ಗುರುವಿನ ಮಾರ್ಗದರ್ಶನವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಸಮುದಾಯದ ಗುರುಗಳಾದರೂ ಆ ಸ್ಥಾನಕ್ಕೆ ಗೌರವ ಸಲ್ಲಿಸಲೇಬೇಕು.
ಮುಂಡಗೋಡ: ಮಹರ್ಷಿ ವಾಲ್ಮೀಕಿ, ಛತ್ರಪತಿ ಶಿವಾಜಿ ಮಹಾರಾಜರಂತಹ ಮಹಾ ನಾಯಕರು ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತರಲ್ಲ. ಬದಲಾಗಿ ಇಡೀ ಮನುಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅದೇ ರೀತಿ ಕೇಸರಿ ಬಣ್ಣ ಕೂಡ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದ ಆಸ್ತಿಯಲ್ಲ, ಬದಲಾಗಿ ಸನಾತನ ಹಿಂದು ಧರ್ಮದ ಎಲ್ಲ ಜನಾಂಗಕ್ಕೆ ಸೇರಿದ್ದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಬುಧವಾರ ಪಟ್ಟಣದ ಗಾಂಧಿನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ನಂತರ ಸುಮಾರು ₹೨ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಗುರುವಿನ ಮಾರ್ಗದರ್ಶನವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಸಮುದಾಯದ ಗುರುಗಳಾದರೂ ಆ ಸ್ಥಾನಕ್ಕೆ ಗೌರವ ಸಲ್ಲಿಸಲೇಬೇಕು. ತಮ್ಮ ಜಾತಿಯ ಬಗ್ಗೆ ಪ್ರೀತಿ ಇರಬೇಕು. ಅದೇ ರೀತಿ ಇತರೆ ಜಾತಿಗಳ ಬಗ್ಗೆ ಗೌರವವಿರಬೇಕು ಎಂದ ಅವರು, ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಎಲ್ಲ ವರ್ಗದ ದುರ್ಬಲರನ್ನು ಮೇಲೆತ್ತುವ ಕೆಲಸ ಮಾಡಬೇಕು.
ರಾಜ್ಯ ಸರ್ಕಾರ ಸದೃಢ: ಕೇಂದ್ರ ಹಾಗೂ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಆರ್ಥಿಕ ಬಿಕ್ಕಟ್ಟು ಇದ್ದೇ ಇರುತ್ತದೆ. ಯಾವುದೇ ಸರ್ಕಾರವಿದ್ದರೂ ಸಮಾಜದ ಉನ್ನತಿಗಾಗಿ ಸಾಲ ಮಾಡಲೇಬೇಕಾಗುತ್ತದೆ. ಹಾಗೆಂದು ಸರ್ಕಾರ ಬಡತನದಲ್ಲಿದೆ ಎಂದು ಪರಿಗಣಿಸಬೇಕಾಗಿಲ್ಲ. ಎಲ್ಲ ಕ್ಷೇತ್ರಗಳಿಗೂ ಅನುದಾನ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆ ಕೂಡ ಸಮಾಜದ ಮಹಿಳೆಯರ ಹಾಗೂ ಕುಟುಂಬದ ಸಬಲಿಕರಣಕ್ಕಾಗಿ ನೀಡಲಾಗಿದೆ ವಿನಾ ವ್ಯರ್ಥವಾಗಿಲ್ಲ ಎಂದರು.ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದಪುರಿ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ವಾಲ್ಮೀಕಿ ಸಮಾದ ತಾಲೂಕಾದ್ಯಕ್ಷ ಸುರೇಶ ಕಲ್ಲೊಳ್ಳಿ ಉಪನ್ಯಾಸ ನೀಡಿದರು. ರಾಘವೇಂದ್ರ ಮಳಗಿಕರ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ನಾಗರಾಜ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಕುಳ್ಳೂರ, ನಿರ್ಮಿತಿ ಇಲಾಖೆ ಅಧಿಕಾರಿ ಕುಮಾರ ಶೆಟ್ಟಿ, ರವಿಗೌಡ ಪಾಟೀಲ, ಚಿದಾನಂದ ಹರಿಜನ, ಮಹೇಶ ತಳವಾರ, ಎಸ್. ಪಕ್ಕೀರಪ್ಪ, ಎನ್.ಡಿ. ಕಿತ್ತೂರ ಮುಂತಾದವರು ಉಪಸ್ಥಿತರಿದ್ದರು. ಅಶೋಕ ಪವಾರ ಸ್ವಾಗತಿಸಿದರು. ಸುರೇಶ ಪೂಜಾರ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ, ಶ್ರೀಗಳು ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಸಾದನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.ಮೆರವಣಿಗೆ: ಇದಕ್ಕೂ ಮುನ್ನ ಇಲ್ಲಿಯ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಮಹಿಳೆಯರ ಕುಂಭ ಮೇಳ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ವಾಲ್ಮೀಕಿ ಭವನ ಸ್ಥಳಕ್ಕೆ ತಲುಪಿತು. ಮೆರವಣಿಯಲ್ಲಿ ಶಾಸಕ ಹೆಬ್ಬಾರ ಸ್ಟೆಪ್ ಹಾಕಿದರು.