ಹಸಿದವರ ಹೊಟ್ಟೆ ತುಂಬಿಸುವ ಪವಿತ್ರ ಸಂಕಲ್ಪದೊಂದಿಗೆ ಕಳೆದ 3 ವರ್ಷಗಳಿಂದ ಬಡವರು, ನಿರ್ಗತಿಕರಿಗೆ ನಿರಂತರ ಅನ್ನಸಂತರ್ಪಣೆ ಮಾಡುತ್ತಿರುವ ಸಮಾಜ ಸೇವಕ ರವಿ ಪೂಜಾರಿಯವರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಹಸಿದವರ ಹೊಟ್ಟೆ ತುಂಬಿಸುವ ಪವಿತ್ರ ಸಂಕಲ್ಪದೊಂದಿಗೆ ಕಳೆದ 3 ವರ್ಷಗಳಿಂದ ಬಡವರು, ನಿರ್ಗತಿಕರಿಗೆ ನಿರಂತರ ಅನ್ನಸಂತರ್ಪಣೆ ಮಾಡುತ್ತಿರುವ ಸಮಾಜ ಸೇವಕ ರವಿ ಪೂಜಾರಿಯವರ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.

ಪಟ್ಟಣದ ಆರ್‌ಎಸ್‌ಪಿ ಸಭಾಂಗಣದಲ್ಲಿ ಮಂಗಳವಾರ ನಡೆದ ರವಿ ಪೂಜಾರಿ ಅವರ ದಾಸೋಹ ಸೇವೆಯ 3ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನದಾನ ಅತ್ಯಂತ ಶ್ರೇಷ್ಠ ದಾನ. ಹಸಿದವರ ಕಣ್ಣೀರು ಒರೆಸುವ ಸಮಾಜಮುಖಿ ಕಾರ್ಯಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು. ರವಿ ಪೂಜಾರಿ ಅವರ ದಾಸೋಹ ಕಾಯಕ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಾವಸಾಬ ಐಹೊಳೆ ಮಾತನಾಡಿ, ರವಿ ಪೂಜಾರಿ ಅವರು ಉದ್ಯೋಗ ಸಮೂಹ ಸಂಸ್ಥೆ ಆರಂಭಿಸಿ ಅನೇಕರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಬಡವರು, ನಿರ್ಗತಿಕರು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಪ್ರತಿದಿನ ಅನ್ನಸಂತರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸಾಮಾಜಿಕ ಹೋರಾಟಗಾರ ಗುರುಗೌಡ ಆಜೂರ ಮಾತನಾಡಿ, ಬಡವರು ಹಾಗೂ ನಿರ್ಗತಿಕರಿಗೆ ಅನ್ನದ ನೆರವು ನೀಡುವ ಮೂಲಕ ರವಿ ಪೂಜಾರಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.ಸಮಾಜ ಸೇವಕ ರವಿ ಪೂಜಾರಿ ಮಾತನಾಡಿ, ಬಡವರ ಸೇವೆಯಲ್ಲಿ ನಾನು ದೇವರನ್ನು ಕಾಣುತ್ತೇನೆ. ಒಂದು ಹೊತ್ತಿನ ಅನ್ನಕ್ಕಾಗಿ ಕಷ್ಟಪಟ್ಟ ನೋವನ್ನು ನಾನೂ ಅನುಭವಿಸಿದ್ದೇನೆ. ನನ್ನ ಉಸಿರು ಇರುವವರೆಗೆ ಬಡವರು, ನಿರ್ಗತಿಕರ ಸೇವೆ ಮುಂದುವರಿಸುತ್ತೇನೆ. ಉಚಿತ ಆಂಬುಲೆನ್ಸ್ ಹಾಗೂ ಅನ್ನಸಂತರ್ಪಣೆ ಸೇವೆ ಮುಂದೆಯೂ ಮುಂದುವರಿಯಲಿದೆ ಎಂದರು.ಕಾರ್ಯಕ್ರಮದಲ್ಲಿ ಚಿದಾನಂದ ಶೇಗುಣಶಿ, ಸಿದ್ದು ಪಾಟೀಲ, ಪ್ರಕಾಶ ಹಿಡಕಲ್ಲ, ರಮೇಶ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.