ರಾಜ್ಯದ ನೀರಾವರಿ ಯೋಜನೆಗಳು, ಬರ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಡೆಸಿದ ಸರ್ವ ಪಕ್ಷ ಸಂಸದರ ಸಭೆಗೆ ವಿರೋಧ ಪಕ್ಷದ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ  ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಯಿತು

ಬೆಂಗಳೂರು : ರಾಜ್ಯದ ನೀರಾವರಿ ಯೋಜನೆಗಳು, ಬರ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಡೆಸಿದ ಸರ್ವ ಪಕ್ಷ ಸಂಸದರ ಸಭೆಗೆ ವಿರೋಧ ಪಕ್ಷದ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸಭೆ

ದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ಕಾವೇರಿ, ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು, ಮಳೆ ಕೊರತೆಯಿಂದ ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿ, ಕೇಂದ್ರದ ಮುಂದೆ ಬಾಕಿಯಿರುವ ಯೋಜನೆಗಳು, ಬಿಡುಗಡೆಯಾಗಬೇಕಿರುವ ಅನುದಾನ ಸೇರಿ ಹಲವು ವಿಚಾರಗಳ ಕುರಿತಂತೆ ಡಿ.ಕೆ. ಶಿವಕುಮಾರ್‌ ಸಭೆಯಲ್ಲಿ ವಿವರಿಸಿದರು. ಜತೆಗೆ ಸಂಸತ್‌ ಅಧಿವೇಶನದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತುವಂತೆ ಕೋರಿದರು.

ವಿರೋಧ ಪಕ್ಷದ ಸಂಸದರಿಂದಲೂ ಶ್ಲಾಘನೆ

ಮುಖ್ಯಮಂತ್ರಿ ಅವರ ಈ ನಡೆಗೆ ವಿರೋಧ ಪಕ್ಷದ ಸಂಸದರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸಭೆಯ ಧ್ಯೇಯೋದ್ದೇಶ, ಸರ್ವರನ್ನೂ ಒಳಗೊಳ್ಳುವ ಮುಖ್ಯಮಂತ್ರಿ ಅವರ ನಡೆಯನ್ನು ಅಭಿನಂದಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಬಿಜೆಪಿಯ ಹಿರಿಯ ಸಂಸದರಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಪಿ.ಸಿ.ಮೋಹನ್‌, ಗೋವಿಂದ ಕಾರಜೋಳ, ರಮೇಶ್‌ ಜಿಗಜಿಣಗಿ ಸೇರಿದಂತೆ ಇತರ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರಾದ ಜೈರಾಮ್‌ ರಮೇಶ್‌, ಸುಧಾಮೂರ್ತಿ ಸೇರಿದಂತೆ ಬಹುತೇಕ ಎಲ್ಲ ಸಂಸದರು ಸಭೆಗೆ ಹಾಜರಿದ್ದು, ರಾಜ್ಯದ ಪರ ಒಗ್ಗಟ್ಟು ಪ್ರದರ್ಶಿಸಿದರು. ಜತೆಗೆ ಇಷ್ಟು ಸಂಖ್ಯೆಯಲ್ಲಿ ಸಂಸದರು ಸಭೆಗೆ ಹಾಜರಾಗಿದ್ದು ಇದೇ ಮೊದಲು. ಸಭೆ ಆಯೋಜಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಎಚ್‌.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ, ಜಗ್ಗೇಶ್‌, ಲೆಹರ್‌ ಸಿಂಗ್‌ ಸಿರೋಯಾ, ಡಾ। ವೀರೇಂದ್ರ ಹೆಗ್ಗಡೆ ಅವರು ಅನ್ಯ ಕಾರ್ಯದ ನಿಮಿತ್ತ ಸಭೆಗೆ ಭಾಗಿ ಆಗಿರಲಿಲ್ಲ. ಸಭೆಗೆ ಹಾಜರಾಗದಿರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮೊದಲೇ ತಿಳಿಸಿದ್ದರು. ಒಟ್ಟಾರೆ ಸರ್ವ ಪಕ್ಷ ಸಂಸದರ ಸಭೆಯೂ ಯಶಸ್ವಿಯಾಗಿದ್ದು, ರಾಜ್ಯದ ಹಿತಕ್ಕೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರು.