ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಲಕ್ಷ್ಮೀಪುರ 1ನೇ ಕ್ರಾಸ್ ನಿವಾಸಿ ರಾಜಶೇಖರ್ (44) ಕೊಲೆಯಾದ ಪತಿ. ಹತ್ಯೆ ಸಂಬಂಧ ಮೃತನ ಪತ್ನಿ ಮಾಲಾಶ್ರೀಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ವಿಚಾರ ದಂಪತಿ ಮಧ್ಯೆ ಬುಧವಾರ ರಾತ್ರಿ ಆರಂಭವಾದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆಕೆ, ಚಾಕುವಿನಿಂದ ಇರಿದಿದ್ದಾಳೆ. ಬಳಿಕ ತನ್ನ ತಂದೆಗೆ ಕರೆ ಮಾಡಿ ಗಂಡನಿಗೆ ಚಾಕುವಿನಿಂದ ಇರಿದಿದ್ದಾಗಿ ಆಕೆ ತಿಳಿಸಿದ್ದಾಳೆ. ಈ ವಿಷಯ ತಿಳಿದು ಮಗಳ ಮನೆಗೆ ಮಾಲಾಶ್ರೀ ಪೋಷಕರು ಧಾವಿಸುವ ಹೊತ್ತಿಗೆ ಅಳಿಯ ಮೃತಪಟ್ಟಿದ್ದಾನೆ.
5 ವರ್ಷಗಳ ಹಿಂದೆ ರಾಜಶೇಖರ್ ಹಾಗೂ ಮಾಲಾಶ್ರೀ ವಿವಾಹವಾಗಿದ್ದು, ಮದುವೆ ಬಳಿಕ ಲಕ್ಷ್ಮೀಪುರದಲ್ಲಿ ದಂಪತಿ ನೆಲೆಸಿದ್ದರು. ಖಾಸಗಿ ಬ್ಯಾಂಕ್ನಲ್ಲಿ ಸಾಲ ವಸೂಲಿ ವಿಭಾಗದಲ್ಲಿ ರಾಜಶೇಖರ್ ಕೆಲಸ ಮಾಡುತ್ತಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದು ಜಗಳವಾಡುತ್ತಿದ್ದ. ಇದೇ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಸಹ ನಡೆದಿದ್ದವು. ಆದರೆ ಮನೆಯಲ್ಲಿ ಗಲಾಟೆ ಮುಂದುವರಿದಿತ್ತು. ಅಲ್ಲದೆ ಮದುವೆಯಾಗಿ 5 ವರ್ಷಗಳಾದರೂ ಸಂತಾನವಾಗದ ಕಾರಣಕ್ಕೆ ಮಾಲಾಶ್ರೀ ಖಿನ್ನತೆಗೊಳಗಾಗಿದ್ದರು. ಎಂದಿನಂತೆ ಬುಧವಾರ ರಾತ್ರಿ ಸಹ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ.