ಕಾವೇರಿ ನೀರು ವಿವಾದದ ಕಿಚ್ಚು ಮತ್ತೆ ಮುನ್ನಲೆಗೆ ಬಂದಿದ್ದು. ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲ್ಯೂಆರ್‌ಸಿ) ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು. ಅಲ್ಲದೆ, ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿವೆ.
ಬೆಂಗಳೂರು : ಕಾವೇರಿ ನೀರು ವಿವಾದದ ಕಿಚ್ಚು ಮತ್ತೆ ಮುನ್ನಲೆಗೆ ಬಂದಿದ್ದು. ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲ್ಯೂಆರ್‌ಸಿ) ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು. ಅಲ್ಲದೆ, ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿವೆ.
ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನ, ಮೈಸೂರು ಬ್ಯಾಂಕ್ ವೃತ್ತ, ಮಲ್ಲೇಶ್ವರ ವೃತ್ತದ ಕುವೆಂಪು ಪ್ರತಿಮೆ ಮುಂಭಾಗದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ, ಸಾ.ರಾಗೋವಿಂದು, ಗಿರೀಶ್‌ಗೌಡ ಹಾಗೂ ಇತರರನ್ನು ಪೊಲೀಸರು, ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಕೆಲಕಾಲ ವಶದಲ್ಲಿ ಇಟ್ಟುಕೊಂಡು ನಂತರ ಬಿಡುಗಡೆ ಮಾಡಿದರು.
ಅದೇ ರೀತಿ ಮಲ್ಲೇಶ್ವರ ವೃತ್ತದ ಕುವೆಂಪು ಪ್ರತಿಮೆ ಮುಂಭಾಗದಲ್ಲಿ ಕಾವೇರಿ ಜಲ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದ ಕನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು, ಕನ್ನಡ ಹೋರಾಟಗಾರ ಸಿ.ಕೆ.ರಾಮೇಗೌಡ, ಪಾಲನೇತ್ರ ಮತ್ತಿತರರಿಗೆ ಕೇವಲ ಹತ್ತು ನಿಮಿಷವೂ ಪ್ರತಿಭಟಿಸಲು ಅವಕಾಶ ನೀಡದ ಪೊಲೀಸರು, ವಶಕ್ಕೆ ಪಡೆದರು. ಬಿಎಂಟಿಸಿ ಬಸ್‌ನಲ್ಲಿ ಎಲ್ಲ ಪ್ರತಿಭಟನಾಕಾರನ್ನು ಹೊತ್ತೊಯ್ದ ಪೊಲೀಸರು ಮಲ್ಲೇಶ್ವರದ 18ನೇ ಕ್ರಾಸ್ ಸಮೀಪದ ಮೈದಾನದಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ವಶದಲ್ಲಿಟ್ಟುಕೊಂಡು ಬಳಿಕ ಬಿಡುಗಡೆಗೊಳಿಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಅವರು, ಯಾವುದೇ ಕಾರಣಕ್ಕೂ ಡ್ಯಾಂನಿಂದ ಒಂದು ಹನಿ ನೀರನ್ನು ನಾವು ತಮಿಳುನಾಡಿಗೆ ಬಿಡುವುದಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ಮುಚ್ಚುಮರೆಯಿಂದ ನೀರುವು ಬಿಡುವುದಾಗಲೀ ಮಾಡಬಾರದು. ನೀಡು ಬಿಟ್ಟರೆ ಇದು ಕನ್ನಡಿಗರಿಗೆ ಮಾಡುವ ದ್ರೋಹ ಆಗುತ್ತದೆ. ನಾವು ಒಂದೊಂದು ಹನಿ ನೀರಿಗೂ ಕಾಯುತ್ತೇವೆ. ಕರ್ನಾಟಕ ಸರ್ಕಾರ ವಿವೇಚನೆ ಇಲ್ಲದೇ ನೀರು ಬಿಟ್ಟರೆ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ. ಜೈಲಿಗೆ ಹೋಗಲು ಸಿದ್ಧ, ಎಲ್ಲದಕ್ಕೂ ಸಿದ್ಧ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬುದನ್ನು ಡಿ.ಕೆ.ಶಿವಕುಮಾರ್ ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಬಂದ್ ನಿರ್ಧಾರ?
ಪ್ರತಿ ದಿನ 3500 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುವ ಕಾವೇರಿ ಜಲಮಂಡಳಿ ಆದೇಶದ ವಿರುದ್ಧ ಕರ್ನಾಟಕ ಬಂದ್ ನಡೆಸುವ ಕುರಿತು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅಧ್ಯಕ್ಷತೆಯಲ್ಲಿ ಜು.31ರಂದು ಬೆಳಗ್ಗೆ 11ಕ್ಕೆ ನಗರದ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಕನ್ನಡಪರ ಎಲ್ಲ ಸಂಘಟನೆಗಳಿಗೂ ಆಹ್ವಾನ ನೀಡಲಾಗಿದ್ದು, ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದರೆ ರಾಜ್ಯಾದ್ಯಂತ ಬಂದ್ ನಡೆಸಿ ಹೋರಾಟ ನಡೆಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ವಾಟಾಳ್ ನಾಗರಾಜ್ ಮಾಹಿತಿ ನೀಡಿದ್ದಾರೆ.
ಬಂದ್ ಅನಿವಾರ್ಯ
ರಾಜ್ಯ ತೀವ್ರ ಬರ ಪರಿಸ್ಥಿತಿಗೆ ತುತ್ತಾಗಿದೆ. ಇಂತಹ ವೇಳೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶ ಕನ್ನಡಿಗರಿಗೆ ಮರಣ ಶಾಸನದಂತಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಕನ್ನಡಿಗರ ಕಣ್ಣು ತಪ್ಪಿಸಿ ನೀರು ಬಿಟ್ಟರೆ ಬಂದ್ ಕರ್ನಾಟಕ ಬಂದ್ ಅನಿವಾರ್ಯ.
-ಪ್ರವೀಣ್‌ಕುಮಾರ್ ಶೆಟ್ಟಿ ಕರವೇ ಅಧ್ಯಕ್ಷರು
ಕನ್ನಡಿಗರಿಗೆ ದ್ರೋಹ ಮಾಡಬೇಡಿ
ಕಾವೇರಿ ಟ್ರಿಬ್ಯುನಲ್ ಅವೈಜ್ಞಾನಿಕ ತೀರ್ಪು ನೀಡಿದೆ. ಯಾರದ್ದೋ ಒತ್ತಡಕ್ಕೆ ಕರ್ನಾಟಕದ ವಿರುದ್ಧ ತೀರ್ಪು ನೀಡಲಾಗಿದೆ. ನಮ್ಮಲ್ಲಿ ಕುಡಿಯುವ ನೀರೇ ಇಲ್ಲ, ತಮಿಳುನಾಡಿಗೆ 3ನೇ ಬೆಳೆ ನೀರು ಕೊಡಿ ಎನ್ನುವುದು ಸರಿಯಲ್ಲ. ಟ್ರಿಬ್ಯುನಲ್ ತಜ್ಞರ ತಂಡ ಕಳುಹಿಸಿ ಅಧ್ಯಯನ ನಡೆಸಿ, ಆದೇಶವನ್ನು ಮರು ಪರಿಶೀಲಿಸಬೇಕು. ಸರ್ಕಾರ ನೀರು ಬಿಟ್ಟು ಕನ್ನಡಿಗರಿಗೆ ದ್ರೋಹ ಮಾಡಬಾರದು.
-ಸಾ.ರಾ.ಗೋವಿಂದು ಕನ್ನಡಪರ ಹೋರಾಟಗಾರ
ಮಳೆ ಬಾರದ ಸಂದರ್ಭದಲ್ಲಿ ಕಾವೇರಿ ನೀರು ಹಂಚಿಕೆ ಬಗ್ಗೆ ಅಂತಿಮ ತೀರ್ಪಿನಲ್ಲಿ ಸ್ಪಷ್ಟಪಡಿಸಿಲ್ಲ. ಬರದ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಕ್ರಮದ ಬಗ್ಗೆ ಸಂಕಷ್ಟ ಸೂತ್ರ ರೂಪಿಸಲು ಕೇಂದ್ರ ಸರ್ಕಾರದ ಮೇಲೆ ಸಿಎಂ ಅವರು ಒತ್ತಡ ಹಾಕಬೇಕು. ನಮಗೆ ಕುಡಿಯಲು ನೀರಿಲ್ಲದಿದ್ದಾಗ, ತಮಿಳಿಗರ ಕೃಷಿಗೆ ನೀರು ಕೊಡುವುದು ಸರಿಯಲ್ಲ.
-ವ.ಚ.ಚನ್ನೇಗೌಡ ಕನ್ನಡಪರ ಹೋರಾಟಗಾರ
ವಾಸ್ತವ ಸ್ಥಿತಿ ಪರಿಶೀಲನೆ ಮಾಡದೆ ನೀಡಿರುವ ಆದೇಶ ಸರಿಯಿಲ್ಲ. ಕಾವೇರಿ ಜಲಮಂಡಳಿ ಆದೇಶದ ವಿರುದ್ಧ ಅರೆಬೆತ್ತಲೆ ಮಾಡಿದ್ದೇವೆ. ಕನ್ನಡಿಗರಿಗೆ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಕೊಡುವುದು ಯಾವ ನ್ಯಾಯ. ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು.
ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು
