ಇತ್ತೀಚಿಗೆ ಬಾಡಿಗೆ ವಿಚಾರವಾಗಿ ಗುಂಡಿಟ್ಟು ವಕೀಲ ಮಂಜುನಾಥ್ನನ್ನು ಹತ್ಯೆಗೈದು ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಹಂತಕನನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚಿಗೆ ಬಾಡಿಗೆ ವಿಚಾರವಾಗಿ ಗುಂಡಿಟ್ಟು ವಕೀಲ ಮಂಜುನಾಥ್ನನ್ನು ಹತ್ಯೆಗೈದು ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಹಂತಕನನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಿಹಾರದ ಬಕ್ಸಾ ಜಿಲ್ಲೆಯ ಅಮಿತ್ ಕುಮಾರ್ ದುಬೆ ಬಂಧಿತನಾಗಿದ್ದು, ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಶೂಟರ್ ಪವನ್ ಕುಮಾರ್ ದುಬೆ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅ.19ರಂದು ಪಟ್ಟಂದೂರು ಅಗ್ರಹಾರದ ವಕೀಲ ಮಂಜುನಾಥ್ (43) ಅವರ ಎದೆಗೆ ಗುಂಡಿಟ್ಟು ಕೊಂದು ಪವನ್ ಹಾಗೂ ಅಮಿತ್ ಪರಾರಿ ಆಗಿದ್ದರು. ಈ ಆರೋಪಿಗಳ ಬೆನ್ನತ್ತಿದ ಪೊಲೀಸರು, ಸತತ 3 ವಾರಗಳ ಕಾರ್ಯಾಚರಣೆ ಬಳಿಕ ಓರ್ವನನ್ನು ಬಂಧಿಸಿದ್ದಾರೆ, ಸ್ಥಳೀಯ ನ್ಯಾಯಾಲಯದಲ್ಲಿ ಆತನನ್ನು ಹಾಜರುಪಡಿಸಿ ಬಳಿಕ ‘ವರ್ಗಾವಣೆ ಪ್ರಮಾಣ’ ಪತ್ರ ಪಡೆದು ಗುರುವಾರ ಕರೆತರಲಿದ್ದಾರೆ.
ಗುಂಡು ಹಾರಿಸಿದ್ದು ಕಾರಣವೇನು?ಹತ್ತು ವರ್ಷಗಳ ಹಿಂದೆ ಬದುಕು ಅರಸಿಕೊಂಡು ನಗರಕ್ಕೆ ಬಂದಿದ್ದ ಅಮಿತ್ ದುಬೆ, ಬಳಿಕ ಫುಡ್ ಡೆಲವರಿ ಹುಡುಗನಾಗಿ ದುಡಿದು ಜೀವನ ಕಟ್ಟಿಕೊಳ್ಳುತ್ತಿದ್ದ. ಬಿಹಾರದಲ್ಲಿ ಆತ ಕುಟುಂಬವು ಕಡು ಬಡತನದಲ್ಲಿದೆ. ಪಟ್ಟಂದೂರು ಅಗ್ರಹಾರದಲ್ಲಿ ವಕೀಲ ಮಂಜುನಾಥ್ ಅವರಿಗೆ ಸೇರಿದ ಶೆಡ್ನಲ್ಲಿ ತನ್ನ ಸ್ನೇಹಿತ ಪವನ್ ದುಬೆ ಜತೆ ಆತ ವಾಸವಾಗಿದ್ದ. ಆದರೆ ಐದಾರು ತಿಂಗಳ ಬಾಡಿಗೆ ನೀಡದ ವಿಚಾರವಾಗಿ ಮಾಲಿಕರ ಜತೆ ಆರೋಪಿಗಳಿಗೆ ಗಲಾಟೆಯಾಗಿತ್ತು. ತಮ್ಮನ್ನು ನಿಂದಿಸಿದರೆಂದು ಮಂಜುನಾಥ್ ಮೇಲೆ ಪವನ್ ಹಾಗೂ ಅಮಿತ್ ಕೋಪಗೊಂಡಿದ್ದರು ಎನ್ನಲಾಗಿದೆ. ಕೊನೆಗೆ ಅ.19 ರಂದು ರಾತ್ರಿ ಬಾಡಿಗೆ ನೀಡುವ ನೆಪದಲ್ಲಿ ಮಂಜುನಾಥ್ ಅವರ ಮನೆಗೆ ತೆರಳಿ ಬಳಿಕ ಗುಂಡು ಹಾರಿಸಿ ಕೊಂದು ಇಬ್ಬರು ಪರಾರಿಯಾಗಿದ್ದರು.
ಮೊಬೈಲ್ ಬಳಸದೆ ಕದ್ದು ಓಡಾಟಈ ಹತ್ಯೆ ಬಳಿಕ ಆರೋಪಿಗಳು ಪ್ರತ್ಯೇಕವಾಗಿ ತಪ್ಪಿಸಿಕೊಂಡಿದ್ದರು. ಬೈಕ್ ಹತ್ತಿ ತಮಿಳುನಾಡು, ತೆಲಂಗಾಣ, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಸುತ್ತಾಡಿ ಕೊನೆಗೆ ಬಿಹಾರದಲ್ಲಿರುವ ತನ್ನೂರನ್ನು ಅಮಿತ್ ಸೇರಿದ್ದ. ಆದರೆ ಮೊಬೈಲ್ ಬಳಸಿದರೆ ಪೊಲೀಸರಿಗೆ ತಮ್ಮ ಜಾಡು ಸಿಗಲಿದೆ ಎಂಬ ಕಾರಣಕ್ಕೆ ಆರೋಪಿಗಳಿಬ್ಬರು ಮೊಬೈಲ್ ಬಳಸದೆ ಅಜ್ಞಾತವಾಗಿದ್ದರು. 3 ವಾರಗಳು ಬಿಹಾರದಲ್ಲೇ ಬೀಡು ಬಿಟ್ಟಿದ್ದ ವೈಟ್ಫೀಲ್ಡ್ ವಿಭಾಗದ ಪೊಲೀಸರು, ಆರೋಪಿಯ ಸಂಬಂಧಿಕರು ಹಾಗೂ ಸ್ನೇಹಿತರ ಮೇಲೆ ನಿಗಾವಹಿಸಿದ್ದರು. ಆಗ ಅಮಿತ್ ಇರುವಿಕೆಯ ಸುಳಿವು ಸಿಕ್ಕಿದೆ. ಆತನಿಗೆ ಸಂಬಂಧಿಕರು ಆಶ್ರಯ ಕೊಟ್ಟಿದ್ದರು. ಈ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ.
