ತಾಲೂಕಿನ ಕಾದರವಳ್ಳಿಯಲ್ಲಿ ನ.21ರಂದು ನಡೆಯಲಿರುವ ಕಿತ್ತೂರು ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ, ಶಿಕ್ಷಣ ತಜ್ಞ ಗಂಗಾಧರ ಚನಬಸಯ್ಯ ಕೋಟಗಿ ಆಯ್ಕೆ ಮಾಡಲಾಗಿದೆ ಎಂದು ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ತಾಲೂಕಿನ ಕಾದರವಳ್ಳಿಯಲ್ಲಿ ನ.21ರಂದು ನಡೆಯಲಿರುವ ಕಿತ್ತೂರು ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ, ಶಿಕ್ಷಣ ತಜ್ಞ ಗಂಗಾಧರ ಚನಬಸಯ್ಯ ಕೋಟಗಿ ಆಯ್ಕೆ ಮಾಡಲಾಗಿದೆ ಎಂದು ಕಿತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಹೇಳಿದರು.ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸೋಮವಾರ ನಡೆದ ಕಿತ್ತೂರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಂ.ಕೆ.ಹುಬ್ವಳ್ಳಿಯಲ್ಲಿರುವ ವೀರ ಶರಣೆ ಜಗಜ್ಯೋತಿ ಬಸವೇಶ್ವರರ ಧರ್ಮಪತ್ನಿ ಶರಣೆ ಗಂಗಾಂಬಿಕೆ ಐಕ್ಯ ಕ್ಷೇತ್ರವನ್ನು ಐತಿಹಾಸಿಕ ಸ್ಮಾರಕವಾಗಿಸಿ ಶರಣ ಪರಂಪರೆ ಉಳಿಸುವಲ್ಲಿ ಜೀವಮಾನವಿಡಿ ಶ್ರಮಿಸಿದ ಸಾಧಕ ಶರಣಜೀವಿ ಗಂಗಾಧರ ಚನಬಸಯ್ಯ ಕೋಟಗಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಪದಾಧಿಕಾರಿಗಳಾದ ಮಂಜುನಾಥ ಕಳಸಣ್ಣವರ, ಮಹೇಶ ಚನ್ನಂಗಿ, ಮಹೇಶ್ವರ ಹೊಂಗಲ, ಬಿ.ಸಿ.ಬಿದರಿ, ರಾಘವೇಂದ್ರ, ಪ್ರಭಾ ಲದ್ದಿಮಠ, ಡಾ.ಗಜಾನನ ಸೊಗಲನ್ನವರ, ನಾಗಯ್ಯ ಹುಲೆಪ್ಪನವರಮಠ, ಸುನಂದಾ ಜೋಶಿ ಮತ್ತಿತರು ಉಪಸ್ಥಿತರಿದ್ದರು. 38 ವರ್ಷಗಳ ಶೈಕ್ಷಣಿಕ ಸೇವೆಗೆ ಸಂದ ಸರ್ವಾಧ್ಯಕ್ಷ ಪಟ್ಟ
75 ವರ್ಷಗಳ ತುಂಬು ಜೀವನವನ್ನು ನಡೆಸಿರುವ ಶಿಕ್ಷಣ ತಜ್ಞ ಗಂಗಾಧರ ಚನಬಸಯ್ಯ ಕೋಟಗಿ ಅವರು ನಿವೃತ್ತಿ ನಂತರವೂ ಶಿಕ್ಷಣ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ಇಂದಿಗೂ ತೊಡಗಿಸಿಕೊಂಡಿರುವರು. 38 ವರ್ಷಗಳ ಕಾಲ ಶೈಕ್ಷಣಿಕ ಸೇವೆಯನ್ನು ಸಲ್ಲಿಸಿರುವುದರ ಜೊತೆಗೆ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳಾಗಿ, ಜಿಲ್ಲಾ ಅಧ್ಯಕ್ಷರಾಗಿ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಗಂಗಾಂಬಿಕೆಯ ಮುಕ್ತಿ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಾಗಿ, ಸಂಕೇಶ್ವರದ ದುರದಂಡೀಶ್ವರ ವಿದ್ಯಾಸಂವರ್ಧಕ ಸಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವರು. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಡಾ.ರಾಧಾಕೃಷ್ಣನ್ ಪ್ರಶಸ್ತಿ, ಕೇಂದ್ರ ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಮಿತಿ ಖೇಡಾ ನವದೆಹಲಿ ಅವರಿಂದ ಜೀವಮಾನ ಶೈಕ್ಷಣಿಕ ಸಾಧನಾ ಪ್ರಶಸ್ತಿ, ರಾಜ್ಯ ವಿಜ್ಞಾನ ಪರಿಷತ್ ಕೊಡಮಾಡುವ ರಾಜ್ಯಮಟ್ಟದ ಎಚ್.ನರಸಿಂಹಯ್ಯ ಪ್ರಶಸ್ತಿ, ಇಂಡಿಯನ್ ಸಾಲಿಡಿಯಾರಿಟಿ ಕೌನ್ಸಿಲ್ ನವದೆಹಲಿ ಅವರಿಂದ ರಾಜೀವ ಗಾಂಧಿ ಸಮ್ಮಾನ್ ಪ್ರಶಸ್ತಿ, 2016ರಲ್ಲಿ ಯುನಿವರ್ಸಿಟಿ ಆಫ್ ಸೌತ್ ಅಮೇರಿಕಾದಿಂದ ಪ್ರತಿಷ್ಠಿತ ಡಿಲಿಟ್ ಪದವಿ ಪಡೆದಿರುವ ಹಿರಿಮೆ ಇವರದು.ಬಹುಮುಖ ಪ್ರತಿಭೆ ಹೊಂದಿರುವ ಶ್ರೀಯುತರ ಒಪ್ಪಿಗೆಯನ್ನು ಪಡೆದಿದ್ದು, ಬರಲಿರುವ ದಿನಗಳಲ್ಲಿ ಕಿತ್ತೂರ ತಾಲೂಕಿನ ವಿವಿಧ ಹಂತದ ಶಿಕ್ಷಣ ಮತ್ತು ನೌಕರರ ಸಂಘಟನೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಪತ್ರಕರ್ತರು ಮತ್ತು ಕಾದರವಳ್ಳಿಯ ಪ್ರಮುಖರೊಂದಿಗೆ ಹೋಗಿ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅಸಂಖ್ಯಾತ ಶಿಷ್ಯ ಬಳಗವನ್ನು ಹೊಂದಿರುವ ಜಿ.ಸಿ.ಕೋಟಗಿ ಅವರನ್ನು ಅಧಿಕೃತವಾಗಿ ಆಮಂತ್ರಿಸಿ ಗೌರವಿಸಲಾಗುವುದು.-ಡಾ.ಎಸ್.ಬಿ.ದಳವಾಯಿ,
ತಾಲೂಕು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಚನ್ನಮನ ಕಿತ್ತೂರು.