ಚಿಕ್ಕಬಳ್ಳಾಪುರ: ಹಾಲು, ಮೊಸಲು ಸೇರಿದಂತೆ ಕ್ಷೀರೋತ್ಪನ್ನಗಳ ದರ ಏರಿಕೆಯ ಭರ್ಜರಿ ಆಘಾತದ ಬೆನ್ನಲ್ಲೇ ರಾಜ್ಯದ ಜನರಿಗೀಗ ಬಸ್‌ ದರ ಏರಿಕೆಯ ಶಾಕ್‌ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ತಿಂಗಳ 5ರಿಂದ ಸರ್ಕಾರಿ ಸ್ವಾಮ್ಯದ ಸಾರಿಗೆ ಬಸ್ ಗಳ ಪ್ರಯಾಣ ದರ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ 5 ಬಾರಿ ಡೀಸೆಲ್ ಬೆಲೆ ಏರಿಕೆ

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ 5 ಬಾರಿ ಡೀಸೆಲ್ ಬೆಲೆ ಏರಿಕೆ ಮಾಡಿದೆ. ಇದರಿಂದ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ವಾರ್ಷಿಕ 2 ಸಾವಿರ ಕೋಟಿ ರುಪಾಯಿ ನಷ್ಟ ಆಗುತ್ತಿದೆ. ಈಗಾಗಲೇ ಸಂಸ್ಥೆಗಳು 9 ಸಾವಿರ ಕೋಟಿ ರುಪಾಯಿ ನಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಆಗಿದೆ ಎಂದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ದರ ಏರಿಕೆ ನಿರ್ಧಾರವನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಮತ್ತು ಸಾರಿಗೆ ಇಲಾಖೆಗೆ ನೀಡಲಾಗಿದೆ ಎಂದು ಹೇಳಿದರು.


ನ.4 ರಂದು ನಿರ್ಧಾರ:

ನ. 4ರಂದು ಸಾರಿಗೆ ಇಲಾಖೆ ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಎಷ್ಟು ಪ್ರಮಾಣದಲ್ಲಿ ದರ ಹೆಚ್ಚಿಸಬೇಕೆಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪರಿಷ್ಕೃತ ಪ್ರಯಾಣ ದರ ನ.5ರಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.