ರಾಣಿಬೆನ್ನೂರು: ಬಸ್ ನಿಲ್ಲಿಸಲು ಹೇಳಿದ ವಿದ್ಯಾರ್ಥಿಗಳ ಮೇಲೆ ಹಾರಿಹಾಯ್ದು ಅವಾಚ್ಯ ಪದಗಳಿಂದ ನಿಂದಿಸಿದ ಡ್ರೈವರ್ ನಡೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ಮಂಗಳವಾರ ನಗರದ ಮಾಗೋಡ ರಸ್ತೆ ಬಳಿ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಡಿಪೋದಿಂದ ಖಾಲಿ ತೆರಳುತ್ತಿದ್ದ ಬಸ್‌ಗಳನ್ನು ನಿಲ್ಲಿಸಲು ಮುಂದಾಗಿದ್ದರು. ಆಗ ಕೆಲವು ಬಸ್‌ಗಳವರು ಕಂಡಕ್ಟರ್ ಇಲ್ಲವೆಂಬ ಸಬೂಬು ಹೇಳಿ ಬಸ್ ನಿಲುಗಡೆ ಮಾಡದೇ ತೆರಳಿದ್ದರು. ಆಗ ವಿದ್ಯಾರ್ಥಿಗಳು ಮತ್ತೊಂದು ಬಸ್ ನಿಲ್ಲಿಸುವಂತೆ ಕೋರಿದಾಗ ಅದರ ಡ್ರೈವರ್ ಬಸ್ ನಿಲ್ಲಿಸದೇ ಮುಂದೆ ಸಾಗಿದ್ದಲ್ಲದೇ ವಿದ್ಯಾರ್ಥಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಇದರಿಂದ ಕೆರಳಿದ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಕಳೆದ ಎರಡು ತಿಂಗಳ ಹಿಂದೆ ಎಸ್‌ಎಫ್‌ಐ ಹೋರಾಟದ ಪರಿಣಾಮವಾಗಿ ಡಿಪೋದಿಂದ ಬಸ್ ನಿಲ್ದಾಣಕ್ಕೆ ಖಾಲಿ ತೆರಳುವ ಬಸ್‌ಗಳಿಗೆ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಬೇಕು ಆದೇಶ ಮಾಡಲಾಗಿದೆ. ಆದರೆ ಈ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗದಿರುವುದು ಹಾಗೂ ನಿಲ್ಲಿಸಲು ಮುಂದಾದ ವಿದ್ಯಾರ್ಥಿಗಳ ಮೈ ಮೇಲೆ ಬಸ್ ಓಡಿಸುವುದಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿರುವುದು ಖಂಡನಾರ್ಹ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಗಳು ಇಂದಿನ ಘಟನೆಗೆ ಕಾರಣರಾದ ಡ್ರೈವರ್, ಕಂಡಕ್ಟರ್ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಕಡ್ಡಾಯವಾಗಿ ಮಾಗೋಡ ಕ್ರಾಸ್‌ನಲ್ಲಿ ಎಲ್ಲಾ ಬಸ್ ನಿಲುಗಡೆ ನೀಡಬೇಕು. ಇಲ್ಲವಾದರೆ ಬಸ್ ನಿಲ್ದಾಣ ಬಂದ್ ಮಾಡಿ ತೀವ್ರ ತೆರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ವಿಷಯ ತಿಳಿದು ಪ್ರತಿಭಟನಾಕಾರರ ಜತೆ ದೂರವಾಣಿಯಲ್ಲಿ ಮಾತನಾಡಿದ ಡಿಪೋ ಮ್ಯಾನೇಜರ್ ಸಂಬಂಧಿಸಿದ ಪ್ರಕರಣವನ್ನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಕಡ್ಡಾಯವಾಗಿ ಬಸ್‌ಗಳನ್ನು ನಿಲ್ಲಿಸಲು ಕೂಡಲೇ ಆದೇಶ ಹೊರಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗಿರೀಶ ಬಣಕಾರ, ಕಿರಣಕುಮಾರ ಎಸ್., ಅನಿಲಕುಮಾರ ಮನವಳ್ಳಿ, ನಾಗರಡ್ಡಿ ಗೋಡಿಹಾಳ, ರಮೇಶ ಕೋಡಿಹಳ್ಳಿ, ಗುರುಪಾದಗೌಡ ಹಲಸೂರ, ವೀರೇಶ ಕರೆಯಣ್ಣನವರ, ಹನುಮಂತ ಹರಿಜನ, ಅಜೇಯ, ಮುತ್ತಯ್ಯ, ನಾಗರಾಜ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.