ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ನೂತನ ಮಹಾರಥೋತ್ಸವಕ್ಕೆ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಚಾಲನೆ ನೀಡಿದರು.
ಕುಷ್ಟಗಿ: ಭಕ್ತರು ಹಾಗೂ ದಾನಿಗಳ ಸಹಕಾರದಿಂದ ನಿರ್ಮಿಸಿರುವ ಚಳಗೇರಿ ಹಿರೇಮಠದ ನೂತನ ಮಹಾರಥವು ಭಕ್ತರ ಒಗ್ಗಟ್ಟು, ಧಾರ್ಮಿಕ ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವದ ಪ್ರತೀಕವಾಗಿದೆ ಎಂದು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ತಾಲೂಕಿನ ಚಳಗೇರಿ ಗ್ರಾಮದಲ್ಲಿ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 12ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ನೂತನ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಿಂಗೈಕ್ಯ ವಿರೂಪಾಕ್ಷಲಿಂಗ ಶಿವಾಚಾರ್ಯರು ಧರ್ಮಪ್ರಚಾರ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆಗಳು ಸಮಾಜಕ್ಕೆ ಸದಾ ಮಾರ್ಗದರ್ಶಿಯಾಗಿವೆ. ಚಳಗೇರಿ ಹಿರೇಮಠ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.ಇದಕ್ಕೂ ಮುನ್ನ ಪಂಚಪೀಠಾಧೀಶ್ವರರ ಪಲ್ಲಕ್ಕಿ ಮಹೋತ್ಸವ, 108 ಶಿವಾಚಾರ್ಯ ಮಹಾಸ್ವಾಮಿಗಳ ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ಬಳಿಕ ನಡೆದ ನೂತನ ಮಹಾರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಕ್ತಿ-ಭಾವದಿಂದ ಪಾಲ್ಗೊಂಡರು.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು, ಶಾಸಕ ದೊಡ್ಡನಗೌಡ ಪಾಟೀಲ, ಡಾ. ಬಸವರಾಜ ಕ್ಯಾವಟರ್, ಬಿ.ಎಸ್. ಪಾಟೀಲ, ತಿಪಟೂರಿನ ಶ್ರೀಗಳು, ವಿಮಲ ರೇಣುಕಮುನಿ ಶ್ರೀಗಳು, ಚಂದ್ರಶೇಖರ ದೇವರು, ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ದೇವೇಂದ್ರಪ್ಪ ಬಳೂಟಗಿ, ಎಸ್.ಆರ್. ನವಲಿ ಹಿರೇಮಠ ಉಪಸ್ಥಿತರಿದ್ದರು.ಸಮಾಜ ಉನ್ನತಿಗೆ ಶ್ರಮಿಸಿದ ಶ್ರೀಗಳು: ವೀರಶೈವ ಮಠಗಳು ಯಾವುದೇ ಬೇಧ-ಭಾವವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಕಟ್ಟುವ ಕಾರ್ಯ ಮಾಡುತ್ತಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಧೈರ್ಯವಾಗಿ ಬದುಕುವಂತೆ ಆತ್ಮಸ್ಥೈರ್ಯ ತುಂಬುತ್ತಿವೆ. ಪಂಚಪೀಠಗಳು ಸಮಾನತೆಯನ್ನು ಸಾರುವ ಶ್ರದ್ಧಾಕೇಂದ್ರಗಳಾಗಿದ್ದು, ಸಾವಿರಾರು ಮಠಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ವಿರೂಪಾಕ್ಷಲಿಂಗ ಶಿವಾಚಾರ್ಯರು ಯಾವುದೇ ಆಸೆ-ಆಕಾಂಕ್ಷೆಗಳಿಲ್ಲದೆ ಭಕ್ತರಿಗೆ ಆಶೀರ್ವಾದ ನೀಡುತ್ತ, ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹನೀಯರಾಗಿದ್ದಾರೆ ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಒಗ್ಗಟ್ಟಿನಿಂದ ಬಾಳಬೇಕು: ಕುಟುಂಬ ಹಾಗೂ ಸಮಾಜದಲ್ಲಿ ಸಂಸ್ಕಾರ ಉಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮನೆಗೆ ಬಂದ ಅತಿಥಿಗಳನ್ನು ಪ್ರೀತಿಯಿಂದ ಸತ್ಕರಿಸಬೇಕು. ಕೂಡು ಕುಟುಂಬದ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗಬೇಕು. ಕುಟುಂಬ ಹಾಗೂ ಸಮಾಜವನ್ನು ಒಡೆಯುವ ಕೆಲಸ ಮಾಡದೆ ಒಗ್ಗಟ್ಟಿನಿಂದ ಬಾಳಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.ಸಮಾಜಮುಖಿ ಕಾರ್ಯ: ಚಳಗೇರಿ ಮಠ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಕುಷ್ಟಗಿ ತಾಲೂಕಿನಲ್ಲಿ ಬಡವರ ನೆರವಿಗೆ ನಿಂತಿದೆ. ಬಡವರಿಗೆ ವಿವಿಧ ರೀತಿಯ ಸಹಾಯ-ಸಹಕಾರ ನೀಡುತ್ತ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಹೇಳಿದರು.