ಎರಡು ಬಾರಿ ಸಿಎಂ, ಪ್ರಸ್ತುತ ಕೇಂದ್ರ ಸಚಿವರಾಗಿರುವ ದೊಡ್ಡ ಮನುಷ್ಯರು ಇಂತಹ ಅಸಹ್ಯ ಕೆಲಸಕ್ಕೆ ಕೈಹಾಕುವುದಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆಯಾಗಲಿ, ಕುಮಾರಸ್ವಾಮಿ ತನಿಖೆಗೆ ಸಹಕಾರ ಕೊಟ್ಟರೆ ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಹೊರಬಂದು, ಅವರ ಮೇಲಿರುವ ಕಳಂಕವೂ ಹೋಗುತ್ತದೆ ಎಂದು ಪೌರಾಡಳಿತ ಸಚಿವ ಎಚ್.ಸಿ ಬಾಲಕೃಷ್ಣ ಲೇವಡಿ ಮಾಡಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಎರಡು ಬಾರಿ ಸಿಎಂ, ಪ್ರಸ್ತುತ ಕೇಂದ್ರ ಸಚಿವರಾಗಿರುವ ದೊಡ್ಡ ಮನುಷ್ಯರು ಇಂತಹ ಅಸಹ್ಯ ಕೆಲಸಕ್ಕೆ ಕೈಹಾಕುವುದಿಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆಯಾಗಲಿ, ಕುಮಾರಸ್ವಾಮಿ ತನಿಖೆಗೆ ಸಹಕಾರ ಕೊಟ್ಟರೆ ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಹೊರಬಂದು, ಅವರ ಮೇಲಿರುವ ಕಳಂಕವೂ ಹೋಗುತ್ತದೆ ಎಂದು ಪೌರಾಡಳಿತ ಸಚಿವ ಎಚ್.ಸಿ ಬಾಲಕೃಷ್ಣ ಲೇವಡಿ ಮಾಡಿದರು.ಸ್ಟಿಂಗ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೆಸರು ಪ್ರಸ್ತಾಪ ಕುರಿತು ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಪ ಕುಮಾರಣ್ಣಂಗೆ ಈ ವಿಚಾರ ಗೊತ್ತೋ ಇಲ್ವೋ? ಒಟ್ಟಿನಲ್ಲಿ ಅವರ ಮನೆಯಲ್ಲಿ ಘಟನೆ ನಡೆದಿದೆ. ಬಹುಶಃ ಕುಮಾರಣ್ಣನ ಗಮನಕ್ಕೆ ಹೋಗಿಲ್ಲ ಅನಿಸುತ್ತದೆ. ಅವರ ಮನೆಯಲ್ಲಿರುವ ಯಾರೋ ಈ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಆದರೆ ಅವರ ಧಮ್ಕಿಗೆ ಯಾರೂ ಹೆದರುವುದಿಲ್ಲ. ಹಿಂದೆ ಹಾಸನ ಜಿಲ್ಲಾಧಿಕಾರಿಗೂ ಧಮ್ಕಿ ಹಾಕಿದ್ದರು, ಆ ಮೇಡಂ ಸರಿಯಾಗಿಯೇ ಉತ್ತರ ಕೊಟ್ಟರು. ಈಗ ಪೊಲೀಸ್ ಕಮಿಷನರ್ ಸತ್ಯದ ವಿಚಾರ ಹೇಳಿದ್ದಾರೆ. ಅವರ ಹೇಳಿಕೆ ತಪ್ಪಿದ್ದರೆ ಕೋರ್ಟ್ ನಲ್ಲಿ ಚಾಲೆಂಜ್ ಮಾಡಲಿ, ಸುಮ್ಮನೆ ಬೆದರಿಕೆ ಹಾಕಿದರೆ ಪ್ರಯೋಜನವಿಲ್ಲ. ಕಮಿಷನರ್ರನ್ನು ಗಲ್ಲಿಗೇರಿಸಿ ಬಿಡುತ್ತಾರಾ ಎಂದು ಪ್ರಶ್ನಿಸಿದರು.ಅವರು ಅಧಿಕಾರಕ್ಕೆ ಬಂದರೆ ಸೂರ್ಯಚಂದ್ರ ಇರೋವರೆಗೂ ಶಾಶ್ವತವಾಗಿ ಅಧಿಕಾರದಲ್ಲೇ ಇರುತ್ತಾರಾ. ಅವರು ಜೀವನದಲ್ಲಿ ಸ್ವಂತವಾಗಿ ಎಂದೂ ಅಧಿಕಾರಕ್ಕೆ ಬಂದಿಲ್ಲ. ಇಡೀ ಜೀವನ ಅವರಿವರ ಅಧಿಕಾರದಲ್ಲೇ ಬದುಕಬೇಕು. ಆಗ ಯಡಿಯೂರಪ್ಪ ಸಿಎಂ ಆಗಲಿಕ್ಕೆ ಬಿಡಲಿಲ್ಲ. ಈಗ ಡಿಕೆಶಿ ಸಿಎಂ ಆಗಿರೋದನ್ನ ಸಹಿಸೋಕೆ ಆಗುತ್ತಿಲ್ಲ. ಅವರ ಮನಸ್ಥಿತಿ ಏನು ಅಂತ ನೀವೆ ಅರ್ಥಮಾಡಿಕೊಳ್ಳಿ.
ಕುಮಾರಸ್ವಾಮಿ ಹಳ್ಳಿಗುಗ್ಗು ತರ ಆಡುತ್ತಿದ್ದಾರೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಒಳ್ಳೆ ಪದ ಉಪಯೋಗಿಸಿದ್ದಾರೆ, ಅವರಿಗೆ ಕರೆಕ್ಟಾಗಿ ಉತ್ತರ ಕೊಟ್ಟವರೆ, ಪ್ರಿಯಾಂಕ್ ಖರ್ಗೆ ತಾಳ್ಮೆಯಿಂದ, ಸಮಾಧಾನವಾಗಿ ಉತ್ತರ ಕೊಡುತ್ತಾರೆ. ಕುಮಾರಸ್ವಾಮಿ ರೀತಿ ಬಟ್ಟೆಹರಿದುಕೊಳ್ಳಲ್ಲ ಎಂದು ಹೇಳಿದರು.ಯಾರಿಗೆ ಎಲ್ಲಿ ಅನುಕೂಲವಿದೆಯೋ ಅಲ್ಲಿಗೆ ಹೋಗಲಿ:
ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗುವಂತಹ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಅವರಿಗೆ ಎಲ್ಲಿ ಅನುಕೂಲವಿದಿಯೇ ಅಲ್ಲಿಗೆ ಹೋಗಲಿ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ತಿಳಿಸಿದರು.ರಾಜಣ್ಣ ಮಾತ್ರವಲ್ಲ ಯಾರೇ ಆಗಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಹೇಳಿಕೆ ಕೊಡಬಾರದು ಎಂದು ಮನವಿ ಮಾಡುತ್ತೇನೆ. ನಾವೆಲ್ಲ ಒಂದೇ ಪಕ್ಷದಲ್ಲಿ ಇರುವವರು, ಪಕ್ಷಕ್ಕೆ ನಿಯತ್ತಾಗಿರಬೇಕು. ಹಿಂದೆ ನಾನು ದಳದಲ್ಲಿ ನಿಯತ್ತಾಗಿ ಇದ್ದೆ. ನಮಗೆ ದಳ ಬೇಜಾರಾಯ್ತು ಬಿಟ್ಟು ಬಂದೆ. ನಾವು ಅಲ್ಲಿ ಇದ್ದುಕೊಂಡೇ ಕಥೆ ಕಟ್ಟುವುದಕ್ಕೆ ಹೋಗಿಲ್ಲ. ಯಾರ್ಯಾರಿಗೆ ಎಲ್ಲೆಲ್ಲಿ ಅನುಕೂಲ ಇದೆಯೋ ಅಲ್ಲಿಗೆ ಹೋಗಲಿ ಎಂದು ಪರೋಕ್ಷವಾಗಿ ರಾಜಣ್ಣ ಪಕ್ಷ ಬಿಟ್ಟು ಹೋಗಲಿ ಎಂದು ಬಾಲಕೃಷ್ಣ ಪುನರುಚ್ಚರಿಸಿದರು.
ಹಣ ದುರ್ಬಳಕೆ ದಾಖಲೆ ಕೊಡಲಿ:ಗೃಹಲಕ್ಷ್ಮೀ ಹಣ ಹಿರಿಯೂರು ಚುನಾವಣೆಗೆ ದುರ್ಬಳಕೆ ಎಂದು ನಿಖಿಲ್ ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ ನಿಖಿಲ್ ಈಗ ಒಂದು ಲೆವೆಲ್ಗೆ ಬೆಳೆದು ಬಿಟ್ಟಿದ್ದಾರೆ. ಬೆಳೆದ ಮೇಲೆ ಗೌರವಯುತವಾಗಿ ಮಾತನಾಡಬೇಕು. ಹಣ ದುರ್ಬಳಕೆ ಆಗಿರುವ ಕುರಿತು ಬ್ಯಾಂಕ್ ಪಾಸ್ ಬುಕ್ ಇದ್ದರೆ ಕೂಡಲಿ. ಇಲ್ಲದಿದ್ದರೆ ಕೇಂದ್ರ ಸರ್ಕಾರದ ಮೂಲಕ ತನಿಖೆ ಮಾಡಿಸಲಿ, ಸುಮ್ಮನೆ ಬುರುಡೆ ಬಿಡಬಾರದು ಎಂದರು.
ಬಸ್ ಟಿಕೆಟ್ ದರ ಏರಿಕೆ ವಿಚಾರ ಕುರಿತು ಮಾತನಾಡಿದ ಬಾಲಕೃಷ್ಣ , ಡೀಸೆಲ್ ಪೆಟ್ರೋಲ್ ದರ ಹೆಚ್ಚಾದ ಮೇಲೆ ಟಿಕೆಟ್ ದರ ಕೂಡಾ ಹೆಚ್ಚಾಗುತ್ತೆ. ನೀರಿನಲ್ಲಿ ಬಸ್ ಓಡಿಸೋಕೆ ಆಗುತ್ತಾ. ಡೀಸೆಲ್, ಪೆಟ್ರೋಲ್ ಜಾಸ್ತಿ ಆದ ಮೇಲೆ ಸ್ವಾಭಾವಿಕವಾಗಿ ಟಿಕೆಟ್ ದರ ಕೂಡಾ ಜಾಸ್ತಿ ಆಗಲೇಬೇಕಲ್ವಾ ಎಂದು ಪ್ರಶ್ನಿಸಿದರು.ಇಂಧನ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಅವರು ಇಂಧನದ ದರ ಇಳಿಸಿದರೆ ಇಲ್ಲೂ ಟಿಕೆಟ್ ದರ ಕಡಿಮೆ ಆಗುತ್ತದೆ. ಹಾಲಿನ ದರ ಏರಿಕೆ ಮಾಡಿರೋದು ರೈತರಿಗೆ ಅನುಕೂಲ ಆಗಲಿ ಅಂತ. ಪಾಪ ರೈತರು ಅಮಾಯಕರು ತಿನ್ನಲಿ ಬಿಡಿ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಹೇಳಿದರು.
ಶೋಭಾ ಕರಂದ್ಲಾಜೆ ಹಾಲಿನ ಕ್ಯಾನ್ ಹಿಡಿದು ಹೋರಾಟ ಮಾಡುತ್ತಿದ್ದಾರೆ. ಹಿಂದೆ ಸಿಲಿಂಡರ್ ಇಟ್ಟುಕೊಂಡು ಹೋರಾಟ ಮಾಡಿದ್ದರು. ಬಳಿಕ ಗ್ಯಾಸ್ ರೇಟ್ ಜಾಸ್ತಿ ಅಯಿತು. ಪಾಪ ಅವರ ಕೈಗುಣ ಸರಿಯಿಲ್ಲ. ಯಾವುದನ್ನು ಹಿಡಿದುಕೊಂಡು ಹೋರಾಟ ಮಾಡುತ್ತಾರೋ ಅದರ ದರ ಜಾಸ್ತಿ ಆಗುತ್ತೆ ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಮಹದೇವಪ್ಪರಿಂದ ಪ್ರತ್ಯೇಕ ಅಹಿಂದ ಸಮಾವೇಶ ವಿಚಾರ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಮಾಡಲಿ ಬಿಡಿ ಯಾರಿಗೂ ತೊಂದರೆ ಇಲ್ಲ. ಸಭೆಗಳು, ಸಮಾರಂಭಗಳು ಮಾಡಿದರೆ ತಪ್ಪೇನಿದೆ. ರಾಜಕೀಯ ಸಮಾವೇಶಗಳಿಂದ ಪಕ್ಷಕ್ಕೆ ಅನುಕೂಲ ಆಗುತ್ತದೆ. ಪಕ್ಷದ ಬಲವರ್ಧನೆ ದೃಷ್ಟಿಯಿಂದ ಅಹಿಂದ ಸಮಾವೇಶ ಮಾಡುತ್ತಿರಬಹುದು. ಆದರೆ, ಪ್ರತ್ಯೇಕವಾಗಿ ಮಾಡುವ ಬಗ್ಗೆ ಮಾಹಿತಿ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಕೇಳಿ ಎಂದರು.
ಈ ವೇಳೆ ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್, ಬಿಡದಿ ಸೊಸೈಟಿ ಅಧ್ಯಕ್ಷ ಮಧು ಕುಮಾರ್, ರಾಮನಗರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಚಿಕ್ಕಬ್ಯಾಟಪ್ಪ, ಎನ್.ನರಸಿಂಹಯ್ಯ, ಶೇಷಗಿರಿಹಳ್ಳಿ ಶಿವಣ್ಣ, ಹೊಸೂರು ರಾಜಣ್ಣ, ಸಿದ್ದರಾಜು, ಬೆಟ್ಟಸ್ವಾಮಿ, ಲೋಕೇಶ್, ಮಲ್ಲೇಶ್ ಮತ್ತಿತರರು ಹಾಜರಿದ್ದರು.