ವಿಶೇಷ ವರದಿಕನ್ನಡಪ್ರಭ ವಾರ್ತೆ ಇಳಕಲ್ಲಸರ್ಕಾರದ ಯೋಜನೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಇರಬೇಕು. ಆದರೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಸೂಪರ್‌ ಮಾರ್ಕೆಟ್‌ ಕಟ್ಟಡವೇ ಇಂದು ಸಾರ್ವಜನಿಕರಿಗೆ ಉಪಯೋಗವಾಗದೆ ಪಾಳು ಬೀಳುತ್ತಿರುವುದು ವಿಪರ್ಯಾಸವಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಇಳಕಲ್ಲ

ಸರ್ಕಾರದ ಯೋಜನೆಗಳು ಸಾರ್ವಜನಿಕರ ಅನುಕೂಲಕ್ಕಾಗಿ ಇರಬೇಕು. ಆದರೆ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಸೂಪರ್‌ ಮಾರ್ಕೆಟ್‌ ಕಟ್ಟಡವೇ ಇಂದು ಸಾರ್ವಜನಿಕರಿಗೆ ಉಪಯೋಗವಾಗದೆ ಪಾಳು ಬೀಳುತ್ತಿರುವುದು ವಿಪರ್ಯಾಸವಾಗಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದ ಹನುಮಸಾಗರಕ್ಕೆ ತೆರಳುವ ರಸ್ತೆಯ ಪಕ್ಕದಲ್ಲಿ ನಗರಸಭೆಯ ವತಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಸೂಪರ್‌ ಮಾರ್ಕೆಟ್‌ ಇಂದು ಕಸದ ಗೂಡಾಗಿ, ಪಾಳುಬಿದ್ದ ಕಟ್ಟಡವಾಗಿ ಮಾರ್ಪಟ್ಟಿದೆ. ಹಲವು ಅಂಗಡಿ ಮಳಿಗೆಗಳು ತುಕ್ಕು ಹಿಡಿಯುತ್ತಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡದ ಸ್ಥಿತಿ ಹದಗೆಡುತ್ತಿದೆ. ಅಲ್ಲದೆ, ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಬೆಳೆಯುತ್ತಿರುವ ಇಳಕಲ್ಲ ನಗರದಲ್ಲಿ ವ್ಯಾಪಾರ–ವಹಿವಾಟು ನಡೆಸಲು ಅಂಗಡಿಗಳ ಕೊರತೆ ಇದೆ. ಉದ್ಯೋಗ ಹಾಗೂ ಸ್ವಂತ ವ್ಯಾಪಾರ ಆರಂಭಿಸಲು ಆಸಕ್ತಿ ಹೊಂದಿರುವ ಅನೇಕ ಯುವಕರು ಮತ್ತು ಸಣ್ಣ ವ್ಯಾಪಾರಸ್ಥರು ಸೂಕ್ತ ಮಳಿಗೆಗಳಿಗಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ನಗರಸಭೆ, ಹನುಮಸಾಗರ ರಸ್ತೆಯ ಸಮೀಪದ ಪ್ರದೇಶದಲ್ಲಿ ಸುಮಾರು 100 ಅಂಗಡಿ ಮಳಿಗೆಗಳನ್ನು ಒಳಗೊಂಡ ಸುಸಜ್ಜಿತ ಸೂಪರ್‌ ಮಾರ್ಕೆಟ್‌ ನಿರ್ಮಿಸಿ ಸಾರ್ವಜನಿಕರಿಗೆ ನೀಡಲು ಮುಂದಾಗಿತ್ತು.

ಅದರಂತೆ ಸುಂದರವಾದ ಅಂಗಡಿ ಸಮುಚ್ಚಯವನ್ನು ನಿರ್ಮಿಸಿ, ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲು ಸಿದ್ಧಪಡಿಸಲಾಯಿತು. ಆದರೆ, ಅಂಗಡಿಗಳ ಬಾಡಿಗೆ ಮತ್ತು ಠೇವಣಿ ಮೊತ್ತವನ್ನು ಚಿಕ್ಕ ಪಟ್ಟಣವಾದ ಇಳಕಲ್ಲಿನ ಸ್ಥಳೀಯ ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ನಿಗದಿಪಡಿಸುವ ಬದಲು ಬೆಂಗಳೂರಿನ ಮಾರುಕಟ್ಟೆ ದರಕ್ಕೆ ಸಮಾನವಾಗಿ ನಿಗದಿಪಡಿಸಿರುವುದು ವ್ಯಾಪಾರಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ದುಬಾರಿ ಬಾಡಿಗೆ ಮತ್ತು ಡಿಪಾಸಿಟ್‌ ಮೊತ್ತದಿಂದಾಗಿ ಸಣ್ಣ ಹಾಗೂ ಬಡ ವ್ಯಾಪಾರಸ್ಥರು ಅಂಗಡಿಗಳನ್ನು ಪಡೆಯಲು ಹಿಂದೇಟು ಹಾಕಿದ್ದಾರೆ. ಪರಿಣಾಮವಾಗಿ, ಐದು ವರ್ಷಗಳಾದರೂ ಬಹುತೇಕ ಅಂಗಡಿಗಳು ಬಳಕೆಯಾಗದೆ ಖಾಲಿ ಉಳಿದಿವೆ. ಸಾರ್ವಜನಿಕರ ಹಣದಿಂದ ನಿರ್ಮಿಸಿರುವ ಕಟ್ಟಡ ಸೂಕ್ತವಾಗಿ ಬಳಕೆಯಾಗದೆ ಹಾಳಾಗುತ್ತಿರುವುದು ಸರ್ಕಾರದ ಯೋಜನಾ ನೀತಿ ಹಾಗೂ ಬಾಡಿಗೆ ನಿಗದಿ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಒಟ್ಟಾರೆಯಾಗಿ ಇಳಕಲ್ಲ ನಗರದ ವ್ಯಾಪಾರಸ್ಥರಿಗೆ ಕಡಿಮೆ ಬಾಡಿಗೆಯಲ್ಲಿ ಮಳಿಗೆ ನೀಡಲು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ಇಳಕಲ್ಲ ನಗರದ ಆರ್ಥಿಕ ಪರಿಸ್ಥಿತಿ ಹಾಗೂ ಸ್ಥಳೀಯ ಮಾರುಕಟ್ಟೆ ದರವನ್ನು ಪರಿಗಣಿಸಿ ಅಂಗಡಿಗಳ ಬಾಡಿಗೆ ಮತ್ತು ಡಿಪಾಸಿಟ್‌ ಮೊತ್ತವನ್ನು ಮರುನಿಗದಿಪಡಿಸಬೇಕು. ನಿರುದ್ಯೋಗಿ ಆಗಿರುವ ನಾನು ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಉದ್ದೇಶವಿತ್ತು. ಆದರೆ, ಅಂಗಡಿ ಬಾಡಿಗೆ ದರವು ಬೆಂಗಳೂರ ಮಾರ್ಕೆಟ್‌ ದರದಂತಿದೆ. ಇದರಿಂದ ನನಗೆ ನಿರಾಸೆಯಾಗಿದೆ. 5 ವರ್ಷದಿಂದ ಆ ನೂತನ ಅಂಗಡಿಗಳು ಪಾಳು ಬಿದ್ದಿವೆ. ಸರ್ಕಾರದ ಹಿರಿಯ ಅಧಿಕಾರಿಗಳು ಇಳಕಲ್ಲ ನಗರದ ಬಾಡಿಗೆ ದರ ನಿಗದಿ ಮಾಡಬೇಕು.

- ಉಮೇಶ ಶಿರೂರ, ನಿರುದ್ಯೋಗಿ ಯುವಕ

ಸರ್ಕಾರ ಇಳಕಲ್ಲ ನಗರಕ್ಕೆ ಸೂಪರ್‌ ಮಾರ್ಕೆಟನಲ್ಲಿ ಅಂಗಡಿಗಳನ್ನು ನಿರ್ಮಿಸಿದೆ. ಆದರೆ, ಅಂಗಡಿ ಬಾಡಿಗೆ ದರ ದುಬಾರಿ ಎಂದು ಯಾರು ಮುಂದೆ ಬರುತ್ತಿಲ್ಲ. ಈಗ ಸರ್ಕಾರಕ್ಕೆ ಬಾಡಿಗೆ ದರ ಕಡಿಮೆ ಮಾಡಲು ನಾನು ಮನವಿ ಮಾಡಿಕೊಂಡಿದ್ದೇನೆ. ಸರ್ಕಾರದ ಹಿರಿಯ ಅಧಿಕಾರಿಗಳು ಶೀಘ್ರದಲ್ಲಿಯೆ ಅನುಮತಿ ಕೊಡಲಿದ್ದಾರೆ. ಆದಷ್ಟು ಈ ಸಮಸ್ಯೆ ಪರಿಹಾರ ಮಾಡಿ ಬಡ ವ್ಯಾಪಾರಸ್ತರಿಗೆ ಅಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿ ಕೊಡುವೆ.

-ಶ್ರೀನಿವಾಸ ಜಾದವ ಪೌರಾಯುಕ್ತರು ಇಳಕಲ್ಲ ನಗರ ಸಭೆ