ಮಾರಕಾಸ್ತ್ರದಿಂದ ಕುತ್ತಿಗೆಗೆ ಹೊಡೆದು ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಮಾರಕಾಸ್ತ್ರದಿಂದ ಕುತ್ತಿಗೆಗೆ ಹೊಡೆದು ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ. ಗ್ರಾಮದ ಮಾಳಪ್ಪ ನಿಂಬಾಳ (57) ಕೊಲೆಯಾದ ವ್ಯಕ್ತಿ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಏನಿದು ಘಟನೆ?: ಜಮೀನಿನ ಸೀಮೆ ಹಾಗೂ ದಾರಿಯ ವಿಚಾರದಲ್ಲಿ ರಾಜಶೇಖರ ದಿಂಡವಾರ ಹಾಗೂ ಪುತ್ರರಾದ ಶಿವಾನಂದ ಹಾಗೂ ಬಸವರಾಜ ಎಂಬುವವರು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಾಲ್ಕೈದು ತಿಂಗಳ ಹಿಂದೆ ನಿಂಬಾಳ ಹಾಗೂ ದಿಂಡವಾರ ಕುಟುಂಬಗಳ ಮಧ್ಯೆ ಜಮೀನು ಸೀಮೆ ಹಾಗೂ ದಾರಿ ವಿಚಾರದಲ್ಲಿ ಜಗಳ ಆಗಿತ್ತಂತೆ. ಹಿರಿಯರ ಸಮ್ಮುಖದಲ್ಲಿ ಜಮೀನು ದಾರಿ ಅಳತೆ ಮಾಡಿಸಿ ಬಗೆಹರಿಸುವ ಮಾತಾಗಿತ್ತು. ನಂತರ ಎಲ್ಲರೂ ಸ್ನೇಹದಿಂದ ಇದ್ದು, ಸೋಮವಾರ ರಾತ್ರಿ ತೋಟದ ವಸತಿ ಮನೆಯಿಂದ ರಾಜಶೇಖರ ದಿಂಡವಾರ ಗಣಪತಿ ನೋಡಿಕೊಂಡು ಬರೋಣವೆಂದು ಮಾಳಪ್ಪ ನಿಂಬಾಳನನ್ನು ಗ್ರಾಮದೊಳಗೆ ಕರೆದುಕೊಂಡು ಹೋಗಿದ್ದಾನೆ. ತಡರಾತ್ರಿಯಾದರೂ ಮಾಳಪ್ಪ ಮನೆಗೆ ಬಂದಿರಲಿಲ್ಲ. ಆದರೆ ಬೆಳಗ್ಗೆ ಜಮೀನಿಗೆ ಹೋಗಿದ್ದಾಗ ಮಾಳಪ್ಪ ಕೊಲೆಯಾಗಿ ಬಿದ್ದಿರೋದನ್ನು ಕಟುಂಬಸ್ಥರು ನೋಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ರವೀಂದ್ರ ನಾಯ್ಕೋಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಜೊತೆಗೆ ಶ್ವಾನದಳ ಬೆರಳಚ್ಚು ತಂಡ ಹಾಗೂ ಸುಕೋ‌ ಟೀಂ ನಿಂದಲೂ ತನಿಖೆ ನಡೆದಿದೆ.