ಹಾನಗಲ್ಲನಲ್ಲಿ ಚಾಲಕರ ಉಸಿರು ಪರೀಕ್ಷೆಯ ಬಳಿಕವೇ ರಸ್ತೆಗೆ ಇಳಿಯುವ ಬಸ್‌ಗಳು

KannadaprabhaNewsNetwork |  
Published : Apr 09, 2024, 12:45 AM IST
ಫೋಟೋ : ೮ಎಚ್‌ಎನ್‌ಎಲ್೩ | Kannada Prabha

ಸಾರಾಂಶ

ಚಾಲಕರ ಉಸಿರು ಪರೀಕ್ಷೆ ಮಾಡಿಯೇ ಬಸ್‌ಗಳನ್ನು ರಸ್ತೆಗೆ ಬಿಡುವ ಸುರಕ್ಷಿತ ಯೋಜನೆಯೊಂದು ಹಾನಗಲ್ಲ ಬಸ್ ಡಿಪೋದಲ್ಲಿ ಕಳೆದ ೨ ತಿಂಗಳಿಂದ ಆರಂಭವಾಗಿದ್ದು, ಇದರಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌ ಕೇಸುಗಳು ಕಡಿಮೆಯಾಗಿವೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಚಾಲಕರ ಉಸಿರು ಪರೀಕ್ಷೆ ಮಾಡಿಯೇ ಬಸ್‌ಗಳನ್ನು ರಸ್ತೆಗೆ ಬಿಡುವ ಸುರಕ್ಷಿತ ಯೋಜನೆಯೊಂದು ಹಾನಗಲ್ಲ ಬಸ್ ಡಿಪೋದಲ್ಲಿ ಕಳೆದ ೨ ತಿಂಗಳಿಂದ ಆರಂಭವಾಗಿದ್ದು, ಇದರಿಂದ ಡ್ರಂಕ್‌ ಆ್ಯಂಡ್‌ ಡ್ರೈವ್‌ ಕೇಸುಗಳು ಕಡಿಮೆಯಾಗಿವೆ.

ಹಾನಗಲ್ಲ ಬಸ್ ಡಿಪೋದಲ್ಲಿ ೯೨ ಬಸ್ಸುಗಳಿವೆ. ೮೪ ಶೆಡ್ಯುಲ್‌ಗಳಲ್ಲಿ ಬಸ್‌ಗಳು ಸಂಚರಿಸುತ್ತವೆ. ೨೭೭ ಚಾಲಕರು ಇಲ್ಲಿದ್ದಾರೆ. ೮೫ ಕಂಡಕ್ಟರ್ ಇದ್ದಾರೆ. ಪ್ರತಿ ದಿನ ಬಸ್‌ಗಳು ಡಿಪೋದಿಂದ ಹೊರಗೆ ಹೋಗುವಾಗ ಎಲ್ಲ ಚಾಲಕರ ಉಸಿರು ಪರೀಕ್ಷೆ ಮಾಡಿಯೇ ಬಸ್ ಓಡಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಒಂದೂ ದಿನ ಒಬ್ಬ ಚಾಲಕರೂ ಕೂಡ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ವರದಿಯಾಗಿಲ್ಲ. ಇದು ಹಾನಗಲ್ಲ ಬಸ್ ಡಿಪೋದ ಚಾಲಕರ ಹೆಗ್ಗಳಿಕೆ ಮತ್ತು ಪ್ರಶಂಸೆಯ ಸಂಗತಿ.

ಅಪಘಾತ ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ಅಂತಹ ಪ್ರಕರಣ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ತೀರ್ಮಾನ ಕೆಎಸ್‌ಆರ್‌ಟಿಸಿಯದ್ದಾಗಿದೆ. ಈ ಮೊದಲು ಕೂಡ ಉಸಿರು ಪರೀಕ್ಷಿಸುವ ಕ್ರಮವಿತ್ತು. ಆದರೆ ಅದು ಕೇವಲ ಇನಸ್ಪೆಕ್ಟರ್ ಕಡೆ ಮಾತ್ರ ಇರುತ್ತಿತ್ತು. ಚಲಿಸುವ ಬಸ್ ನಿಲ್ಲಿಸಿ ಚಾಲಕರ ಪರೀಕ್ಷೆ ಮಾಡುತ್ತಿದ್ದರು. ಅದು ಎಲ್ಲ ಚಾಲಕರನ್ನು ಪರೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಎಲ್ಲ ಚಾಲಕರ ಪರೀಕ್ಷೆ ನಡೆಯುತ್ತದೆ. ಅಂತೂ ಇದು ಪ್ರಯಾಣಿಕರ ಕಾಳಜಿಗೆ ಪ್ರಶಂಸನೀಯವಾಗಿದೆ.ದೊಡ್ಡ ತಾಲೂಕು: ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕಾಗಿರುವ ಹಾನಗಲ್ಲನಲ್ಲಿ ೧೬೬ ಹಳ್ಳಿಗಳಿವೆ. ಎಲ್ಲ ಹಳ್ಳಿಗಳಿಗೂ ಬಸ್ ವ್ಯವಸ್ಥೆ ಇದೆ. ಎರಡು ತಿಂಗಳ ಹಿಂದೆ ೮ ಹೊಸ ಬಸ್‌ಗಳು ಬಂದಿದ್ದರಿಂದ ಅಷ್ಟಾಗಿ ಬಸ್ ಕೊರತೆ ಇಲ್ಲ. ಆದರೂ ಇನ್ನೂ ಹತ್ತು ಬಸ್‌ಗಳ ಅಗತ್ಯವಿದೆ. ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಗಲ್ಲದೆ, ಹೊರ ರಾಜ್ಯದ ತಿರುಪತಿ, ಹೈದರಾಬಾದ, ನಾಸಿಕ, ಮುಂಬೈ, ಬೆಂಗಳೂರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿಗೆ ಎರಡು ರಾಜ ಹಂಸ, ಎರಡು ಸ್ಲೀಪರ್ ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತಿದೆ.೩೦ಕ್ಕೂ ಅಧಿಕ ಮೆಕ್ಯಾನಿಕ್ ಕಾರ್ಮಿಕರು ಇಲ್ಲಿರುವುದರಿಂದ ಯಾವುದೇ ಬಸ್‌ಗಳು ತೊಂದರೆ ಇಲ್ಲದೆ ಚಾಲನೆಗೆ ಸಜ್ಜಗೊಳಿಸುತ್ತಾರೆ. ಹಾನಗಲ್ಲ ಬಸ್ ಡಿಪೋಗೆ ಪ್ರತಿ ತಿಂಗಳು ೪.೫ ಕೋಟಿ ರು. ಆದಾಯವಿದೆ. ಇದರಲ್ಲಿ ಸರಕಾರದ ಶಕ್ತಿ ಯೋಜನೆಯಿಂದಲೇ ೨.೭೦ ಕೋಟಿ ರು. ಸಂಗ್ರಹವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಿಪೋ ಲಾಭದಲ್ಲಿದೆ ಎನ್ನಲಾಗಿದೆ. ಶಕ್ತಿ ಯೋಜನೆಗಿಂತ ಮೊದಲು ಡಿಪೋ ನಿರೀಕ್ಷಿತ ಲಾಭದಲ್ಲಿರಲಿಲ್ಲ.ಹಾನಗಲ್ಲ ತಾಲೂಕಿನಲ್ಲಿ ಹೆಚ್ಚು ಗ್ರಾಮಗಳಿರುವುದರಿಂದ ಹೆಚ್ಚು ಬಸ್‌ಗಳು ಅಗತ್ಯವಿದೆ. ಸದ್ಯಕ್ಕೆ ಇರುವ ಬಸ್‌ಗಳಲ್ಲಿಯೇ ಎಲ್ಲ ಸರಿದೂಗಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಇನ್ನೂ ಹತ್ತು ಬಸ್ ಬಂದರೆ ಎಲ್ಲವೂ ಸರಿಯಾಗಿರುತ್ತದೆ. ಮದ್ಯಪಾನ ರಹಿತವಾಗಿ ಚಾಲಕರು ಬಸ್ ಓಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ತಪ್ಪಿದರೆ ಕ್ರಮ ಅನಿವಾರ್ಯ ಎಂದು ಡಿಪೋ ಮ್ಯಾನೇಜರ್‌ ಎಚ್.ಡಿ. ಜಾವೂರ ಹೇಳಿದರು.

ಹಾನಗಲ್ಲ ಬಸ್ ಡಿಪೋ ಪ್ರಯಾಣಿಕರಿಗೆ ಒಳ್ಳೆಯ ಸೇವೆ ನೀಡುತ್ತಿದೆ. ಈಗ್ ಬಸ್‌ಗಳ ಕೊರತೆಯೂ ಅಷ್ಟಾಗಿ ಇಲ್ಲ. ಈಗ ಬಂದಿರುವ ಚಾಲಕರ ಉಸಿರು ಪರೀಕ್ಷಿಸುವ ಕ್ರಮ ಒಳ್ಳೆಯದೇ. ಇದರಿಂದ ಚಾಲಕರೂ ಕೂಡ ಮದ್ಯಪಾನದಿಂದ ದೂರವಿರಲು ಸಾಧ್ಯವಾಗಿದೆ. ಪ್ರಯಾಣಿಕರ ಹಿತ ದೃಷ್ಟಿಯಿಂದಲೂ ಇದು ಒಳ್ಳೆಯ ಕ್ರಮವೇ ಆಗಿದೆ. ಕಾಲ ಕಾಲಕ್ಕೆ ಬಂದ ಬದಲಾವಣೆಗೆ ನೌಕರರು ಹೊಂದಿಕೊಳ್ಳಲೇಬೇಕು. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗಿದೆ ಎಂದು ಬಸ್‌ ಚಾಲಕ ಬಸಣ್ಣ ಕಲ್ಲಾಪುರ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ