ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.31ರಿಂದ ಬಸ್‌ ಮುಷ್ಕರ: ತಡೆಗೆ ಸರ್ಕಾರ ಕಸರತ್ತು

KannadaprabhaNewsNetwork | Updated : Dec 29 2024, 05:09 AM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಡಿ.31ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ತಡೆಯಲು ಸಾರಿಗೆ ಇಲಾಖೆ ಸರ್ವ ಪ್ರಯತ್ನ ಆರಂಭಿಸಿದೆ. ಈ ಸಂಬಂಧ ಶನಿವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಸ್ ಮುಷ್ಕರ ತಡೆಯುವ ಕುರಿತು ಚರ್ಚಿಸಲಾಯಿತು.

 ಬೆಂಗಳೂರು :  ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಡಿ.31ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ತಡೆಯಲು ಸಾರಿಗೆ ಇಲಾಖೆ ಸರ್ವ ಪ್ರಯತ್ನ ಆರಂಭಿಸಿದೆ. ಈ ಸಂಬಂಧ ಶನಿವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಸ್ ಮುಷ್ಕರ ತಡೆಯುವ ಕುರಿತು ಚರ್ಚಿಸಲಾಯಿತು.

ವೇತನ ಹೆಚ್ಚಳ, ವೇತನ ಹೆಚ್ಚಳ ಬಾಕಿ ಮತ್ತಿತರ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ನೌಕರರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮುಷ್ಕರ ತಡೆಯುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಲ್ಲ ನಾಲ್ಕೂ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರೂ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚೆ ನಡೆಸಿದರು.

ಸಭೆಯಲ್ಲಿ ನಿಗಮಗಳ ಆರ್ಥಿಕ ಪರಿಸ್ಥಿತಿ ಸೇರಿ ನೌಕರ ಸಂಘಟನೆಗಳ ಬೇಡಿಕೆಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಆದರೆ, ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳ ಮನವೊಲಿಕೆಗೆ ಸ್ಪಷ್ಟವಾಗಿ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಮಾತ್ರ ಅಂತಿಮ ನಿರ್ಧಾರ ಸಭೆ ತೆಗೆದುಕೊಂಡಿಲ್ಲ. ಬದಲಿಗೆ ಮುಷ್ಕರಕ್ಕೆ ಕರೆ ನೀಡಿರುವ ನಾಯಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಮಾಡಿಸುವ ಬಗ್ಗೆ ಚರ್ಚಿಸಲಾಯಿತು. ಹೀಗಾಗಿ ಅವಕಾಶ ನೀಡಿದರೆ ಸೋಮವಾರ ಸಂಜೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಧಾನ ಸಭೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಎಸ್ಮಾ ಅವಧಿ ವಿಸ್ತರಣೆ:

ಸಾರಿಗೆ ನೌಕರರು ಮುಷ್ಕರ ನಡೆಸುವುದನ್ನು ತಡೆಯಲು ಸಾರಿಗೆ ನಿಗಮಗಳು ಎಸ್ಮಾ ಅಸ್ತ್ರ ಬಳಸುತ್ತಿವೆ. ಕಳೆದ ಕೆಲ ತಿಂಗಳ ಹಿಂದೆ 6 ತಿಂಗಳ ಅವಧಿವರೆಗೆ ನೌಕರರು ಯಾವುದೇ ಪ್ರತಿಭಟನೆ ನಡೆಸದಂತೆ ನಿರ್ಬಂಧ ಹೇರಲು ಎಸ್ಮಾ ಜಾರಿ ಮಾಡಲಾಗಿತ್ತು. ಇದೀಗ ಆ ಅವಧಿಯನ್ನು ಮುಂದಿನ 6 ತಿಂಗಳಿಗೆ ಮತ್ತೆ ವಿಸ್ತರಿಸಿ ಆದೇಶಿಸಲಾಗಿದೆ.

ಬಿಎಂಟಿಸಿಯಿಂದ ಈ ಆದೇಶ ಹೊರಡಿಸಿದ್ದು, ಬಸ್‌ ಸೇವೆಯು ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ ಅಡಿ ಬರಲಿದೆ. ಹೀಗಾಗಿ ಜ.1ರಿಂದ ಮುಂದಿನ 6 ತಿಂಗಳವರೆಗೆ ನಿಗಮದ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

30ರಂದು ಸಂಧಾನ ಸಭೆ

ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಸಂಬಂಧ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕಾರ್ಮಿಕ ಇಲಾಖೆಗೂ ಮುಷ್ಕರದ ನೋಟಿಸ್ ನೀಡಿತ್ತು. ಆ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರು ಜಂಟಿ ಕ್ರಿಯಾ ಸಮಿತಿ ಮುಖಂಡರು ಹಾಗೂ ನಾಲ್ಕೂ ನಿಗಮಗಳ ಅಧಿಕಾರಗಳೊಂದಿಗೆ ಸಂಧಾನ ಸಭೆ ನಡೆಸಲಿದ್ದಾರೆ.

ಮುಷ್ಕರ ತಡೆಯಲು ಎಲ್ಲಾ ರೀತಿಯ ಕ್ರಮ

ಎಲ್ಲ ನಾಲ್ಕೂ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ನೌಕರ ಸಂಘಟನೆಗಳು ಮುಷ್ಕರದಿಂದ ಹಿಂದೆ ಸರಿಯುವಂತೆ ಈಗಾಗಲೇ ಮನವಿ ಮಾಡಿದ್ದೇನೆ. ಅವರಿಗೂ ನಿಗಮಗಳ ಆರ್ಥಿಕ ಪರಿಸ್ಥಿತಿಯ ಅರಿವಿದೆ. ಹೀಗಾಗಿ ಮುಷ್ಕರ ಮಾಡದಂತೆ ಕೋರಿದ್ದು, ಮುಷ್ಕರ ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ.

-ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ.

Share this article