ಭಟ್ಕಳ: ತಾಲೂಕಿನ ಸರ್ಪನಕಟ್ಟೆಯ ಶ್ರೀ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ ಮತ್ತು ಗುರುವಂದನೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಗುರವಂದನಾ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮೇಲುಕೋಟೆಯ ಶ್ರೀ ರಾಮಾನಜಾಚಾರ್ಯ ಸಂಸ್ಥಾನದ ಶ್ರೀ ಯತಿರಾಜ ಜೀಯರ್ ಸ್ವಾಮೀಜಿ, ಸನಾನದ ಹಿಂದೂ ಧರ್ಮದ ಮೇಲೆ ಸಾಕಷ್ಟು ದಾಳಿ ಆಗಿದ್ದರೂ ಸನಾತನ ಹಿಂದೂ ಧರ್ಮ ಇದಕ್ಕೆ ಜಗ್ಗದೇ ಗಟ್ಟಿಯಾಗಿ ನಿಂತಿದೆ. ಹಿಂದೂ ಧರ್ಮ ಶಕ್ತಿಯೇ ಅಂತಹದ್ದಾಗಿದೆ. ರಾಮಾನುಜಾಚಾರ್ಯರು ಯಾವುದೇ ಒಂದು ಪಂಥಕ್ಕೆ ಸೇರಿದವರಲ್ಲ. ಬದಲಾಗಿ ಅವರು ಹಿಂದೂ ಧರ್ಮಕ್ಕೆ ಸೇರಿದವರು. ಅಂದಿನ ಕಾಲದಲ್ಲಿ ಶೋಷಿತ ವರ್ಗವನ್ನು ಮೇಲಕ್ಕೆ ಎತ್ತುವ ಕೆಲಸ ಮಾಡಿದ್ದರು. ನಾವೆಲ್ಲರೂ ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಸರ್ಪನಕಟ್ಟೆಯಲ್ಲಿ ಶ್ರೀ ವಾಸುಕಿ ಸರ್ಪ ದೇವಸ್ಥಾನದ ಒಂದು ಪ್ರಮುಖ ಸ್ಥಳವಾಗಿ ಮಾರ್ಪಡುತ್ತಿದೆ ಎಂದರು.

ಸತೀಶ ಕುಮಾರ ನಾಯ್ಕ ಮಾತನಾಡಿ, ಸುಮಾರು 800 ವರ್ಷಗಳ ಹಿಂದೆ ರಾಮಾನುಜಾಚಾರ್ಯರು ಭಟ್ಕಳದ ನಾಮಧಾರಿ ಸಮಾಜದ ಜನರಲ್ಲಿ ಧಾರ್ಮಿಕ ಸಂಸ್ಕಾರವನ್ನು ತುಂಬಿದರು ಎಂದರು.

ವಾಸುಕಿ ಸರ್ಪ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ, ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಡಿ.ಬಿ. ನಾಯ್ಕ, ಶ್ರೀ ವೆಂಕಟೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಾಂತರಾಮ ನಾಯ್ಕ, ಎಸ್.ಎಂ. ನಾಯ್ಕ, ಎಂ.ಆರ್. ನಾಯ್ಕ, ವಕೀಲ ರಾಜೇಶ ನಾಯ್ಕ, ಸುಭಾಷ್ ಶೆಟ್ಟಿ ಮುಂತಾದವರಿದ್ದರು.


ವೆಂಕಟೇಶ ದಂಪತಿ ಶ್ರೀಗುರುಗಳ ಪಾದುಕಾ ಪೂಜೆ ನೆರವೇರಿಸಿದರು. ದೇವಸ್ಥಾನಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸ್ವಾಮೀಜಿ ಅವರನ್ನು ಬೈಕ್ ರ್ಯಾಲಿ, ಭಜನೆ, ಚಂಡೆ, ಪೂರ್ಣಕುಂಭ ಸ್ವಾಗತದ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ವರ್ಧಂತ್ಯುತ್ಸವದ ಪ್ರಯುಕ್ತ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು.