್ನು ಒಳಗೊಂಡು ಅಭಿಯಾನ ನಡೆಯಲಿದೆ. ನ. 6ರಂದು ಬೆಳಗ್ಗೆ 10 ಗಂಟೆಗೆ ಕೊಪ್ಪಳ ನಗರದ ಸಿರಸಪ್ಪಯ್ಯನ ಮಠದಿಂದ ಪಾದಯಾತ್ರೆ ಆರಂಭವಾಗಿ ಗಡಿಯಾರ ಕಂಬದ ಮೂಲಕ ಅಶೋಕ ವೃತ್ತದ ವರೆಗೆ ಸಾಗಲಿದೆ ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಬಿಜೆಪಿ ರಾಜ್ಯ ಸಹಪ್ರಭಾರಿ ಡಾ. ಕಾಸಂ ವೆಂಕಟೇಶ್ವರ, ಮಾಜಿ ಸಚಿವ ಶ್ರೀರಾಮುಲು, ಶಾಸಕ ಮಹೇಶ ಟೆಂಗಿನಕಾಯಿ, ಜನಾರ್ದನ ರೆಡ್ಡಿ, ಹಾಲಪ್ಪ ಆಚಾರ್‌, ಬಸವರಾಜ ದಢೇಸುಗೂರು, ಹೇಮಲತಾ ನಾಯಕ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಪ್ರಭು ಶಂಕರಗೌಡ ಪಾಟೀಲ್‌, ರಮೇಶ ನಾಡಗೇರ್‌, ವಾದಿರಾಜ ಶ್ಯಾಟಿ ಇದ್ದರು.