ಕನ್ನಡಪ್ರಭ ವಾರ್ತೆ ನವದೆಹಲಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಸಂಜೆ ರಾಜ್ಯ ಸಂಸದರ ಸಭೆ ನಡೆಸಿ, ಕಾವೇರಿ, ಮಹದಾಯಿ ಸೇರಿದಂತೆ ರಾಜ್ಯದಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳು ಹಾಗೂ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದರು. ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ರಾಜ್ಯದ ಪರವಾಗಿ ಒಗ್ಗಟ್ಟಿನಿಂದ ಧ್ವನಿ ಎತ್ತಿ. ರಾಜ್ಯಕ್ಕೆ ಹೆಚ್ಚಿನ ಅನುದಾನ ಹರಿದು ಬರಲು ಕೇಂದ್ರದ ಮೇಲೆ ಎಲ್ಲರೂ ಸೇರಿ ಒತ್ತಡ ಹಾಕಿ ಎಂದು ಮನವಿ ಮಾಡಿದರು.ಸಭೆಯಲ್ಲಿ ಮಾತನಾಡಿದ ಶಿವಕುಮಾರ್, ರಾಜ್ಯದ ಅಭಿವೃದ್ಧಿಗೋಸ್ಕರ ಪಕ್ಷಭೇದ ಮರೆತು ಎಲ್ಲರೂ ಒಟ್ಟಿಗೇ ಕೆಲಸ ಮಾಡುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ನಾನಾ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ಸಂಸದರ ಸಹಕಾರ ಬಯಸಿದರು.
ತಾವು ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದರು. ರಾಜ್ಯದಲ್ಲಿ ಆಲಮಟ್ಟಿ, ಹಾರಂಗಿ ಜಲಾಶಯ ಬಿಟ್ಟು ಉಳಿದ ಅಣೆಕಟ್ಟೆಗಳು ಬಹುತೇಕ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಜನ, ಜಾನುವಾರಿಗೆ ಕುಡಿಯುವ ನೀರಿಗೂ ಸಮಸ್ಯೆ ಆಗುವ ಲಕ್ಷಣ ಇದೆ. ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ಅಗತ್ಯ ನೆರವು ಕೋರಿದ್ದೇನೆ. ಅದು ಸಿಗಲು ನಿಮ್ಮ ಸಹಕಾರ ಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದ್ದು, ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ನೋಡಿ ಬೆಳೆ ಬೆಳೆಯುವಂತೆ ರೈತರಿಗೆ ಮನವಿ ಮಾಡಿದ್ದೇನೆ. ಜತೆಗೆ ಈ ಬಗ್ಗೆ ರೈತರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇನೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ನೀರು ಉಳಿಸಲು ತುಂಗಭದ್ರಾಕ್ಕೆ ನವಿಲೆ ಸಮತೋಲನ ಜಲಾಶಯ ಕಟ್ಟಲು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಮ್ಮತಿ ಸೂಚಿಸಿದ್ದಾರೆ. ಇತ್ತೀಚೆಗೆ ನಡೆದ ತುಂಗಭದ್ರಾ ಕ್ರಸ್ಟ್ ಗೇಟ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಕೇಂದ್ರ ಜಲಶಕ್ತಿ ಸಚಿವ ಸಿ.ಎಸ್.ಪಾಟೀಲ್ ಸಮ್ಮುಖದಲ್ಲಿ ಈ ಸಮ್ಮತಿಗೆ ಬರಲಾಗಿದೆ. ಜತೆಗೆ, ಗೋದಾವರಿ, ಕೃಷ್ಣಾ, ಪೆನ್ನಾರ್, ಕಾವೇರಿ ನದಿಗಳ ಜೋಡಣೆ ಯೋಜನೆಗೂ ನಾವು ಒಪ್ಪಿದ್ದೇವೆ. ಇದೊಂದು ಐತಿಹಾಸಿಕ ತೀರ್ಮಾನ. ಕಾವೇರಿ ಸಂಬಂಧ ಚರ್ಚಿಸಲು ತಮಿಳುನಾಡು ಸಿಎಂ ವಿಜಯ್ ಅವರು ತಮ್ಮನ್ನು ಭೇಟಿ ಮಾಡಲು ಬಯಸಿದ್ದಾರೆ. ಶೀಘ್ರವೇ ಭೇಟಿ ಮಾಡಲಾಗುವುದು ಎಂದು ತಿಳಿಸಿದರು. ಮೇಕೆದಾಟು ಯೋಜನೆ ಕುರಿತು ಸುಪ್ರೀಂಕೋರ್ಟ್ ಎರಡೂ ರಾಜ್ಯಗಳಿಗೆ ಅನುಕೂಲ ಆಗುವ ತೀರ್ಪು ಕೊಟ್ಟಿದೆ. ಕರ್ನಾಟಕದ ಜಾಗದಲ್ಲಿ ಕರ್ನಾಟಕ ಸಮತೋಲನ ಅಣೆಕಟ್ಟೆ ಕಟ್ಟಲು ಬೇರೆ ರಾಜ್ಯಗಳ ಅನುಮತಿ ಅನಗತ್ಯ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಹಕ್ಕು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸೋಮವಾರ ಕೂಡ ರಾಜ್ಯಸಭೆಯಲ್ಲಿ ಜಲಶಕ್ತಿ ಸಚಿವರು, ತಮಿಳುನಾಡಿನ ರಾಜ್ಯಸಭಾ ಸದಸ್ಯ ಅನ್ಬುಮಣಿ ರಾಮದಾಸ್ ಅವರ ಪ್ರಶ್ನೆಗೆ ಉತ್ತರ ಕೊಡುವಾಗ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ಕರ್ನಾಟಕದ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು. ಕೃಷ್ಣಾ ನ್ಯಾಯಾಧೀಕರಣದ ನೀರು ಹಂಚಿಕೆ ತೀರ್ಮಾನ ಕುರಿತು ಗೆಜೆಟ್ ನೋಟಿಫಿಕೇಶನ್ ಆಗಬೇಕಿತ್ತು. ಈ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಉಳಿದಿತ್ತು. ಅದನ್ನು ಇತ್ಯರ್ಥ ಪಡಿಸಲು ವಿಶೇಷ ಪೀಠ ಸ್ಥಾಪನೆ ಮಾಡುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಮಹದಾಯಿ ಯೋಜನೆ ಕುರಿತ ಅಡೆತಡೆ ನಿವಾರಣೆಗೆ ನ್ಯಾಯವಾದಿಗಳ ಜತೆ ಸಮಾಲೋಚನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ನಮ್ಮ ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ನಮ್ಮ ಯೋಜನೆ ಫಾಲೋ ಅಪ್ ಮಾಡಲು ಪ್ರತ್ಯೇಕ ರೆಸಿಡೆಂಟ್ ಕಮಿಷನರ್ ಸೇರಿದಂತೆ ಹೊಸ ತಂಡ ರಚಿಸಲಾಗುವುದು. ನಿಮಗೆ ಪೂರಕ ಮಾಹಿತಿ ಒದಗಿಸಲು ಈ ತಂಡ ಕೆಲಸ ಮಾಡಲಿದೆ ಎಂದು ತಿಳಿಸಿದರು.
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಬ್ರಿಜೇಟ್ ಚೌಟ, ಕಾಗೇರಿ, ಹಿಟ್ನಾಳ್, ಡಾ.ಮಂಜುನಾಥ್, ಕುಮಾರ್ ನಾಯ್ಕ್, ನಾಸೀರ್ ಹುಸೇನ್, ರಾಧಾಕೃಷ್ಣ, ಸಾಗರ್ ಖಂಡ್ರೆ, ರಾಘವೇಂದ್ರ, ಯದುವೀರ್ ಒಡೆಯರ್, ಶ್ರೇಯಸ್ ಪಟೇಲ್, ಮಲ್ಲೇಶ್ ಬಾಬು, ಗೋವಿಂದ ಕಾರಜೋಳ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಿಯಾಂಕಾ ಜಾರಕಿಹೊಳಿ, ತೇಜಸ್ವಿ ಸೂರ್ಯ, ತುಕಾರಾಮ್, ಸುನೀಲ್ ಬೋಸ್, ಜೈರಾಮ್ ರಮೇಶ್, ಡಾ.ಪ್ರಭಾ ಮಲ್ಲಿಕಾರ್ಜುನ್, ಬೊಮ್ಮಾಯಿ, ಪಿ.ಸಿ.ಮೋಹನ್, ಸುಧಾಮೂರ್ತಿ ಸೇರಿ ಸರ್ವ ಪಕ್ಷಗಳ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.