ಬಳ್ಳಾರಿ ಜನರಿಗೆ ಬೇಕಾಗಿರುವುದು ಬಸ್‌ಗಳು; ವಿಮಾನ ನಿಲ್ದಾಣವಲ್ಲ

KannadaprabhaNewsNetwork | Published : Oct 27, 2024 2:17 AM

ಸಾರಾಂಶ

ಬಳ್ಳಾರಿಯ ಜನರಿಗೆ ಇಂದಿಗೂ ಸಮರ್ಪಕ ಬಸ್ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ.

ಬಳ್ಳಾರಿ: ಬಳ್ಳಾರಿಗೆ ವಿಮಾನ ನಿಲ್ದಾಣ ಬೇಕು ಎಂದು ಯಾರು ಅರ್ಜಿ ಹಾಕಿದ್ದಾರೆ? ರೈತರ ಕೃಷಿ ಜಮೀನಿನಲ್ಲಿ ನಿಲ್ದಾಣ ನಿರ್ಮಿಸುವುದು ಯಾರ ಹಿತ ಕಾಯಲು? ಎಂದು ಶಾಸಕ ಬಿ.ಆರ್. ಪಾಟೀಲ್ ಪ್ರಶ್ನಿಸಿದ್ದಾರೆ.

ನಗರದ ರಾಘವ ಕಲಾಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರಥಮ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬಳ್ಳಾರಿಯ ಜನರಿಗೆ ಇಂದಿಗೂ ಸಮರ್ಪಕ ಬಸ್ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಈ ಊರಲ್ಲಿ ವಿಮಾನ ನಿಲ್ದಾಣ ಮಾಡುವುದು ಯಾರ ಹಿತ ಕಾಯಲು? ಇದರಿಂದಾಗುವ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ರೈತರ ಹಿತ ಕಾಯುವ ಬದಲು ಅನ್ನದಾತರ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಅನ್ನದಾತರನ್ನು ಸಂಕಷ್ಟಕ್ಕೆ ದೂಡುವ ಕೇಂದ್ರದ ಹುನ್ನಾರವನ್ನು ಪ್ರತಿ ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಭೂಮಿಯನ್ನು ಕಬಳಿಸಿ ಬಂಡವಾಳಶಾಹಿಗಳಿಗೆ, ಕಾರ್ಪೊರೇಟ್‌ ಕಂಪನಿಗಳಿಗೆ ಮಾರುತ್ತಿದೆ. ಗ್ರೇಟರ್‌ ಬೆಂಗಳೂರುನಂತಹ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಪರಭಾರೆ ಮಾಡುತ್ತಿರುವುದು ವಿಪರ್ಯಾಸ ಎಂದರು.

ಆಂಧ್ರಪ್ರದೇಶದ ಎಸ್‌.ಝಾನ್ಸಿ ಹನುಮೇಗೌಡ ಮಾತನಾಡಿ, ಕರ್ನಾಟಕದ ರೈತ ಸಂಘದ ಇತಿಹಾಸವು ಇಡೀ ದಕ್ಷಿಣ ಭಾರತದ ರೈತ ಕೃಷಿ ಕೂಲಿಕಾರರ ಹೋರಾಟಕ್ಕೆ ಸ್ಫೂರ್ತಿಯಾಗಿದೆ. ಇಂದಿನ ಕಾರ್ಪೊರೇಟ್‌ ಪರ ನೀತಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರಗಳ ವಿರುದ್ಧ ಹೋರಾಡಲು ಪ್ರತಿ ಹಳ್ಳಿಯಲ್ಲೂ ರೈತರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ರೈತರ ಹೋರಾಟ ಕೆಚ್ಚೆದೆಯ ಹೋರಾಟದ ಫಲವಾಗಿ ವಿಮಾನ ನಿಲ್ದಾಣಕ್ಕೆ ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಇಂದಿಗೂ ಇಟ್ಟಿಗೆ, ಸಿಮೆಂಟ್‌ ಹಾಕಲು ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ರೈತ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಅವರ ಹೋರಾಟದ ದಿನಗಳನ್ನು ಸ್ಮರಿಸಿಕೊಂಡರು.

ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಧ್ವಜಾರೋಹಣವನ್ನು ಗೌರವಾಧ್ಯಕ್ಷ ರಘುನಾಥ್‌ ನೆರವೇರಿಸಿದರು. ಸಮ್ಮೇಳನದಲ್ಲಿ ರಾಜ್ಯದ ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು, ರಾಯಚೂರು, ಕೊಪ್ಪಳ ಜಿಲ್ಲೆಗಳ ನೂರಾರು ರೈತರು ಭಾಗವಹಿಸಿದ್ದರು.

ಸಮ್ಮೇಳನಕ್ಕೂ ಮುನ್ನ ದುರುಗಮ್ಮ ದೇವಸ್ಥಾನದಿಂದ ರಾಘವ ಕಲಾ ಮಂದಿರದ ವರೆಗೆ ರೈತರಿಂದ ಬೃಹತ್‌ ರ‍್ಯಾಲಿ ನಡೆಯಿತು.

ರಾಜ್ಯದ ಎಲ್ಲ ಜಿಲ್ಲೆಗಳ ರೈತರಿಗೆ 210 ಕೆವಿ ವಿದ್ಯುತ್‌ ಪೂರೈಸಬೇಕು. ಕನಿಷ್ಠ ಬೆಂಬಲ ಬೆಲೆ ಪರಿಷ್ಕರಿಸಿ ಜಾರಿಗೊಳಿಸಬೇಕು. ಕೈಗಾರಿಕಾಭಿವೃದ್ಧಿಗಾಗಿ ವಶಪಡಿಸಿಕೊಂಡು ಖಾಲಿ ಉಳಿಸಿಕೊಂಡಿರುವ ಭೂಮಿಯನ್ನು ಭೂ ರಹಿತರಿಗೆ ಹಂಚಬೇಕು. ಬಳ್ಳಾರಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಶೀಘ್ರ ಪ್ರಾರಂಭಿಸಬೇಕು ಸೇರಿದಂತೆ ಅನೇಕ ನಿರ್ಣಯಗಳನ್ನು ಸಮ್ಮೇಳನ ಕೈಗೊಂಡಿತು.

Share this article