ಗದಗ : ಸ್ಥಗಿತಗೊಂಡ ಉಚಿತ ಪ್ರಯಾಣದ ಬಸ್‌ ಸಂಚಾರ - ಯೋಜನೆಯಿಂದ ವಂಚಿತವಾಗುತ್ತಿದ್ದಾರೆ ಮಹಿಳೆಯರು

KannadaprabhaNewsNetwork |  
Published : Jan 17, 2025, 12:48 AM ISTUpdated : Jan 17, 2025, 12:13 PM IST
ಶಕ್ತಿ ಯೋಜನೆಯ ಲೋಗೋ | Kannada Prabha

ಸಾರಾಂಶ

ಗಂಗಿಮಡಿ, ಎಸ್.ಎಂ. ಕೃಷ್ಣಾ ನಗರ ಸೇರಿದಂತೆ ವಿವಿಧ ಬಡವಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ವಾಸಿಸುತ್ತಿದ್ದು, ಅವರೆಲ್ಲ ನಿತ್ಯವೂ ಅವಳಿ ನಗರದ ಶ್ರೀಮಂತ ಬಡಾವಣೆಗಳಿಗೆ ಮನೆಗೆಲಸಕ್ಕೆ ತೆರಳುತ್ತಾರೆ

ಶಿವಕುಮಾರ ಕುಷ್ಟಗಿ  

ಗದಗ : ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ ಗದಗ ಬೆಟಗೇರಿ ಅವಳಿ ನಗರದಲ್ಲಿನ ಬಹುತೇಕ ಬಡ ಮಹಿಳೆಯರು ಈ ಯೋಜನೆಯಿಂದ ವಂಚಿತವಾಗುತ್ತಿದ್ದಾರೆ. ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ನಗರ ಸಾರಿಗೆ ಬಸ್ ಸೇವೆಗಳು ಸ್ಥಗಿತಗೊಂಡು ಸಂಕಷ್ಟ ಎದುರಿಸುತ್ತಿದ್ದಾರೆ.

ಎಸ್.ಎಂ.ಕೃಷ್ಣಾ ನಗರ, ಗಂಗಿಮಡಿ, ಬೆಟಗೇರಿ ನರಸಾಪೂರ, ಖಾನತೋಟ, ಆಶ್ರಯ ಕಾಲನಿ ಭಾಗಗಳಿಂದ ನಗರದ ಪ್ರಮುಖ ಬಡಾವಣೆಗಳಾದ ಹುಡ್ಕೋ ಕಾಲನಿ, ಪಂಚಾಕ್ಷರಿ ನಗರ, ಕೆ.ಸಿ.ರಾಣಿ ರಸ್ತೆ, ಹಾತಲಗೇರಿ ನಾಕಾ ಸೇರಿದಂತೆ ಮುಖ್ಯಮಾರುಕಟ್ಟೆ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ನಗರ ಸಾರಿಗೆ ಬಸ್ ಸಂಚಾರ ಈ ಹಿಂದೆ ವ್ಯಾಪಕವಾಗಿತ್ತು, ಆದರೀಗ ಸ್ಥಗಿತಗೊಂಡಿವೆ.

ಬಡವರಿಗೆ ಸಮಸ್ಯೆ: ಗಂಗಿಮಡಿ, ಎಸ್.ಎಂ. ಕೃಷ್ಣಾ ನಗರ ಸೇರಿದಂತೆ ವಿವಿಧ ಬಡವಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ವಾಸಿಸುತ್ತಿದ್ದು, ಅವರೆಲ್ಲ ನಿತ್ಯವೂ ಅವಳಿ ನಗರದ ಶ್ರೀಮಂತ ಬಡಾವಣೆಗಳಿಗೆ ಮನೆಗೆಲಸಕ್ಕೆ ತೆರಳುತ್ತಾರೆ. ಇದು ಅವರ ದುಡಿಮೆಯ ಮೂಲ ಆಗಿದೆ. ಈ ಹಿಂದೆ ಬಸ್ ಸಂಚಾರವಿದ್ದ ವೇಳೆಯಲ್ಲಿ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದರು, ಇದರಿಂದ ದುಡಿಮೆಯ ಒಂದಿಷ್ಟು ಹಣ ಉಳಿಯುತ್ತಿತ್ತು. ಬಸ್ ಸಂಚಾರ ಕೆಲವೆಡೆ ಕಡಿಮೆ, ಇನ್ನು ಕೆಲವೆಡೆ ಸ್ಥಗಿತಗೊಂಡಿದ್ದು ಇದರಿಂದ ಉಚಿತ ಯೋಜನೆ ಜಾರಿಯಲ್ಲಿದ್ದರೂ ಅದರ ಲಾಭ ಮಾತ್ರ ಅವಳಿ ನಗರದ ಮಹಿಳೆಯರಿಗೆ ಸಿಗುತ್ತಿಲ್ಲ.

ರಿಕ್ಷಾಗಳೇ ಅನಿವಾರ್ಯ: ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಮಹಿಳೆಯರು ಅನಿವಾರ್ಯವಾಗಿ ರಿಕ್ಷಾಗಳನ್ನು ಅವಲಂಬಿಸಿದ್ದಾರೆ. ಡಿಸೈಲ್ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಕನಿಷ್ಠ ದರ ₹20ಗೆ ನಿಗದಿ ಮಾಡಿದ್ದಾರೆ. ಹಾಗಾಗಿ ಮಹಿಳೆಯರು ನಾಲ್ಕಾರು ಮನೆಗಳ ಕೆಲಸ ಮಾಡಿ ಬರುವ ಅಲ್ಪ ಹಣದಲ್ಲಿಯೇ ಸಂಚಾರಕ್ಕಾಗಿಯೇ ಹೆಚ್ಚಿನ ಹಣ ಖರ್ಚು ಮಾಡುವ ಸ್ಥಿತಿ ಅವಳಿ ನಗರದಲ್ಲಿ ನಿರ್ಮಾಣವಾಗಿದೆ.

ಎಲ್ಲರಿಗೂ ಸಮಸ್ಯೆ: ಈ ಹಿಂದೆ ನರಸಾಪುರ ಭಾಗದಿಂದ ಹೊರಡುವ ಬಸ್ ಗಳಲ್ಲಿ ಕೆಲವೊಂದಿಷ್ಟು ಬಳ್ಳಾರಿ ಗೇಟ್ ಮೂಲಕ, ಇನ್ನೊಂದಿಷ್ಟು ಬಸ್ ಬೆಟಗೇರಿ ಬಸ್ ನಿಲ್ದಾಣ, ಜರ್ಮನ್ ಆಸ್ಪತ್ರೆ, ಹೆಲ್ತ್‌ ಕ್ಯಾಂಪ್, ಗಾಂಧಿ ವೃತ್ತ, ಟಾಂಗಾಕೂಟ ಮೂಲಕ ಹಳೆಯ ಬಸ್ ನಿಲ್ದಾಣ ಅಲ್ಲಿಂದ ಹೊಸ ಬಸ್ ನಿಲ್ದಾಣ, ಹಳೇ ಜಿಲ್ಲಾಧಿಕಾರಿ ಕಚೇರಿ, ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಸ್ಪತ್ರೆ ತಲುಪುತ್ತಿದ್ದವು, ಆದರೀಗ ಬೆಟಗೇರಿ ಬಸ್ ನಿಲ್ದಾಣದಿಂದ ಜಿಲ್ಲಾಸ್ಪತ್ರೆಗೆ ಮಾತ್ರ ನಗರ ಸಾರಿಗೆ ಬಸ್ ಸಂಚಾರ ನಡೆಯುತ್ತಿದೆ. ಬಹುತೇಕ ಬಡಾವಾವಣೆ ನಗರ ಸಾರಿಗೆ ಬಸ್ ಸಂಚಾರದಿಂದ ವಂಚಿತವಾಗಿದ್ದು, ಇದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ.

ಸಾರಿಗೆ ಸೌಲಭ್ಯ ವಿಸ್ತರಿಸಿ: ಪಂಚ ಗ್ಯಾರಂಟಿ ಯೋಜನೆ ಸಾರ್ವಜನಿಕರ ಜೀವನ ಮಟ್ಟ ಸುಧಾರಿಸಿವೆ, ಬಡತನ ರೇಖೆಗಿಂತ ಅವರನ್ನು ಮೇಲೆತ್ತಲು ಹೆಚ್ಚು ಸಹಕಾರಿಯಾಗಿವೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕೂಡಲೇ ಗಮನ ಹರಿಸಿ, ಬಡವರು ವಾಸಿಸುವ ಬಡಾವಣೆಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯ ವಿಸ್ತರಿಸಿದಲ್ಲಿ ಸಾಕಷ್ಟು ಅನುಕೂಲವಾಗುತ್ತದೆ. ಈ ಕುರಿತು ಗಮನ ಹರಿಸಬೇಕು ಎನ್ನುವುದು ಬಹುತೇಕ ಬಡಾವಣೆ ನಿವಾಸಿಗಳ ಒತ್ತಾಸೆಯಾಗಿದೆ.

ಸದ್ಯಕ್ಕೆ ನಗರ ಸಾರಿಗೆ ಯಾವುದೇ ಬಸ್ ಸೌಲಭ್ಯ ಕಡಿತಗೊಳಿಸಿಲ್ಲ, ಆದರೆ ಎಸ್.ಎಂ. ಕೃಷ್ಣಾ ಮತ್ತು ಗಂಗಿಮಡಿ ಭಾಗಕ್ಕೆ ಹೆಚ್ಚಿನ ಬಸ್ ಸೌಲಭ್ಯಕ್ಕಾಗಿ ಅರ್ಜಿ ಬಂದಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಗದಗ ಕೆಎಸ್ಆರ್‌ಟಿಸಿ ಡಿಸಿ ಡಿ.ಎಂ.ದೇವರಾಜ ತಿಳಿಸಿದ್ದಾರೆ.

ಎಸ್.ಎಂ.ಕೃಷ್ಣಾ ನಗರದಲ್ಲಿ ಅತೀ ಹೆಚ್ಚು ದುಡಿವ ಜನರಿದ್ದಾರೆ. ಅಲ್ಲಿಗೆ ನಗರ ಸಾರಿಗೆಯ ಬಸ್ ವ್ಯವಸ್ಥೆ ಇಲ್ಲ, ಇದರಿಂದ ಶಕ್ತಿ ಯೋಜನೆ ಇದ್ದೂ ಇಲ್ಲದಂತಾಗಿದೆ. ನಾವು ನಿತ್ಯವೂ ಹಣ ಕೊಟ್ಟೇ ಪ್ರಯಾಣ ಮಾಡುವಂತಾಗಿದೆ. ಈ ಹಿಂದೆ ಗದಗ ಬೆಟಗೇರಿ ಅವಳಿ ನಗರದಲ್ಲಿ ಸಂಚರಿಸುತ್ತಿದ್ದ ಎಲ್ಲ ನಗರ ಸಾರಿಗೆ ಬಸ್ ಮತ್ತೆ ಪ್ರಾರಂಭಿಸಿ, ಬಡವರಿಗೆ ಅನುಕೂಲ ಕಲ್ಪಿಸಬೇಕು ಎಂದು ಎಸ್.ಎಂ.ಕೃಷ್ಣಾ ನಗರದ ನಿವಾಸಿ ಶಿವಲೀಲಾ ಗದುಗೀನ ಹೇಳಿದ್ದಾರೆ.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ